ಇದೀಗ ’ಟೆರರ್ ಆಫ್ ಬಳ್ಳಾರಿ’ ಸರದಿ
ಬೆಂಗಳೂರು:ಭಟ್ಕಳ ಭಯೋತ್ಪಾದಕ ತಂಡದ ಕತೆ ಮುಗಿಯಿತು ಎನ್ನುವಾಗಲೇ ಭಯೋತ್ಪದನಾ ಕೇಂದ್ರ ಸ್ಥಾನವಾಗಿ ಬಳ್ಳಾರಿ ಪರಿವರ್ತನೆಗೊಳ್ಳುತ್ತಿದೆ.
ನಗರದ ಐಟಿ ಕಾರಿಡಾರ್‌ನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದ ಬೆನ್ನು ಹತ್ತಿದ ರಾಷ್ಟ್ರೀಯ ತನಿಖಾ ಸಂಸ್ಥೆ ಹಾಗೂ ಸಿಸಿಬಿ ತಂಡಕ್ಕೆ ದೊರೆತಿರುವ ಸುಳಿವಿನ ಮೇರೆಗೆ ಬಳ್ಳಾರಿ ಉಗ್ರರ ತಾಣವಾಗುತ್ತಿದೆ.
10 ಕಡೆಗಳಲ್ಲಿ ಸ್ಫೋಟ ಸಂಚು
ಇಲ್ಲಿ ತರಬೇತಿ ಪಡೆದವರೇ ನಗರದಲ್ಲಿ ಬಾಂಬ್ ಸ್ಫೋಟ ಮಾಡಿದ್ದಾರೆ ಎಂದು ಗುರುತಿಸಲಾಗಿದ್ದು, ಈ ತಂಡ ರಾಜ್ಯದ ವಿವಿಧೆಡೆ 10 ಕಡೆಗಳಲ್ಲಿ ಇಂತಹ ಸ್ಫೋಟ ನಡೆಸಲು ಸಂಚು ರೂಪಿಸಿತ್ತು ಎಂಬ ಮಾಹಿತಿ ಕೆಲೆಹಾಕಿದೆ.
ಈ ಮಾಹಿತಿ ಹಿನ್ನೆಲೆಯಲ್ಲಿ ತನಿಖಾ ತಂಡ ರಾಜ್ಯ ಸರ್ಕಾರಕ್ಕೆ ಕಟ್ಟೆಚ್ಚರಿಕೆ ನೀಡಿ ಪ್ರವಾಸೀ ಕೇಂದ್ರ ಹಾಗೂ ಜನದಟ್ಟಣೆ ಸ್ಥಳಗಳಲ್ಲಿ ಮುಂಜಾಗ್ರತೆ ಕೈಗೊಳ್ಳುವಂತೆ ಸಲಹೆ ನೀಡಿದೆ.
ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣ ಬೆನ್ನು ಹತ್ತಿದ ರಾಷ್ಟ್ರೀಯ ತನಿಖಾ ಸಂಸ್ಥೆಗೆ ಬಳ್ಳಾರಿ ಕೇಂದ್ರ ಬಿಂದುವೆಂಬ ಮಾಹಿತಿ ಲಭ್ಯವಾಗಿದೆ.
ಬಂಧನಕ್ಕೆ ಬಲೆ
ನಗರದಲ್ಲಿ ಸ್ಫೋಟ ನಡೆಸಿದ ಪಾತಕಿ ಬಳ್ಳಾರಿಯಲ್ಲಿ ಅಡಗಿದ್ದಾನೆ ಎಂಬ ಸುಳಿವು ದೊರೆತಿದ್ದು, ಆತನ ಬಂಧನಕ್ಕೆ ಬಲೆ ಬೀಸಿದ್ದಾರೆ.
ಕೆಫೆ ಬಾಂಬರ್ ಬೆಂಗಳೂರಿನಿಂದ ಬಸ್ಸು ಹತ್ತಿ ಬಳ್ಳಾರಿ ತಲುಪಿರುವುದು ಸ್ಪಷ್ಟವಾಗಿದೆ, ನಂತರ ಆರೋಪಿ ಅಲ್ಲಿಂದ ಬೇರೆಡೆಗೆ ಸ್ಥಳ ಬದಲಾಯಿಸಿದ ಯಾವುದೇ ಸುಳಿವು ದೊರೆತಿಲ್ಲ. ಘಟನೆ ನಡೆದ ದಿನ ರಾತ್ರಿ ರಾತ್ರಿ 9 ಗಂಟೆ ಸುಮಾರಿಗೆ ಬಸ್ ನಿಲ್ದಾಣದ ಬಳಿ ಶಂಕಿತ ಕಾಣಿಸಿಕೊಂಡಿದ್ದ, ಬಳಿಕ ಎಲ್ಲಿಯೂ ಆರೋಪಿಯ ಚಲನವಲನದ ಕುರುಹು ದಾಖಲಾಗಿಲ್ಲದ ಹಿನ್ನೆಲೆಯಲ್ಲಿ ಆತ ಬಳ್ಳಾರಿಯಲ್ಲೇ ಅಡಗಿರಬಹುದೆಂದು ಶಂಕಿಸಲಾಗಿದೆ.
ಈ ಘಟನೆಯ ನಂತರ ಐಎಸ್ ಬಳ್ಳಾರಿ ಗ್ಯಾಂಗ್ ಸಕ್ರಿಯವಾಗಿರುವ ಬಗ್ಗೆ ಎನ್‌ಐಎ ತಂಡಕ್ಕೆ ಖಚಿತ ಮಾಹಿತಿ ಲಭ್ಯವಾಗಿದೆ.
ಸದ್ಯ ನಗರದ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಬಳ್ಳಾರಿ ಮೂಲದ ಮಿನಾಜ್ ಅಲಿಯಾಸ್ ಸುಲೈಮಾನ್ ಎಂಬುವನನ್ನು ಎನ್‌ಐಎ ತಂಡ ವಿಚಾರಣೆಗಾಗಿ ವಶಕ್ಕೆ ಪಡೆದಿದೆ.
ರಾಜ್ಯಾದ್ಯಂತ ವಿಧ್ವಂಸಕ ಕೃತ್ಯವೆಸಗಲು ಸಂಚು ರೂಪಿಸಿದ್ದ ಮಿನಾಜ್ ಅಲಿಯಾಸ್ ಸುಲೈಮಾನ್‌ನನ್ನು ಎನ್‌ಐಎ ತಂಡ ಡಿಸೆಂಬರ್‌ನಲ್ಲಿ ಬಂಧಿಸಿತ್ತು. ವಿಚಾರಣೆ ವೇಳೆ ಈತ ನೀಡಿದ ಮಾಹಿತಿ ಆಧರಿಸಿ ತನಿಖೆ ನಡೆಸಿದ ಎನ್‌ಐಎ ತಂಡಕ್ಕೆ ಐಎಸ್ ಬಳ್ಳಾರಿ ಗ್ಯಾಂಗ್ ಬಗ್ಗೆ ಮಾಹಿತಿ ಲಭಿಸಿತ್ತು.
ವಿದ್ಯಾವಂತ ಮುಸ್ಲಿಂ ಯುವಕರ ಸೇರ್ಪಡೆ
ಬಂಧಿತ ಮೀನಾಜ್ ನಿಷೇಧಿತ ಪಿಎಫ್‌ಐ ಸಂಘಟನೆಯ ಕಾರ್ಯಕರ್ತ, ಈತ ಬಳ್ಳಾರಿ ಮೂಲದ ಮತ್ತೊಬ್ಬ ಶಂಕಿತ ಉಗ್ರ ಸೈಯದ್ ಸಮೀರ್ ಎಂಬಾತನೊಂದಿಗೆ ಸೇರಿಕೊಂಡು ಐಎಸ್ ಬಳ್ಳಾರಿ ಘಟಕ ಸ್ಥಾಪನೆ ಮಾಡಿದ್ದ, ಹಲವಾರು ಮಂದಿ ವಿದ್ಯಾವಂತ ಮುಸ್ಲಿಂ ಯುವಕರನ್ನು ಸದಸ್ಯರನ್ನಾಗಿ ಸೇರ್ಪಡೆ ಮಾಡಿಕೊಂಡಿದ್ದ.
ಘಟಕಕ್ಕಾಗಿ ಪ್ರತ್ಯೇಕ ಮೊಬೈಲ್ ಆಪ್ ಸಿದ್ಧಪಡಿಸಿದ್ದ ಸಮೀರ್ ಮತ್ತು ಮೀನಾಜ್ ಆನ್‌ಲೈನ್ ಮೂಲಕ ವಿದ್ಯಾವಂತ ಮುಸ್ಲಿಂ ಯುವಕರನ್ನು ಪರಿಚಯ ಮಾಡಿಕೊಂಡು, ಅವರಿಗೆ ದೇಶದಲ್ಲಿ ಮುಸ್ಲಿಂ ಧರ್ಮದ ಮೇಲೆ ದೌರ್ಜನ್ಯವಾಗುತ್ತಿದೆ ಇದನ್ನು ತಡೆಗಟ್ಟಲು ಪ್ರಾಣ ತ್ಯಾಗಕ್ಕೂ ಸಿದ್ಧರಾಗಿರಬೇಕು ಎಂದು ಪ್ರಚೋದನಕಾರಿ ಅಂಶವಿರುವ ಪುಸ್ತಕಗಳು, ವಿಡಿಯೋ ಮತ್ತು ಕರಪತ್ರಗಳನ್ನು ರವಾನಿಸುತ್ತಿದ್ದರು.
ಇವರಿಂದ ಪ್ರೇರೇಪಣೆಗೊಂಡ ಅನೇಕರು ಐಎಸ್ ಬಳ್ಳಾರಿ ಘಟಕ ಸೇರಿದ್ದರು, ಈ ರೀತಿ ಸೇರಿದ ಹಲವರಿಗೆ ಬಾಂಬ್ ತಯಾರಿ ಹಾಗೂ ಸ್ಫೋಟಿಸುವ ತರಬೇತಿ ಮತ್ತು ಮಾಹಿತಿ ನೀಡುತ್ತಿದ್ದರು. ಬಳ್ಳಾರಿಯಲ್ಲೇ ಈ ಕುರಿತಂತೆ ತರಬೇತಿ ಸಹ ನೀಡಲಾಗುತ್ತಿತ್ತು ಎಂಬ ಮಾಹಿತಿ ಎನ್‌ಐಎ ತಂಡಕ್ಕೆ ಲಭ್ಯವಾಗಿದೆ.
ತರಬೇತಿ ಪಡೆದವರಿಗಾಗಿ ಹುಡುಕಾಟ
ಈ ಘಟಕದಿಂದ ತರಬೇತಿ ಪಡೆದ ವ್ಯಕ್ತಿಯೊಬ್ಬ ಬೆಂಗಳೂರಿನ ವೈಟ್‌ಫೀಲ್ಡ್‌ನ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ನಡೆಸಿರಬಹುದು ಎಂಬ ಮಾಹಿತಿ ಆಧರಿಸಿ ತನಿಖೆ ನಡೆಸಿದ್ದಾರೆ, ಅಲ್ಲದೆ, ಬಳ್ಳಾರಿ ಘಟಕದೊಂದಿಗೆ ಸಂಪರ್ಕ ಹೊಂದಿ ಸ್ಫೋಟಕ ತಯಾರಿ ತರಬೇತಿ ಪಡೆದವರಿಗಾಗಿ ಹುಡುಕಾಟ ನಡೆದಿದೆ.
ಗಣಿ ಉದ್ಯಮಿಗಳಿಂದ ಬದಲಾದ ಬಳ್ಳಾರಿಯನ್ನು ’ರಿಪಬ್ಲಿಕ್ ಆಫ್ ಬಳ್ಳಾರಿ ಎಂದು ವ್ಯಾಖ್ಯಾನ ಮಾಡಲಾಗುತ್ತಿತ್ತು. ಇದೀಗ ರಿಪಬ್ಲಿಕ್ ಆಫ್ ಬಳ್ಳಾರಿ ಬದಲಿಗೆ ’ಟೆರರ್ ಆಫ್ ಬಳ್ಳಾರಿ’ ಎಂದಾಗಿದೆ.
ಭಯೋತ್ಪಾದನೆ ಚಟುವಟಿಕೆಗಳಿಗೆ ಭಟ್ಕಳ ಗ್ಯಾಂಗ್ ದೇಶದಲ್ಲಿ ಮಾತ್ರವಲ್ಲ ಅಂತರಾಷ್ಟ್ರೀಯ ಮಟ್ಟದಲ್ಲೂ ಕುಖ್ಯಾತಿ ಪಡೆದಿತ್ತು. ಯಾಸಿನ್ ಭಟ್ಕಳ್ ಸೋದರರು ಮುಸ್ಲಿಂ ಸಮುದಾಯದ ವಿದ್ಯಾವಂತ ಯುವಕರನ್ನು ಜಿಹಾದಿ ಚಟುವಟಿಕೆಗಳಿಗೆ ಪ್ರೇರೇಪಿಸಿ ಭಯೋತ್ಪಾದನಾ ಕೃತ್ಯದಲ್ಲಿ ತೊಡಗುವಂತೆ ಮಾಡುತ್ತಿದ್ದರು.
ಭಟ್ಕಳ್ ಸೋದರದಿಂದ ಪ್ರೇರೇಪಿತರಾದ ಹಲವಾರು ಮುಸ್ಲಿಂ ಯುವಕರು ದೇಶದ ಅನೇಕ ಕಡೆ ದುಷ್ಕೃತ್ಯ ನಡೆಸುವ ಮೂಲಕ ಸಮಾಜಕ್ಕೆ ಕಂಟಕ ಪ್ರಾಯರಾಗಿದ್ದರು. ಈ ತಂಡದ ಬಹುತೇಕ ಎಲ್ಲಾ ಸದಸ್ಯರನ್ನು ಸೆರೆಹಿಡಿದು ಕತ್ತಲೆ ಕೋಣೆಗೆ ತಳ್ಳುವಲ್ಲಿ ದೇಶದ ತನಿಖಾ ತಂಡಗಳು ಯಶಸ್ವಿಯಾಗಿವೆ.