ಕಂದಾಯ – ಅರಣ್ಯ ಭೂಮಿ ಗಡಿ ಗುರುತಿಸಲು ಜಂಟಿ ಸರ್ವೆ
ಬೆಂಗಳೂರು: ಫಾರಂ-57 ಅಡಿಯಲ್ಲಿ ಅರ್ಹ ರೈತರು ಅರ್ಜಿ ಸಲ್ಲಿಸಿದ್ದರೆ ಬಗರ್ಹುಕುಂ ಆ್ಯಪ್ ಮೂಲಕ ಭೂ ಮಂಜೂರು ಮಾಡುವುದು ಸರ್ಕಾರದ ಕರ್ತವ್ಯವಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡರು ತಿಳಿಸಿದ್ದಾರೆ.
ಸರ್ಕಾರ ಕಂದಾಯ ಹಾಗೂ ಅರಣ್ಯ ಇಲಾಖೆ ವತಿಯಿಂದ ಜಂಟಿ ಸರ್ವೇ ನಂತರ ಕಂದಾಯ ಭೂಮಿ ಮತ್ತು ಅರಣ್ಯ ಭೂಮಿ ಗಡಿಯನ್ನು ನಿಖರವಾಗಿ ಗುರುತಿಸಲಾಗುವುದು. ಗಡಿ ಗುರುತಿಸಿದ ನಂತರ ಅಂತಹ ಜಮೀನಿನಲ್ಲಿ ಒಂದು ವೇಳೆ ಕೃಷಿ ಚಟುವಟಿಕೆ ನಡೆಯುತ್ತಿದ್ದರೆ, ಅರ್ಹ ಹಿಡುವಳಿದಾರರಿಗೆ ಸಾಗುವಳಿ ಚೀಟಿ ನೀಡಲು ಕ್ರಮ ಜರುಗಿಸಲಾಗುವುದು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಾಜ್ಯಾದ್ಯಂತ ಜಂಟಿ ಸರ್ವೇ ನಡೆಸಿ ಜನ ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕಳೆದ ಚಳಿಗಾಲದ ಅಧಿವೇಶನದಲ್ಲೇ ಸರ್ಕಾರ ಭರವಸೆ ನೀಡಿತ್ತು. ಜಂಟಿ ಸರ್ವೇ ಮೂಲಕ ಪರಿಭಾವಿತ ಅರಣ್ಯ, ಮೀಸಲು ಅರಣ್ಯದ ಮಾಹಿತಿಯನ್ನು ಸಾರ್ವಜನಿಕಗೊಳಿಸುವ ಹಾಗೂ ನಕ್ಷೆ ಇಲ್ಲದ ಜಮೀನುಗಳಲ್ಲಿ ರೈತರಿಗೆ ಸಾಗುವಳಿ ಚೀಟಿ ನೀಡಲು ಸರ್ಕಾರ ನಿಶ್ಚಯಿಸಿತ್ತು ಎಂದಿದ್ದಾರೆ.
ಕಳೆದ ಎರಡು ತಿಂಗಳುಗಳಿಂದ ಜಂಟಿ ಸರ್ವೇ ಕೆಲಸ ಪ್ರಗತಿಯಲ್ಲಿದೆ. ಈಗಾಗಲೇ ಚಿಕ್ಕಬಳ್ಳಾಪುರ, ಚಾಮರಾಜನಗರ, ಚಿಕ್ಕಮಗಳೂರು, ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸರ್ವೇ ಕೆಲಸ ಪ್ರಗತಿಯಲ್ಲಿದೆ. ಸರ್ಕಾರಿ ಭೂ ಮಾಪಕರು ಹಾಗೂ ಪರವಾನಗಿ ಹೊಂದಿರುವ ಭೂ ಮಾಪಕರ ಸಹಾಯದಿಂದ ಸರ್ವೇ ಕೆಲಸ ಆರಂಭಿಸಲಾಗಿದೆ.
ಕಂದಾಯ ಭೂಮಿ ಡೀನೋಟಿಫಿಕೇಷನ್ ಗೆ ಅರಣ್ಯ ಇಲಾಖೆಗೆ ಮನವಿ
ಚಾಮರಾಜನಗರ ಜಿಲ್ಲೆಯಲ್ಲಿ ಒಟ್ಟು 2845964 ಎಕರೆ ಪರಿಭಾವಿತ ಅರಣ್ಯ ಪ್ರದೇಶವಿದ್ದು, ಈ ಪೈಕಿ 12,70,847 ಎಕರೆ ಭೂಮಿಯನ್ನು ಅಳತೆ ಮಾಡಲಾಗಿದೆ. ಸರ್ವೇ ಪ್ರಕಾರ ಚಾಮರಾಜನಗರ ಜಿಲ್ಲೆಯಲ್ಲಿ ಒಟ್ಟು 7910 ಎಕರೆ ಕಂದಾಯ ಜಮೀನು ಇದ್ದು, ಈ ಜಮೀನನ್ನು ಡೀನೋಟಿಫಿಕೇಷನ್ ಮಾಡಲು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಲಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಧಿಸೂಚನೆಯಂತೆ ಪರಿಭಾವಿತ ಒಟ್ಟು ಅರಣ್ಯ ಪ್ರದೇಶದ ವಿಸ್ತೀರ್ಣ 47,809.31 ಎಕರೆ. ಈ ಪೈಕಿ 21,662 ಎಕರೆ ಪ್ರದೇಶದ ಅಳತೆ ಕಾರ್ಯ ಮುಗಿದಿದ್ದು, 26,147 ಎಕರೆ ವಿಸ್ತೀರ್ಣದ ಪ್ರದೇಶ ಅಳತೆಗೆ ಕ್ರಮ ಜರುಗಿಸಲಾಗಿದೆ.
ಕೊಡಗು ಜಿಲ್ಲೆಯಲ್ಲಿ ಒಟ್ಟು ಪರಿಭಾವಿತ ಅರಣ್ಯ ಪ್ರದೇಶದ ಪೈಕಿ ಈವರೆಗೆ ಒಟ್ಟು 20,769 ಎಕರೆ ಭೂಮಿಯನ್ನು ಅಳತೆ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರಿಭಾವಿತ ಅರಣ್ಯ ಪ್ರದೇಶದ ವಿಸ್ತೀರ್ಣ ಒಟ್ಟು 21983 ಎಕರೆ ಎಂದು ಗುರುತಿಸಲಾಗಿದ್ದು, ಈವರೆಗೆ 800 ಎಕರೆ ಜಮೀನಿನಲ್ಲಿ ಅಳತೆ ಕಾರ್ಯ ನಡೆಸಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ 130927 ಎಕರೆ ವಿಸ್ತೀರ್ಣದ ಜಮೀನನ್ನು ಪರಿಭಾವಿತ ಅರಣ್ಯ ಪ್ರದೇಶ ಎಂದು ಗುರುತಿಸಿದ್ದು, ಈಗಾಗಲೇ 17 ಜನ ಭೂ ಮಾಪಕರನ್ನು ಸರ್ವೇ ಕೆಲಸಕ್ಕೆ ನಿಯೋಜಿಸಲಾಗಿದೆ. ಪ್ರಾಥಮಿಕವಾಗಿ 300 ಎಕರೆ ಪ್ರದೇಶದ ಸರ್ವೇ ಕಾರ್ಯವನ್ನು ಮುಗಿಸಲಾಗಿದೆ.
ಅರಣ್ಯ ಹಾಗೂ ಕಂದಾಯ ಭೂಮಿ ಗುರುತಿಸುವ ಸಂಬಂಧ ಹೆಚ್ಚು ಸಮಸ್ಯೆಗಳಿರುವ ಚಿಕ್ಕಮಗಳೂರು, ದಕ್ಷಿಣ ಕನ್ನಡ ಹಾಗೂ ಚಾಮರಾಜನಗರ ಜಿಲ್ಲೆಗಳಿಗೆ ಬೇರೆ ಬೇರೆ ಜಿಲ್ಲೆಗಳಿಂದ ಆದ್ಯತೆ ಮೇಲೆ ಭೂ ಮಾಪಕರನ್ನು ತುರ್ತು ನಿಯೋಜನೆಗೊಳಿಸಿ ಜಂಟಿ ಸರ್ವೇ ಕೆಲಸಕ್ಕೆ ವೇಗ ನೀಡಲಾಗಿದೆ.
ರಾಜ್ಯಾದ್ಯಂತ ಜಂಟಿ ಸರ್ವೆ ವಿಸ್ತರಣೆ
ರಾಜ್ಯಾದ್ಯಂತ ಪೋಡಿ, ಹದ್ದುಬಸ್ತು, ನ್ಯಾಯಾಲಯದಲ್ಲಿರುವ ತಕರಾರು ಪ್ರಕರಣಗಳ ಇತ್ಯರ್ಥಕ್ಕೆ ಸಂಬಂಧಿಸಿದಂತೆಯೂ ಭೂ ಮಾಪಕರ ಜವಾಬ್ದಾರಿ ಪ್ರಮುಖವಾದದ್ದಾಗಿದೆ. ಉಳಿದ ಜಿಲ್ಲೆಗಳಲ್ಲೂ ಸಹ ಆದ್ಯತೆ ಮೇಲೆ ಶೀಘ್ರದಲ್ಲೇ ಜಂಟಿ ಸರ್ವೇ ಕೆಲಸಕ್ಕೆ ಹಂತಹಂತವಾಗಿ ಮುಂದಾಗುವಂತೆ ಈಗಾಗಲೇ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಈಗಾಗಲೇ 991 ಪರವಾನಗಿ ಸರ್ವೇಯರ್ ಗಳನ್ನು ಎಲ್ಲಾ ಜಿಲ್ಲೆಗಳಿಗೂ ಆದ್ಯತೆ ಮೇಲೆ ಕಳುಹಿಸಿಕೊಡಲಾಗುತ್ತಿದೆ. ಅಲ್ಲದೆ, 364 ಸರ್ಕಾರಿ ಸರ್ವೇಯರ್ ಹಾಗೂ 27 ಎಡಿಎಲ್ಆರ್ ನೇಮಕಕ್ಕೂ ಅಧಿಸೂಚನೆ ಹೊರಡಿಸಲಾಗಿದೆ.
ಪ್ರತೀ ಜಿಲ್ಲೆಯ ವಿಸ್ತೀರ್ಣವನ್ನು ಅಳೆಯುವ ಸಲುವಾಗಿ ಡ್ರೋನ್ ಸರ್ವೇಗೆ ಈಗಾಗಲೇ ಚಾಲನೆ ನೀಡಲಾಗಿದೆ. ಡ್ರೋನ್ ಸರ್ವೇ ಮೂಲಕವೂ ಜಿಲ್ಲಾ ವ್ಯಾಪ್ತಿಯಲ್ಲಿ ಕಂದಾಯ ಭೂಮಿ ವಿಸ್ತೀರ್ಣದ ಪ್ರಮಾಣ ಹಾಗೂ ಅರಣ್ಯ ಪ್ರದೇಶ ವಿಸ್ತೀರ್ಣದ ನಿಖರ ಪ್ರಮಾಣ ಎಷ್ಟು? ಎಂಬ ಮಾಹಿತಿಯನ್ನು ಗುರಿತಿಸುವ ಕೆಲಸ ಚಾಲ್ತಿಯಲ್ಲಿದೆ.
ಒಂದು ವೇಳೆ ಕಂದಾಯ ಭೂಮಿಯನ್ನು ತಪ್ಪಾಗಿ ಅರಣ್ಯ ಇಲಾಖೆ ನೋಟಿಫೈ ಮಾಡಿರುವುದು ಜಂಟಿ ಸರ್ವೇ ಅಥವಾ ಟ್ರೋನ್ ಸರ್ವೇಯಿಂದ ಖಚಿತವಾದಲ್ಲಿ ಆ ಭೂಮಿಯನ್ನು ಡಿನೋಟಿಫಿಕೇಷನ್ ಮಾಡಲು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಲಾಗುವುದು. ಈ ಸಂಬಂಧ ಅರಣ್ಯ ಇಲಾಖೆ ಸಚಿವರಾದ ಮಾನ್ಯ ಈಶ್ವರ್ ಖಂಡ್ರೆ ಅವರ ಜೊತೆಗೂ ಸಭೆ ನಡೆಸಿ ಚರ್ಚಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.