ದೇಶದ್ರೋಹಿ ಪ್ರಕರಣ ದಾಖಲು
ಬೆಂಗಳೂರು:ರಾಜ್ಯಸಭಾ ಚುನಾವಣೆ ಸಂಭ್ರಮಾಚರಣೆ ಸಂದರ್ಭದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪಿಗಳಲ್ಲಿ ಒಬ್ಬರಾದ ಮೊಹಮ್ಮದ್ ನಾಸಿಪುಡಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಕಾಂಕ್ಷಿಯಾಗಿದ್ದರು.
ಮುಂಬೈ ಕರ್ನಾಟಕದಲ್ಲಿ ಮೆಣಸಿನಕಾಯಿ ವ್ಯಾಪಾರದ ದೊಡ್ಡ ಉದ್ದಿಮೆದಾರರಾದ ನಾಸಿಪುಡಿ, ಹಾವೇರಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರಲ್ಲದೆ, ಚುನಾವಣಾ ಸಿದ್ಧತೆ ಮಾಡಿಕೊಂಡಿದ್ದರು.
ಇವರ ಚುನಾವಣಾ ರಾಜಕೀಯಕ್ಕೆ ಅವಕಾಶ ಮಾಡಿಕೊಡಲು ದೆಹಲಿ ನಾಯಕರ ಆಶೀರ್ವಾದ ಇತ್ತಂತೆ, ಜೊತೆಗೆ ಹಾಲಿ ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್ ಇವರ ಬೆನ್ನೆಲುಬಾಗಿದ್ದರು.
ಮೆಣಸಿನಕಾಯಿ ದೊಡ್ಡ ವ್ಯಾಪಾರಿ
ಈ ಉದ್ದಿಮೆದಾರ ಧಾರವಾಡ, ಹಾವೇರಿ, ಗದಗನಲ್ಲಿ ಮೆಣಸಿನಕಾಯಿಯ ದೊಡ್ಡ ವ್ಯಾಪಾರಿಯಲ್ಲದೆ, ವಿದೇಶಗಳಿಗೂ ರಫ್ತು ಮಾಡುತ್ತಿದ್ದರಂತೆ.
ಮೆಣಸಿನಕಾಯಿ ವ್ಯಾಪಾರಿಯಾಗಿದ್ದರಿಂದ ಒಳ್ಳೆ ಜನಸಂಪರ್ಕ ಇದ್ದು, ಈ ಬಾರಿ ಟಿಕೆಟ್ ಪಡೆದು ಲೋಕಸಭಾ ಪ್ರವೇಶ ಕನಸು ಕಂಡಿದ್ದ ನಾಸಿಪುಡಿ ಪೊಲೀಸರ ವಶಕ್ಕೆ ಬಂದಿದ್ದಾರೆ.
ಜೈಕಾರ ಹಾಕಿದ್ದು ಮುಳುವಾಯಿತು
ಸ್ಥಳೀಯ ಮಟ್ಟದಲ್ಲಿ ಕಾಂಗ್ರೆಸ್ ನಾಯಕರಾಗಿ ಹೆಸರು ಮಾಡಿದ್ದ ನಾಸಿಪುಡಿ, ತಮ್ಮ ನಾಯಕ ಹಾಗೂ ಆಪ್ತ ನಾಸೀರ್ ಅಹಮದ್ ಎರಡನೇ ಬಾರಿ ರಾಜ್ಯಸಭೆಗೆ ಆಯ್ಕೆಗೊಂಡ ಸಂಭ್ರಮದಲ್ಲಿ ತಮ್ಮ ಬೆಂಬಲಿಗರ ಜೊತೆ, ಜಯಗಳಿಸಿದ ಅಭ್ಯರ್ಥಿ ಮತ್ತು ಪಾಕಿಸ್ತಾನ ಪರ ಜೈಕಾರ ಹಾಕಿದ್ದು ಇದೀಗ ಮುಳುವಾಗಿದೆ. ನಾಸಿಪುಡಿ ಜೊತೆಗೆ ಇನ್ನೂ ಇಬ್ಬರು ಪಾಕ್ ಪರ ಜೈಕಾರ ಹಾಕಿ ಕಂಬಿ ಹಿಂದೆ ಸೇರಿದ್ದಾರೆ.
ಸಂಭ್ರಮಾಚರಣೆ ಸಂದರ್ಭದಲ್ಲಿ ಶಕ್ತಿಸೌಧದಲ್ಲೇ ಪಾಕ್ ಪರ ಜೈಕಾರ ಹಾಕಿದ್ದು ಇಡೀ ರಾಷ್ಟ್ರದ ಗಮನ ಸೆಳೆದಿತ್ತು.
ಆರೋಪಿಗಳನ್ನು ಬಂಧಿಸುವಂತೆ ಸರ್ಕಾರದ ಮೇಲೆ ತೀವ್ರ ಒತ್ತಡ ಎದುರಾದ ಹಿನ್ನೆಲೆಯಲ್ಲಿ ಗೃಹ ಇಲಾಖೆ, ಘೋಷಣೆ ಕೂಗಿದವರನ್ನು ಪತ್ತೆ ಹಚ್ಚಿ ನಂತರ ಎಫ್‌ಎಸ್‌ಎಲ್ ಮೂಲಕ ಸಾಬೀತುಪಡಿಸಿಕೊಂಡು, ಇದೀಗ ಪೊಲೀಸರ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.
ವಿಚಾರಣೆ ಸಂದರ್ಭದಲ್ಲೇ ನಾಸಿಪುಡಿ ತನ್ನ ಮುಂದಿನ ರಾಜಕೀಯ ಆಸೆಗಳನ್ನು ಹೇಳಿಕೊಂಡಿದ್ದಾನೆಂದು ಉನ್ನತ ಮೂಲಗಳು ತಿಳಿಸಿವೆ.