ಶಿರಸಿ(ಉತ್ತರಕನ್ನಡ):ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಆದ್ಯತೆಯಲ್ಲಿ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಶಿರಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳ ಖಾತೆಯಲ್ಲಿ 854 ಕೋಟಿ ರೂ. ಇದೆ, ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಉಚಿತ ಸಹಾಯವಾಣಿ ಆರಂಭಿಸಲಾಗುವುದು, ಸಚಿವರು ಮತ್ತು ಶಾಸಕರ ಅಧ್ಯಕ್ಷತೆಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಭೆಗಳನ್ನು ನಡೆಸುವಂತೆ ಸೂಚನೆ ನೀಡಲಾಗಿದೆ ಎಂದರು.
ನಿರ್ಲಕ್ಷ್ಯ ವಹಿಸಿದರೆ ಕಠಿಣ ಕ್ರಮ
ಪ್ರತೀ ವಾರಕ್ಕೊಮ್ಮೆ ಪಿಡಿಒಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆಸುವಂತೆ ಸೂಚಿಸಲಾಗಿದೆ, ನಿರ್ಲಕ್ಷ್ಯ ವಹಿಸುವ ಜಿಲ್ಲಾಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಪಾಕ್ ಜಿಂದಾಬಾದ್ ಪ್ರಕರಣ ಕುರಿತು ಬಿಜೆಪಿಯ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಖಾಸಗಿ ಸಂಸ್ಥೆಗಳ ಎಫ್‌ಎಸ್‌ಎಲ್ ವರದಿಗಳಿಗೆಲ್ಲಾ ಸರ್ಕಾರ ಮಾನ್ಯತೆ ಕೊಡುವುದಿಲ್ಲ, ಪೊಲೀಸ್ ಇಲಾಖೆ ನೀಡುವ ವರದಿಯೇ ಅಧಿಕೃತ ಎಂದು ಸ್ಪಷ್ಟಪಡಿಸಿದರು.