ಬೆಂಗಳೂರು:ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುವ ಸಾಧ್ಯತೆ ಬಹುತೇಕ ಖಚಿತ.
ದೆಹಲಿ ರಾಜಕಾರಣದಲ್ಲಿ ಆಸಕ್ತಿ ಇಲ್ಲದಿದ್ದರೂ, ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆಯನ್ನು ತಳ್ಳಿಹಾಕಲಾಗದೆ ಚುನಾವಣಾ ಕಣ್ಕಕಳಿಯಲು ಮುಂದಾಗಿದ್ದಾರೆ.
ಮಂಡ್ಯ ಸೇರಿದಂತೆ ಮೂರು ಕ್ಷೇತ್ರಗಳಿಂದ ಕಣಕ್ಕಿಳಿಯಲು ಕುಮಾರಸ್ವಾಮಿ ಅವರಿಗೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಂದ ಒತ್ತಡವಿದೆ.
ರಾಮನಗರ ಬಿಡಲು ಆಸಕ್ತಿ ಇಲ್ಲ
ಆದರೆ, ತಮಗೆ ರಾಜಕೀಯ ಬದುಕು ಕೊಟ್ಟ ರಾಮನಗರ ಜಿಲ್ಲೆ ಬಿಟ್ಟು ಚುನಾವಣಾ ಕಣಕ್ಕಿಳಿಯುವ ಆಸಕ್ತಿ ಇಲ್ಲ.
ಎನ್‌ಡಿಎ ಮೈತ್ರಿಕೂಟಕ್ಕೆ ಜೆಡಿಎಸ್ ಸೇರಿದ ನಂತರ ಪ್ರಧಾನಿ ಅವರನ್ನು ಭೇಟಿ ಮಾಡಿದ ಸಂದರ್ಭದಲೆಲ್ಲಾ ಕೇಂದ್ರ ರಾಜಕಾರಣಕ್ಕೆ ಬರುವಂತೆ ಸಲಹೆ ನೀಡಿರುವುದಲ್ಲದೆ, ಬಹಿರಂಗ ಪಡಿಸಲಾಗದ ಕೆಲವು ವಿಚಾರಗಳನ್ನು ಮುಂದಿಟ್ಟಿದ್ದಾರೆ.
ಈಗಾಗಲೇ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಕೂಟಕ್ಕೆ ಯಾವ ಕ್ಷೇತ್ರಗಳು ಎಂಬುದು ನಿಗದಿಯಾಗಿವೆ. ತಮ್ಮ ಪಕ್ಷಕ್ಕೆ ದಕ್ಕಿರುವ ಕ್ಷೇತ್ರಗಳಲ್ಲಿ ಹಾಸನ ಹೊರತುಪಡಿಸಿ ಉಳಿದ ಕ್ಷೇತ್ರಗಳಲ್ಲಿ ಚುನಾವಣಾ ಸಭೆಗಳನ್ನು ನಡೆಸಿದ್ದಾರೆ.
ಸ್ಥಳೀಯ ಮುಖಂಡರೊಂದಿಗೆ ಸಮಾಲೋಚನೆ
ಮಂಡ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮೂರು ಬಾರಿ ಸ್ಥಳೀಯ ಮುಖಂಡರೊಂದಿಗೆ ಸಮಾಲೋಚನೆ ಮಾಡಿರುವ ಕುಮಾರಸ್ವಾಮಿ ಅಭ್ಯರ್ಥಿ ಹೆಸರು ಬಹಿರಂಗ ಪಡಿಸಿಲ್ಲ.
ಅವರ ಮನಸ್ಸಿನಲ್ಲಿ ಪಾಂಡವಪುರದ ಮಾಜಿ ಸಂಸದ ಪುಟ್ಟರಾಜು ಅವರನ್ನು ಕಣಕ್ಕಿಳಿಸಬೇಕೆಂಬ ಇಚ್ಛೆ ಇದೆ. ಆದರೆ, ಪ್ರಧಾನಿ ಅವರ ಮಾತನ್ನು ತಳ್ಳಿಹಾಕಲು ಸಾಧ್ಯವಾಗುತ್ತಿಲ್ಲ.
ಕುಮಾರಸ್ವಾಮಿ ಕೂಡ ತಮ್ಮ ಪಕ್ಷದ ಪಾಲಿನ ಕ್ಷೇತ್ರಗಳ ಬಗ್ಗೆ ಮೂರು ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದ್ದಾರೆ. ಅದರಲ್ಲಿ ಮಂಡ್ಯದಲ್ಲಿ ಕಣಕ್ಕಿಳಿದರೆ ದೊಡ್ಡ ಅಂತರದಲ್ಲಿ ಗೆಲ್ಲುತ್ತೇನೆಂಬ ವರದಿಗಳಿವೆ.
ತಾವು ಕಣಕ್ಕಳಿದರೆ ಗೆಲುವು ಸುಲಭ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಜಯ ಗಳಿಸಿದ್ದರೂ, ತಾವು ಕಣಕ್ಕಳಿದರೆ ಗೆಲುವು ಸುಲಭ ಎಂಬ ಮಾಹಿತಿ ಇದೆ.
ಯಾರೇ ನಿಂತರೂ ಒಮ್ಮತದಿಂದ ಚುನಾವಣಾ ಹೋರಾಟ ನಡೆಸಿ ಅಭ್ಯರ್ಥಿ ಗೆಲ್ಲಿಸಿ, ಅವರು ಸ್ಥಳೀಯರೇ ಆಗಬಹುದು ಇಲ್ಲವೇ ಆಕಸ್ಮಿಕ ಅಭ್ಯರ್ಥಿಯೂ ಆಗಿರಬಹುದು ಎಂಬ ವಿಚಾರ ಸಭೆಯ ಮುಂದಿಟ್ಟಿದ್ದಾರೆ.
ಪ್ರಧಾನಿ ಮತ್ತು ತಮ್ಮ ನಡುವೆ ನಡೆದಿರುವ ಮಾತುಕತೆಯನ್ನು ಮುಖಂಡರ ಗಮನಕ್ಕೆ ತಂದಿರುವುದಲ್ಲದೆ, ಮೋದಿ ಅವರು ಹೇಳಿರುವ ಎಲ್ಲಾ ವಿಷಯವನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ನನ್ನನ್ನು ಮತ್ತೆ ದೆಹಲಿಗೆ ಆಹ್ವಾನಿಸಿದ್ದಾರೆ, ಚರ್ಚೆ ಸಂದರ್ಭದಲ್ಲಿ ದೆಹಲಿ ರಾಜಕಾರಣಕ್ಕೆ ಬರಲೇಬೇಕೆಂದಾದರೆ, ನಾನು ಒಂದೆಡೆ ಕಣಕ್ಕಿಳಿಯಬೇಕಾಗುತ್ತದೆ.
ಅಂತಹ ಸಂದರ್ಭ ಬಂದರೆ ನಿಮಗಾರಿಗೂ ಅನ್ಯಾಯ ಮಾಡುವುದಿಲ್ಲ, ನಿಮಗೆ ದಕ್ಕಬೇಕಾದ ಸ್ಥಾನಮಾನಗಳನ್ನು ಕೊಡಿಸುತ್ತೇನೆ, ಎಲ್ಲರೂ ಕೈಜೋಡಿಸಿ ಕೆಲಸ ಮಾಡೋಣ ಎಂದಿದ್ದಾರೆ.