ಬೆಂಗಳೂರು:ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಸಂವಿಧಾನದ ಕುರಿತು ನೀಡಿರುವ ಹೇಳಿಕೆ ರಾಜಕೀಯದಲ್ಲಿ ಅಲ್ಲೋಲ-ಕಲ್ಲೋಲ ಉಂಟು ಮಾಡಿದೆ.
ಇವರ ಹೇಳಿಕೆ ಹೊರಬರುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿ, ಸರ್ವಾಧಿಕಾರ ಧೋರಣೆಯಲ್ಲಿ ನಂಬಿಕೆ ಇರಿಸಿದ್ದು ಸಂವಿಧಾನ ಬದಲಾವಣೆ ಮಾಡುವ ಒಳಸಂಚು ಮಾಡಿದ್ದಾರೆ ಎಂದು ಗುಡುಗಿದ್ದಾರೆ.
ಅಷ್ಟೇ ಅಲ್ಲ, ಸಂವಿಧಾನ ಬದಲಾವಣೆ ಮಾಡಿದರೆ, ಈ ದೇಶದಲ್ಲಿ ರಕ್ತಪಾತವಾಗುತ್ತದೆ. ಆದ್ದರಿಂದ ನರೇಂದ್ರ ಮೋದಿಯವರು ತಮ್ಮ ಈ ಯೋಚನೆಯನ್ನು ಅನಂತಕುಮಾರ್ ಅವರ ಮೂಲಕ ಹೇಳಿಸುತ್ತಿದ್ದಾರೆ ಎಂದರು.
ಅನಂತಕುಮಾರ್ ಹೇಳಿಕೆಗೆ ತೀವ್ರ ಟೀಕೆ
ಅನಂತಕುಮಾರ್ ಅವರ ಹೇಳಿಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಒಳಗಾಗುತ್ತಿದ್ದಂತೆ, ಹೆಗಡೆ ಅವರ ಹೇಳಿಕೆ ವೈಯಕ್ತಿಕ ವಿಚಾರ, ಅದಕ್ಕೂ ಬಿಜೆಪಿಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ.
ಈ ಸಂಬಂಧ ಬಿಜೆಪಿ ಹೇಳಿಕೆ ನೀಡಿ, ರಾಷ್ಟ್ರೀಯ ನಾಯಕರು ಅದನ್ನು ಗಮನಿಸಿ ಹೆಗಡೆ ಅವರಿಂದ ಸ್ಪಷ್ಟನೆ ಕೇಳಿದ್ದಾರೆ.
ಹೆಗಡೆ ಹೇಳಿಕೆ ದೊಡ್ಡದು ಮಾಡುತ್ತಿದ್ದಾರೆ
ಕಾಂಗ್ರೆಸ್ ಕಾರ್ಯಕರ್ತರು ಪ್ರಧಾನಿ ಅವರನ್ನು ಅವಹೇಳನ ಮಾಡುತ್ತಾರೆ, ಹೆಗಡೆ ನೀಡಿದ ಹೇಳಿಕೆಯನ್ನೇ ದೊಡ್ಡದು ಮಾಡಿಕೊಂಡು ಹೋಗುತ್ತಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.
ಮುಂದುವರೆದು ಮಾತನಾಡಿದ ಮುಖ್ಯಮಂತ್ರಿ ಅವರು, ಹೆಗಡೆಯವರು ಈ ಮುಂಚೆ ಕೇಂದ್ರ ಸಚಿವರಾಗಿದ್ದಾಗಲೂ ಈ ಮಾತನ್ನು ಹೇಳಿದ್ದರು. ಇದು ಬಿಜೆಪಿಯ ಒಳಸಂಚಾಗಿದೆ.
ಸಂವಿಧಾನದಲ್ಲಿ ಯಾವುದೇ ರೀತಿಯ ಬದಲಾವಣೆಯನ್ನು ತರಬೇಕಾದರೆ ಸರ್ಕಾರಕ್ಕೆ ಮೂರನೇ ಎರಡರಷ್ಟು ಬಹುಮತವಿರಬೇಕು. ದೇಶ ಹಾಗೂ ಬಡವರ ಏಳಿಗೆಗೆ ಬಿಜೆಪಿಯವರಿಗೆ ಬಹುಮತ ಬೇಕಾಗಿಲ್ಲ, ಬದಲಾಗಿ ಸಂವಿಧಾನ ಬದಲಾಯಿಸಲು ಬಹುಮತ ಬೇಕಾಗಿದೆ ಎಂದು ಕಿಡಿಕಾರಿದರು.
ಮನುಸ್ಮೃತಿಗೆ ಅನುಗುಣವಾಗಿ ಸಂವಿಧಾನವಿರಬೇಕೆಂಬುದು ಬಿಜೆಪಿಯ ಒಳಸಂಚು. ಆದ್ದರಿಂದ ಇಡೀ ದೇಶದ ಬಡವರು, ಹಿಂದುಳಿದವರು, ಅಲ್ಪಸಂಖ್ಯಾತರು ಬಿಜೆಪಿಯ ಈ ಯೋಚನೆಯನ್ನು ವಿರೋಧಿಸಬೇಕು ಎಂದರು.
ಅವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಲ್ಲದೇ ಮನುಸ್ಮೃತಿಯ ತತ್ವಗಳನ್ನು ಜಾರಿಗೊಳಿಸುವ ಉದ್ದೇಶ ಹೊಂದಿದ್ದಾರೆ. ಆದರೆ ಸಂವಿಧಾನ ಸಮಸಮಾಜ ನಿರ್ಮಾಣದ ತತ್ವವನ್ನು ಹೊಂದಿದ್ದು, ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದರು.
ಹೆಗಡೆ ಮುಖವಾಡ ಅಷ್ಟೆ
ಹೆಗಡೆ ಈಗ ಹೇಳಿರುವುದನ್ನೇ ಹಿಂದೆ ಕಾಲಕಾಲಕ್ಕೆ ಆರ್.ಎಸ್.ಎಸ್ ನಾಯಕರು ಹೇಳಿದ್ದರು. ಹೆಗಡೆ ಒಂದು ಮುಖವಾಡ ಅಷ್ಟೆ, ನಿಜವಾದ ಮುಖ ಆರ್.ಎಸ್.ಎಸ್.
ಆರ್.ಎಸ್.ಎಸ್ ಬೆಂಬಲ ಇರುವುದರಿಂದ ಬಿಜೆಪಿಯನ್ನೇ ಯಾಕೆ, ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಹೆಗಡೆ ಅವರು ಲೆಕ್ಕಕ್ಕಿಟ್ಟಿಲ್ಲ.
ಸಂಸದ ಅನಂತಕುಮಾರ ಹೆಗಡೆ ಸಂವಿಧಾನಕ್ಕೆ ವಿರುದ್ಧವಾಗಿ ಮಾತನಾಡಿರುವುದು ವೈಯಕ್ತಿಕ ಹೇಳಿಕೆ ಎಂದು ಭಾರತೀಯ ಜನತಾ ಪಕ್ಷ ತಳ್ಳಿಹಾಕಿರುವುದು ನಾಚಿಕೆಗೇಡಿನ ನಡೆಯ ಪ್ರತೀಕ ಮಾತ್ರವಲ್ಲ ನೆಲದ ಕಾನೂನಿನ ಬಗ್ಗೆ ಅವರಿಗಿರುವ ತಿರಸ್ಕಾರವೂ ಹೌದು.
ದಮ್ಮು, ತಾಖತ್ ಇಲ್ಲ
ಈ ಹೇಳಿಕೆ ಹೆಗಡೆ ತಮ್ಮ ಮನೆಯ ಅಡುಗೆಕೋಣೆಯಲ್ಲಿ ನೀಡಿದ್ದಲ್ಲ, ಸಾರ್ವಜನಿಕ ಸಮಾರಂಭದಲ್ಲಿ ಸಂಸದನಾಗಿ ಮಾತನಾಡಿರುವುದು. ಈ ವ್ಯತ್ಯಾಸ ತಿಳಿಯದಷ್ಟು ಬಿಜೆಪಿ ನಾಯಕರು ಮೂರ್ಖರಲ್ಲ, ಇವರಿಗೆ ಆರ್ಎಸ್ಎಸ್ ಬೆಂಬಲದ ಅನಂತಕುಮಾರ ಹೆಗಡೆ ವಿರುದ್ಧ ಕ್ರಮಕೈಗೊಳ್ಳುವ ದಮ್ಮು, ತಾಖತ್ ಇಲ್ಲ ಅಷ್ಟೆ.
ನರೇಂದ್ರ ಮೋದಿಯವರೂ ಸೇರಿದಂತೆ ಬಿಜೆಪಿ ನಾಯಕರ ಮುಂದೆ ಈಗ ಇರುವುದು ಎರಡೇ ಆಯ್ಕೆ. ಒಂದೋ ಹೆಗಡೆಯನ್ನು ತಕ್ಷಣ ಪಕ್ಷದಿಂದ ವಜಾಗೊಳಿಸಬೇಕು ಇಲ್ಲವೇ ಅವರ ಹೇಳಿಕೆಗೆ ತಮ್ಮ ಸಹಮತ ಇದೆ ಎಂದು ಘೋಷಿಸಬೇಕು. ನೋಡೋಣ ಇದೇ ವಿಷಯದ ಮೇಲೆ ಈ ಬಾರಿಯ ಲೋಕಸಭಾ ಚುನಾವಣೆ ನಡೆಯಲಿ ಎಂದರು.