ಜುಲೈವರೆಗೆ ತೆರಿಗೆ ಕಟ್ಟಿದವರಿಗೆ ದಂಡ, ಬಡ್ಡಿ ಮನ್ನಾ
ಬೆಂಗಳೂರು:ಸಾರ್ವಜನಿಕರು ಕಟ್ಟಡ ನಕ್ಷೆ ಅನುಮತಿ ಪಡೆಯಲು ಪಾಲಿಕೆ ಕಚೇರಿಗಳಿಗೆ ಅಲೆಯುವಂತಿಲ್ಲ, ಅಧಿಕಾರಿಗಳಿಗೆ ಲಂಚ ನೀಡದೆ ’ನಂಬಿಕೆ ನಕ್ಷೆ’ ಯೋಜನೆಯಡಿ ಮಂಜೂರಾತಿ ಪಡೆಯುವ ಹೊಸ ವಿಧಾನವನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ.
ಬೆಂಗಳೂರು ನಗರದಲ್ಲಿ ಈ ಯೋಜನೆ ಮೊದಲು ಜಾರಿಗೊಳ್ಳಲಿದ್ದು, ನಂತರದ ದಿನಗಳಲ್ಲಿ ನಗರಾಭಿವೃದ್ಧಿ ಮತ್ತು ಪೌರಾಡಳಿತ ಇಲಾಖೆ, ಉಳಿದಂತೆ ಪಾಲಿಕೆ, ನಗರಸಭೆಗಳಿಗೆ ವಿಸ್ತರಣೆ ಆಗಲಿದೆ.
50 x 80 ಅಡಿ ವಿಸ್ತೀರ್ಣದವರೆಗಿನ ನಿವೇಶನಗಳಲ್ಲಿ 4 ಯುನಿಟ್ ಮನೆ ಕಟ್ಟಿಕೊಳ್ಳುವವರು ನೊಂದಾಯಿತ ವಾಸ್ತುಶಿಲ್ಪಿ (ಆರ್ಕಿಟೆಕ್ಟ್) ಅಥವಾ ಇಂಜಿನಿಯರ್ ಮೂಲಕ ತಮ್ಮ ಕಟ್ಟಡದ ನಕ್ಷೆಗಳಿಗೆ ಆನ್‌ಲೈನ್ ಮೂಲಕ ಸ್ವಯಂ ಅನುಮತಿ ಪಡೆಯುವ “ನಂಬಿಕೆ ನಕ್ಷೆ” ಯೋಜನೆ ಇದಾಗಿದೆ.
ತೆರಿಗೆ ಪದ್ಧತಿಯಲ್ಲೂ ಮಾರ್ಪಾಟು
ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ನಂಬಿಕೆ ನಕ್ಷೆ ಯೋಜನೆ ಅನುಷ್ಠಾನ ಜೊತೆಗೆ ತೆರಿಗೆ ಪದ್ಧತಿಯಲ್ಲೂ ಒಂದಷ್ಟು ಮಾರ್ಪಾಟು ಮಾಡಲಾಗಿದೆ ಎಂದರು.
ರಾಜಧಾನಿಯಲ್ಲಿರುವ ದಂಡದ ಸಮಸ್ಯೆಯನ್ನು ಬಗೆಹರಿಸಿದ್ದು, ಜುಲೈ ಅಂತ್ಯದವರೆಗೆ ಬಾಕಿ ತೆರಿಗೆ ಕಟ್ಟಿದವರಿಗೆ ದಂಡ ಹಾಗೂ ಬಡ್ಡಿ ಮನ್ನಾ ಮಾಡುವ ತೀರ್ಮಾನ ಮಾಡಿದ್ದೇವೆ.
ದಂಡವನ್ನು ಶೇಕಡ 200 ರಿಂದ ಶೇಕಡ 100 ಕ್ಕೆ ಇಳಿಸಿ, ಇದರ ಬಡ್ಡಿ ಮತ್ತು ಚಕ್ರ ಬಡ್ಡಿಯನ್ನು ಮನ್ನಾ ಮಾಡಿದ್ದೇವೆ ಎಂದರು.
ನಾಗರಿಕರಿಗೆ ಅನುಕೂಲ ಮಾಡಿಕೊಡಲು ಸರ್ಕಾರ “ನಂಬಿಕೆ ನಕ್ಷೆ” ಪಾರದರ್ಶಕ ಕಾರ್ಯಕ್ರಮ ರೂಪಿಸಿದೆ.
ತಂತ್ರಜ್ಞಾನದ ಮೂಲಕ ಪರಿಶೀಲನೆ
ಅನುಮತಿ ನೀಡುವ ವಾಸ್ತುಶಿಲ್ಪಿಗಳು ಹಾಗೂ ಇಂಜಿನಿಯರ್‌ಗಳು ಸರ್ಕಾರದ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಂಡಿರಬೇಕು. ಕಟ್ಟಡದ ನಕ್ಷೆ ನಿಯಮಾನುಸಾರವಾಗಿ ತಂತ್ರಜ್ಞಾನದ ಮೂಲಕ ಪರಿಶೀಲನೆ ಮಾಡಲಾಗುವುದು.
ಆನ್‌ಲೈನ್‌ನಲ್ಲೆ ಶುಲ್ಕ ಪಡೆಯಲು ಅವಕಾಶ ಕಲ್ಪಿಸಲಾಗಿದೆ, ಕಳೆದ ವರ್ಷ 9 ಸಾವಿರ ಕಟ್ಟಡ ನಕ್ಷೆ ಅನುಮತಿ ನೀಡಲಾಗಿದೆ. ಈ ಬಾರಿ 10 ಸಾವಿರ ನಕ್ಷೆ ಅನುಮತಿ ನೀಡಲು ಎಂದು ಅಂದಾಜು ಮಾಡಲಾಗಿದೆ.
ಪ್ರಸ್ತುತ ಇದ್ದ ಯುನಿಟ್ ವಿಸ್ತೀರ್ಣ ಮೌಲ್ಯ ಆಸ್ತಿ ತೆರಿಗೆ ಪದ್ಧತಿಯನ್ನು 2008 ರಲ್ಲಿ ಜಾರಿಗೊಳಿಸಲಾಗಿತ್ತು. ಆಗ ಆಸ್ತಿಗಳನ್ನು 18 ವರ್ಗೀಕರಣ ಮಾಡಲಾಗಿತ್ತು. ಇದರಿಂದ ತೆರಿಗೆ ಪಾವತಿಯಲ್ಲಿ ಗೊಂದಲ ಸೃಷ್ಟಿಯಾಗಿತ್ತು.
ಮಾರ್ಗಸೂಚಿ ದರವನ್ನು ಬೆಂಗಳೂರಿನ ವ್ಯಾಪ್ತಿಯಲ್ಲಿ ಏಕರೂಪ ಆಸ್ತಿ ತೆರಿಗೆ ನಿಗದಿ ಮಾಡಲಾಗಿದೆ. ಈ ವ್ಯವಸ್ಥೆಯಿಂದ ತೆರಿಗೆ ಪದ್ಧತಿ ಸರಳೀಕರಣ ಮಾಡಲಾಗಿದೆ.
ಆರು ವರ್ಗೀಕರಣ
ಈಗ 6 ವರ್ಗೀಕರಣಗಳನ್ನು ಮಾಡಿದ್ದು, ವಸತಿ (ಸ್ವಂತ ಬಳಕೆ ಹಾಗೂ ಬಾಡಿಗೆದಾರರ ಬಳಕೆ), ವಾಣಿಜ್ಯ, ಕೈಗಾರಿಕಾ, ಸ್ಟಾರ್ ಹೊಟೇಲ್, ವಿನಾಯಿತಿ ನೀಡಲಾದ ಹಾಗೂ ಸಂಪೂರ್ಣ ಖಾಲಿ ಜಮೀನುಗಳು ಎಂಬ ವರ್ಗೀಕರಣ ಮಾಡಲಾಗಿದೆ.
ಯಾರೆಲ್ಲಾ ಆಸ್ತಿ ತೆರಿಗೆ ಪಾವತಿಗೆ ಸ್ವಯಂ ಘೋಷಣೆ ಮಾಡಿಕೊಂಡಿಲ್ಲವೋ ಅವರಿಗೆ ಒಂದು ಅವಕಾಶ ನೀಡಲಾಗುತ್ತಿದೆ, ಈ ಮೂಲಕ ನಾಗರಿಕರು ತಮ್ಮ ಆಸ್ತಿಯನ್ನು ಸ್ವಯಂ ಘೋಷಣೆ ಮಾಡಿಕೊಂಡು ಆಸ್ತಿ ತೆರಿಗೆ ಸಂಖ್ಯೆ ಖಾತಾ ನೀಡಲಾಗುವುದು.
ದಾಖಲೆ ಸರಿಯಾಗಿ ಇರುವರಿಗೆ ’ಎ’ ಖಾತಾ ನೀಡುತ್ತೇವೆ, ಕನ್ವರ್ಷನ್ ಮಾಡಿಕೊಳ್ಳದೇ, ಯೋಜನೆ ಇಲ್ಲದವರಿಗೆ ’ಬಿ’ ಖಾತಾ ನೀಡಲಾಗುವುದು ಎಂದರು.