ಬಾಹ್ಯಾಕಾಶದವರೆಗೆ ಭಾರತ ಮಹಾನ್ ಸಾಧನೆ
ಬೆಂಗಳೂರು:ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ 10 ವರ್ಷಗಳಲ್ಲಿ ಭ್ರಷ್ಟಾಚಾರ ರಹಿತ, ಅಭಿವೃದ್ಧಿಪರ ಆಡಳಿತ ನೀಡಿದ್ದಾರೆ ಎಂದು ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್ ತಿಳಿಸಿದ್ದಾರೆ.
ವಿಕಸಿತ ಭಾರತ ರಾಯಭಾರಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, ಮುಂದೆಯೂ ಕೇಂದ್ರದಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ಇರಲಿದೆ ಎಂದರು.
ಡಿಬಿಟಿ ಮೂಲಕ ಫಲಾನುಭವಿಗೆ ಪೂರ್ತಿ ಹಣ
ಇಂದಿನ ದಿನದಲ್ಲಿ ಫಲಾನುಭವಿಗೆ ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ಪೂರ್ತಿ ಹಣ ತಲುಪುತ್ತಿದೆ, ಒಂದು ಪೈಸೆಯೂ ಮಧ್ಯವರ್ತಿಗಳಿಗೆ ಹೋಗದಂತಹ ವ್ಯವಸ್ಥೆ ತಂದಿದ್ದೇವೆ.
ಭಾರತ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶ ಎಂಬುದಾಗಿ ಐಎಂಎಫ್ ಹಾಗೂ ಮೂಡಿಸ್ ವರದಿಯಲ್ಲಿ ತಿಳಿಸಲಾಗಿದೆ, ಕಳೆದ ೧೦ ವರ್ಷಗಳಲ್ಲಿ ಕ್ರೀಡೆಯಿಂದ ಬಾಹ್ಯಾಕಾಶದವರೆಗೆ ಭಾರತ ಮಹಾನ್ ಸಾಧನೆ ಮಾಡಿದೆ.
ಎಲ್‌ಪಿಜಿ ಸಿಲಿಂಡರ್ ಸಂಪರ್ಕ ಇಲ್ಲದ 10 ಕೋಟಿಗೂ ಹೆಚ್ಚು ಜನರಿಗೆ ಉಚಿತ ಸಂಪರ್ಕ, 12 ಕೋಟಿಗೂ ಹೆಚ್ಚು ಶೌಚಾಲಯ ನಿರ್ಮಾಣ, ಜಲಜೀವನ್ ಮಿಷನ್ ಅಡಿ 14 ಕೋಟಿ ಮನೆಗಳಿಗೆ ಕೊಳಾಯಿ ನೀರಿನ ಸಂಪರ್ಕ, 4 ಕೋಟಿ ಮನೆಗಳ ನಿರ್ಮಾಣ ಮಾಡಲಾಗಿದೆ.
80 ಕೋಟಿ ಜನರಿಗೆ ಉಚಿತ ಆಹಾರಧಾನ್ಯ
ದೇಶದ 60 ಕೋಟಿ ಜನತೆ 5 ಲಕ್ಷ ರೂ. ವರೆಗೆ ಉಚಿತ ಆರೋಗ್ಯ ವಿಮಾ ಸೌಲಭ್ಯ ಪಡೆಯುತ್ತಿದ್ದಾರೆ, 80 ಕೋಟಿ ಜನರಿಗೆ ಪ್ರತಿ ತಿಂಗಳು ಉಚಿತ ಆಹಾರಧಾನ್ಯ ಪೂರೈಸಲಾಗುತ್ತಿದೆ, ಇದುವರೆಗೆ ದೇಶಾದ್ಯಂತ 200 ಕೋಟಿಗೂ ಹೆಚ್ಚು ಕೋವಿಡ್ ವ್ಯಾಕ್ಸಿನ್ ಡೋಸ್ ನೀಡಲಾಗಿದೆ, ಜನರ ತೆರಿಗೆ ಹಣ ಸಮರ್ಪಕ ಬಳಕೆ ಆಗುತ್ತಿದೆ ಎಂದು ಕೇಂದ್ರ ಸಚಿವರು ಸಮರ್ಥಿಸಿಕೊಂಡರು.
ಮಾಹಿಳಾ ದಿನಾಚರಣೆ ಕೊಡುಗೆಯಾಗಿ ಎಲ್‌ಪಿಜಿ ಸಿಲಿಂಡರ್ ದರದಲ್ಲಿ 100 ರೂ. ಇಳಿಕೆ ಮಾಡಲಾಗಿದೆ, ನಾರಿಶಕ್ತಿ ವಂದನ್ ಮಸೂದೆ ಮೂಲಕ ಮಹಿಳೆಯರಿಗೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಶೇ. 33 ಮೀಸಲಾತಿ ಒದಗಿಸಲಾಗುತ್ತದೆ, 2047 ರ ಹೊತ್ತಿಗೆ ವಿಕಸಿತ ದೇಶವಾಗಿ, ವಿಶ್ವದ ಮೂರನೇ ಅತಿದೊಡ್ಡ ಹಣಕಾಸು ವ್ಯವಸ್ಥೆಯಾಗಿ ಭಾರತ ಪರಿವರ್ತನೆಯಾಗಲಿದೆ ಎಂದರು.