ಕರ್ನಾಟಕದ ಏಳು ಲೋಕಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಪ್ರಕಟ
ಬೆಂಗಳೂರು:ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಸಮರ್ಥ ಅಭ್ಯರ್ಥಿಗಳಿಗಾಗಿ ಹುಡುಕಾಟ ನಡೆಸಿರುವ ಕಾಂಗ್ರೆಸ್ ಕೊನೆಗೂ ಅಳೆದು ಸುರಿದು ಕರ್ನಾಟಕದ ಏಳು ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಮೊದಲ ಪಟ್ಟಿಯಲ್ಲಿ ಪ್ರಕಟಿಸಿದೆ. ವಿವಿಧ ರಾಜ್ಯಗಳ ಒಟ್ಟು 39 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಎಐಸಿಸಿ ಪ್ರಕಟಿಸಿದೆ.
ಶೇ. 50ರಷ್ಟು ಕ್ಷೇತ್ರಗಳಿಗೆ ಹೆಸರು ಅಭ್ಯರ್ಥಿಗಳ ಹೆಸರು ಪ್ರಕಟಿಸಬಹುದು ಎಂಬ ನಿರೀಕ್ಷೆಯನ್ನು ಕಾಂಗ್ರೆಸ್ ಹುಸಿ ಮಾಡಿದೆ. ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ಸುದೀರ್ಘ ಸಮಾಲೋಚನೆ ನಡೆಸಿ, ಹಲವು ರೀತಿಯ ಲೆಕ್ಕಾಚಾರ ಹಾಕಿ ಕರ್ನಾಟಕದ 7 ಕ್ಷೇತ್ರಗಳಿಗೆ ಮಾತ್ರ ಅಭ್ಯರ್ಥಿಗಳನ್ನು ಪ್ರಕಟಿಸಲು ಸಫಲವಾಗಿದೆ.
ಸಂಸದ ಡಿ.ಕೆ.ಸುರೇಶ್ ಅವರಿಗೆ ಬೆಂಗಳೂರು ಗ್ರಾಮಾಂತರದಿಂದ ಮತ್ತೆ ಸ್ಪರ್ಧಿಸಲು ಕಾಂಗ್ರೆಸ್ ಅವಕಾಶ ಮಾಡಿಕೊಟ್ಟಿದ್ದು, ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಪುತ್ರಿ ಹಾಗೂ ಚಿತ್ರನಟ ಶಿವರಾಜ್ ಕುಮಾರ್ ಅವರ ಪತ್ನಿ ಗೀತಾಶಿವರಾಜ್ ಕುಮಾರ್ ಅವರಿಗೆ ಶಿವಮೊಗ್ಗದಿಂದಲೂ ಮಾಜಿ ಸಂಸದ ದಿವಂಗತ ಪುಟ್ಟಸ್ವಾಮಿಗೌಡ ಅವರ ಮೊಮ್ಮಗ ಎಂ.ಶ್ರೇಯ ಪಟೇಲ್ ಅವರನ್ನು ಹಾಸನದಿಂದ ಸ್ಪರ್ಧೆಗಿಳಿಸುತ್ತಿದೆ.
ಉದ್ಯಮಿ ಹಾಗೂ ಗುತ್ತಿಗೆದಾರ ವೆಂಕಟರಾಮೇಗೌಡ (ಸ್ಟಾರ್ ಚಂದ್ರು) ಅವರಿಗೆ ನಿರೀಕ್ಷೆಯಂತೆ ಮಂಡ್ಯ ಕ್ಷೇತ್ರದ ಟಿಕೆಟ್ ನೀಡಲಾಗಿದೆ. ಬಿಜೆಪಿಯಿಂದ ಇತ್ತೀಚೆಗಷ್ಟೇ ಕಾಂಗ್ರೆಸ್ ಗೆ ಮರಳಿದ್ದ ಮಾಜಿ ಸಂಸದ ಎಸ್. ಪಿ.ಮುದ್ದಹನುಮೇಗೌಡ ಅವರಿಗೆ ತುಮಕೂರು ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಮಾಡಿಕೊಡಲಾಗಿದೆ.
ಕರ್ನಾಟಕದಲ್ಲಿ 27,067 ಉದ್ಯೋಗಗಳ ಸೃಷ್ಟಿ
ಹಾವೇರಿಯಿಂದ ಆನಂದಸ್ವಾಮಿ ಗಡ್ಡದೇವರ ಮಠ ಹಾಗೂ ಬಿಜಾಪುರ (ಎಸ್ಸಿ) ಎಚ್.ಆರ್.ಅಲ್ಗೂರು ಅವರ ಸ್ಪರ್ಧೆಗೆ ಕಾಂಗ್ರೆಸ್ ಅವಕಾಶ ಕಲ್ಪಿಸಿದೆ. ಉಳಿದಿರುವ 21 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಪ್ರಕಟಣೆ ಬಾಕಿ ಉಳಿಸಿಕೊಂಡಿದೆ.