ಮಾರ್ಚ್ 12 ರೊಳಗೆ ಪಟ್ಟಿ ಪ್ರಕಟ ಸಾಧ್ಯತೆ
ಬೆಂಗಳೂರು: ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಆಯ್ಕೆ ವಿಚಾರ ಬಿಜೆಪಿಯಲ್ಲಿ ಕಗ್ಗಂಟಾಗಿದೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ವರಿಷ್ಠರು ರಾಜ್ಯ ನಾಯಕರೊಂದಿಗೆ ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿ ಕಸರತ್ತು ನಡೆಸಿದ್ದರೂ ಅಂತಿಮವಾಗಿಲ್ಲ.
ರಾಜ್ಯ ನಾಯಕರಿಂದ ಎಲ್ಲಾ ಕ್ಷೇತ್ರಗಳ ಬಗ್ಗೆ ಅಗತ್ಯ ಮಾಹಿತಿ ಪಡೆದು ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಪಡೆದುಕೊಂಡಿದ್ದಾರೆ. ಆದರೆ, ರಾಜ್ಯ ನಾಯಕರು ನೀಡಿರುವ ಪಟ್ಟಿಗೂ ಚುನಾವಣಾ ಪೂರ್ವ ಸಮೀಕ್ಷೆ ವರದಿಗೂ ಕೆಲವು ಕ್ಷೇತ್ರಗಳಲ್ಲಿ ತಾಳೆಯಾಗುತ್ತಿಲ್ಲ.
ಈ ನಡುವೆ ಕರ್ನಾಟಕದಲ್ಲಿ ಎನ್ ಡಿಎ ಮೈತ್ರಿಕೂಟ ಸೇರಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೂ ವರಿಷ್ಠರು ಸಮಾಲೋಚನೆ ಮಾಡಬೇಕಾಗಿದೆ.
ಕುಮಾರಸ್ವಾಮಿ ಅವರನ್ನು ಯಾವುದೇ ಕ್ಷಣದಲ್ಲಿ ಬಿಜೆಪಿ ವರಿಷ್ಠರು ದೆಹಲಿಗೆ ಕರೆಸಿಕೊಳ್ಳಲಿದ್ದಾರೆ. ಅವರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿದ ನಂತರ ಅಂದರೆ, ಮಾರ್ಚ್ 12ರ ವೇಳೆಗೆ ಪಟ್ಟಿ ಸಿದ್ಧಗೊಂಡು ಬಿಡುಗಡೆಯಾಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
10ರಿಂದ 14 ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ
ಈ ಮಧ್ಯೆ ಕಾಂಗ್ರೆಸ್ ಕೂಡ ರಾಜ್ಯ 28 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ದೆಹಲಿಯಲ್ಲಿ ಮಾತುಕತೆ ಅಂತಿಮಗೊಂಡಿದೆ. ಮೊದಲ ಹಂತದಲ್ಲಿ 10ರಿಂದ 14 ಕ್ಷೇತ್ರಗಳ ಅಭ್ಯರ್ಥಿಗಳನ್ನು ಎಐಸಿಸಿ ಪ್ರಕಟಿಸಲಿದೆ.
ಕೇಂದ್ರ ಚುನಾವಣಾ ಸಮಿತಿಯ ಮುಂದೆ ಅಭಿಪ್ರಾಯವನ್ನು ವ್ಯಕ್ತಪಡಿಸಿದ ನಂತರ ಕೆಪಿಸಿಸಿ ಅಧ್ಯಕ್ಷರಾಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಹೈಕಮಾಂಡ್ ಶೀಘ್ರವೇ ಬಿಡುಗಡೆ ಮಾಡಲಿದೆ ಎಂದು ತಿಳಿಸಿದ್ದಾರೆ.
ಲೋಕಸಭೆ ಚುನಾವಣೆ ಸಂಬಂಧ ನಿನ್ನೆ ನಮ್ಮ ಪಕ್ಷದ ಅಧ್ಯಕ್ಷರು ಹಾಗೂ ಇತರ ನಾಯಕರ ಸಮ್ಮುಖದಲ್ಲಿ ಚರ್ಚೆ ನಡೆಸಲಾಗಿದೆ. ಎಷ್ಟು ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಿದೆ, ಯಾರ ಹೆಸರು ಅಂತಿಮವಾಗಿದೆ ಎಂದು ನಾನು ಬಹಿರಂಗಪಡಿಸಲು ತಯಾರಿಲ್ಲ.
ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಶೀಘ್ರವೇ ಬಿಡುಗಡೆ
ಎಐಸಿಸಿ ನಾಯಕರು ಮೊದಲ ಪಟ್ಟಿ ಅಂತಿಮಗೊಳಿಸಿ ಶೀಘ್ರವೇ ಬಿಡುಗಡೆ ಮಾಡುತ್ತಾರೆ. ನಾವು ಸಭೆಯಲ್ಲಿ ಶೇ.50ರಷ್ಟು ಕ್ಷೇತ್ರಗಳ ಬಗ್ಗೆ ಮಾತ್ರ ಚರ್ಚೆ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರು ಕರ್ನಾಟಕದಿಂದ ಸ್ಪರ್ಧೆ ಮಾಡುತ್ತಾರಾ ಎಂದು ಕೇಳಿದಾಗ, “ಅವರು ಎಐಸಿಸಿ ಅಧ್ಯಕ್ಷರು. ಅನೇಕರು ಅವರ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಅವರ ಕ್ಷೇತ್ರದಲ್ಲಿ ಬೇರೆ ಹೆಸರು ಪ್ರಸ್ತಾಪಿಸಿಲ್ಲ. ಅವರು ದೇಶದಾದ್ಯಂತ ಪ್ರವಾಸ ಮಾಡಬೇಕಿದೆ. ಹೀಗಾಗಿ ಅಂತಿಮವಾಗಿ ಅಧ್ಯಕ್ಷರೇ ಸ್ಪರ್ಧೆ ಬಗ್ಗೆ ತೀರ್ಮಾನ ಮಾಡುತ್ತಾರೆ” ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಸ್ಥಾನದ ಬಗ್ಗೆ ಸಚಿವ ಮಹದೇವಪ್ಪ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಒಳ್ಳೆಯದಾಗಲಿ, ಆಸೆ ಪಡುವುದರಲ್ಲಿ ತಪ್ಪಿಲ್ಲ. ಯಾರ್ಯಾರೋ ಏನೇನೋ ಆಸೆ ಪಡುತ್ತಾರೆ. ಮಹದೇವಪ್ಪ ಅವರು ಆಸೆಪಡುವುದರಲ್ಲಿ ತಪ್ಪಿಲ್ಲ” ಎಂದು ತಿಳಿಸಿದ್ದಾರೆ.
ಸಚಿವರ ಸ್ಪರ್ಧೆ ಬಗ್ಗೆ ಚರ್ಚೆ ಆಗಿದೆಯೇ ? ಮುಖ್ಯಮಂತ್ರಿ ಪುತ್ರ ಸ್ಪರ್ಧೆ ಮಾಡುತ್ತಾರಾ ಎಂದು ಕೇಳಿದಾಗ “ಆ ಬಗ್ಗೆ ಚರ್ಚೆ ಆಗಿಲ್ಲ” ಎಂದು ತಿಳಿಸಿದ್ದಾರೆ.