ರಾಜ್ಯ ಸರ್ಕಾರವೇ ಗುತ್ತಿಗೆದಾರರ ಪೂರ್ತಿ ಹಣ ನೀಡಲಿದೆ
ಬೆಂಗಳೂರು:ತಮ್ಮ 2013-2018 ರ ಆಡಳಿತಾವಧಿಯಲ್ಲಾಗಲೀ, ಈ ಅವಧಿಯಲ್ಲಾಗಲೀ ಯಾರಾದರೂ ನನಗೆ ಲಂಚ ಕೊಟ್ಟಿದ್ದು ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಸವಾಲು ಹಾಕಿದರು.
ಗುತ್ತಿಗೆದಾರರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಸಣ್ಣ ಗುತ್ತಿಗೆದಾರರ ಅನುಕೂಲಕ್ಕಾಗಿ 4 ಸಾವಿರ ಕೋಟಿ ರೂ. ಕಾಮಗಾರಿಯನ್ನು ಪ್ಯಾಕೇಜ್ ಇಲ್ಲದೆ ನೀಡಲು ಲೋಕೋಪಯೋಗಿ ಸಚಿವರಿಗೆ ಸೂಚಿಸಲಾಗಿದೆ ಎಂದರು.
ಪ್ಯಾಕೇಜ್ ಪದ್ಧತಿ ರದ್ದು ಹಾಗೂ ಬಾಕಿ ಮೊತ್ತ ಪಾವತಿ ಸೇರಿದಂತೆ ಗುತ್ತಿಗೆದಾರರ ವಿವಿಧ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವುದಾಗಿ ಭರವಸೆ ನೀಡಿದರು.
ಕೇಂದ್ರದ ಅಸಹಕಾರ
ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ನೀಡುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್‌ನಲ್ಲೇ ಘೋಷಿಸಿದ್ದರೂ, ಇದುವರೆಗೂ ಒಂದು ರೂಪಾಯಿಯನ್ನೂ ಕೊಟ್ಟಿಲ್ಲ, ಕೇಂದ್ರ ಸರ್ಕಾರ ಎಷ್ಟೇ ಅಸಹಕಾರ ತೋರಿದರೂ ಗುತ್ತಿಗೆದಾರರ ಪೂರ್ತಿ ಹಣವನ್ನು ರಾಜ್ಯ ಸರ್ಕಾರವೇ ಹಂತ ಹಂತವಾಗಿ ಪಾವತಿಸಲಿದೆ ಎಂದರು.