ಬೆಂಗಳೂರು:ರಾಜ್ಯದ ನಾಲ್ಕು ಕೃಷಿ ವಿಶ್ವ ವಿದ್ಯಾಲಯಗಳಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಇಂದಿಲ್ಲಿ ತಿಳಿಸಿದ್ದಾರೆ.
ವಿಶ್ವವಿದ್ಯಾಲಯಗಳ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು, ಕೃಷಿ ವಿಶ್ವವಿದ್ಯಾಲಯಗಳಲ್ಲಿ ಗುಣಾತ್ಮಕವಾಗಿ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಬೇಕು, ಶೇ.100 ಅನುದಾನಿತ ಹುದ್ದೆಗಳಿಗೆ ಆರ್ಥಿಕ ಇಲಾಖೆಗೆ ಕೇವಲ ಮಾಹಿತಿ ನೀಡಿ ನೇಮಕಾತಿ ಮಾಡಿಕೊಳ್ಳಲು ಅನುಕೂಲವಾಗುವಂತೆ ಸೂಕ್ತ ಮಾರ್ಗಸೂಚಿ ಹೊರಡಿಸಬೇಕಿದೆ ಎಂದರು.
ಕೃಷಿಕರ ಶ್ರೇಯೋಭಿವೃದ್ಧಿಗೆ ಬಳಕೆ
ಕೃಷಿ ವಿಶ್ವ ವಿದ್ಯಾಲಯಗಳು ಕೇವಲ ಸಂಶೋಧನೆಗೆ ಸೀಮಿತವಾಗದೆ ಕೃಷಿ ಹಾಗೂ ಕೃಷಿಕರ ಶ್ರೇಯೋಭಿವೃದ್ಧಿಗೆ ಬಳಕೆಯಾಗಬೇಕು, ಕೃಷಿ ವಿವಿಗಳಿಗೆ ಸರ್ಕಾರ ಹೆಚ್ಚಿನ ನೆರವು ಹಾಗೂ ಪ್ರೋತ್ಸಾಹ ನೀಡುತ್ತಿದೆ, ಇದರ ಫಲ ರೈತರಿಗೆ ವರ್ಗಾವಣೆಯಾಗಬೇಕು.
ಐ.ಸಿ.ಎ.ಆರ್. ಮಾರ್ಗಸೂಚಿ ಮಾನದಂಡ ಪೂರೈಸುವ ಕೃಷಿ ಕಾಲೇಜು ಮತ್ತು ಕೃಷಿ ಸಂಸ್ಥೆಗಳಿಗೆ ಮಾತ್ರ ಸಂಬಂಧಪಟ್ಟ ಕೃಷಿ ವಿವಿ ವ್ಯಾಪ್ತಿಯಲ್ಲಿ ಅಫಿಲೇಷನ್ ನೀಡುವ ಬಗ್ಗೆ ಪರಿಶೀಲಿಸಿ ಕ್ರಮ ವಹಿಸುವಂತೆ ಸೂಚಿಸಿದರು.
ಡಿಪ್ಲೊಮಾ ಕಾಲೇಜುಗಳ ಪುನರ್ ಸ್ಥಾಪನೆ ಬೇಡಿಕೆ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಕಾರ್ಯದರ್ಶಿಗಳಿಗೆ ಸಚಿವರು ನಿರ್ದೇಶನ ನೀಡಿದರು.