ಪ್ರತಾಪ್ ಸಿಂಹಗೆ ಕೊಕ್, ಡಾ.ಸುಧಾಕರ್‌ಗೆ ಲಕ್
ಬೆಂಗಳೂರು:ಮಾಜಿ ಮುಖ್ಯಮಂತ್ರಿ ಹಾಗೂ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರ ಹೆಗಲಿಗೆ ಕರ್ನಾಟಕ ಲೋಕಸಭಾ ಚುನಾವಣೆ ಜವಾಬ್ದಾರಿಯನ್ನು ಬಿಜೆಪಿ ವರಿಷ್ಠರು ಹೊರಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಿನ್ನೆ ನಡೆದ ಚುನಾವಣಾ ಸಂಸದೀಯ ಮಂಡಳಿ ಸಭೆಯಲ್ಲಿ ಕರ್ನಾಟಕದ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಯಡಿಯೂರಪ್ಪ ಅವರ ಬಹುತೇಕ ಶಿಫಾರಸುಗಳಿಗೆ ಮನ್ನಣೆ ನೀಡುವ ಮೂಲಕ ಅವರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿಯನ್ನೂ ನೀಡಿದ್ದಾರೆ.
ಪಕ್ಷದ ಮುಖಂಡರು, ಕಾರ್ಯಕರ್ತರ ಜೊತೆಗೆ ಸಮಾಜದ ವಿವಿಧ ಸ್ಥರಗಳಲ್ಲಿ ಸೇವೆ ಸಲ್ಲಿಸಿರುವವರಿಗೂ ಈ ಬಾರಿ ಬಿಜೆಪಿ ವರಿಷ್ಠರು ಟಿಕೆಟ್ ನೀಡಿದ್ದಾರೆ.
21 ಕ್ಷೇತ್ರಗಳಿಗೆ ಅಭ್ಯರ್ಥಿ ಅಂತಿಮ
ನಾಲ್ಕು ಕ್ಷೇತ್ರಗಳನ್ನು ಹೊರತುಪಡಿಸಿ 21 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು, ಪಟ್ಟಿ ಯಾವುದೇ ಕ್ಷಣದಲ್ಲಿ ಹೊರಬೀಳಲಿದೆ.
ಎನ್‌ಡಿಎ ಮೈತ್ರಿಕೂಟದಲ್ಲಿ ಭಾಗಿಯಾಗಿರುವ ಜೆಡಿಎಸ್‌ಗೆ ಮಂಡ್ಯ, ಹಾಸನ ಹಾಗೂ ಕೋಲಾರ ಕ್ಷೇತ್ರಗಳನ್ನು ಬಿಟ್ಟುಕೊಟ್ಟಿದ್ದಾರೆ.
ಪ್ರತಾಪ್ ಸಿಂಹ ತೆರೆಮರೆ ಯತ್ನ
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಕೈತಪ್ಪಿದ್ದು, ಅವರು ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಲು ತೆರೆಮರೆಯ ಪ್ರಯತ್ನ ಮುಂದುವರೆಸಿದ್ದಾರೆ.
ಈ ಕ್ಷೇತ್ರಕ್ಕೆ ರಾಜವಂಶಸ್ತ ಯಧುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಟಿಕೆಟ್ ನೀಡಲಾಗಿದೆ. ಆದರೆ ಇದಕ್ಕೆ ರಾಜವಂಶಸ್ತರಿಂದ ಇನ್ನೂ ಪ್ರತಿಕ್ರಿಯೆ ಬಂದಿಲ್ಲ.
ಒಂದು ವೇಳೆ ಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಕರಿಸಿದರೆ, ಚಿಕ್ಕಮಗಳೂರಿಗೆ ಸೇರಿದ ಪಕ್ಷದ ಹಿರಿಯ ಮುಖಂಡ ಡಾ.ಮಂಜುನಾಥ್ ಅವರಿಗೆ ಟಿಕೆಟ್ ದೊರೆಯಲಿದೆ.
ಸುರೇಶ್ ಮಣಿಸಲು ಡಾ. ಮಂಜುನಾಥ್
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದ ಬಿಜೆಪಿ ವರಿಷ್ಠರು, ಹಾಲಿ ಸಂಸದ ಹಾಗೂ ದೇಶ ವಿಭಜನೆ ಬಗ್ಗೆ ಮಾತನಾಡಿದ್ದ ಡಿ.ಕೆ.ಸುರೇಶ್ ಅವರನ್ನು ಮಣಿಸಲು ಖ್ಯಾತ ಹೃದಯ ತಜ್ಞ ಡಾ. ಮಂಜುನಾಥ್ ಅವರಿಗೆ ಟಿಕೆಟ್ ನೀಡಿದೆ.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಹಾವೇರಿಯಿಂದ ಕಣಕ್ಕಿಳಿಸುತ್ತಿದ್ದು ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಇನ್ನೂ ಯಾವುದೇ ಕ್ಷೇತ್ರ ತೋರಿಸಿಲ್ಲ.
ಚಾಮರಾಜನಗರ ಡಾ.ಮೋಹನ್
ಉಳಿದಂತೆ ಚಾಮರಾಜನಗರದಿಂದ ಹಾಲಿ ಸಂಸದ ಶ್ರೀನಿವಾಸ ಪ್ರಸಾದ್ ಅಳಿಯ ಡಾ.ಮೋಹನ್ ಅವರಿಗೆ ಟಿಕೆಟ್ ದೊರೆತಿದೆ.
ದೆಹಲಿ ಮೂಲಗಳ ಪ್ರಕಾರ, ಕರ್ನಾಟಕದ ಹತ್ತಕ್ಕೂ ಹೆಚ್ಚು ಕ್ಷೇತ್ರಗಳ ಟಿಕೆಟ್ ಹಂಚಿಕೆ ಕಾರ್ಯ ಕಷ್ಟಕರವಾಗಿತ್ತಾದರೂ ಅಂತಿಮವಾಗಿ ಯಡಿಯೂರಪ್ಪ ಅವರ ಮಾತಿಗೆ ಬಿಜೆಪಿ ವರಿಷ್ಠರು ಹೆಚ್ಚು ಮನ್ನಣೆ ನೀಡಿದ್ದಾರೆ.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ತೇಜಸ್ವಿ ಸೂರ್ಯ, ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಪಿ.ಸಿ.ಮೋಹನ್.
ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಶೋಭಾ ಕರಂದ್ಲಾಜೆ, ತುಮಕೂರು ಕ್ಷೇತ್ರದಿಂದ ವಿ.ಸೋಮಣ್ಣ, ಶಿವಮೊಗ್ಗ ಕ್ಷೇತ್ರದಿಂದ ಬಿ.ವೈ.ರಾಘವೇಂದ್ರ, ಧಾರವಾಡ ಕ್ಷೇತ್ರದಿಂದ ಪ್ರಹ್ಲಾದ್ ಜೋಷಿ ಕಣಕ್ಕೆ ಇಳಿಯಲಿದ್ದಾರೆ.
ದಾವಣಗೆರೆಯಿಂದ ಜಿ.ಎಂ.ಸಿದ್ದೇಶ್ವರ್, ವಿಜಯಪುರದಿಂದ ಗೋವಿಂದ ಕಾರಜೋಳ್, ಕಲಬುರಗಿಯಿಂದ ಉಮೇಶ್ ಜಾಧವ್, ಚಿಕ್ಕಬಳ್ಳಾಪುರ ಡಾ.ಸುಧಾಕರ್, ಬಳ್ಳಾರಿಯಿಂದ ಶ್ರೀರಾಮುಲು, ಬಾಗಲಕೋಟೆ ಪಿ.ಸಿ ಗದ್ದಿಗೌಡರ್, ಚಿಕ್ಕೋಡಿ ಅಣ್ಣಾಸಾಹೆಬ್ ಜೊಲ್ಲೆ, ಕೊಪ್ಪಳ ಸಂಗಣ್ಣ ಕರಡಿ ಕಣ್ಕಕಿಳಿಯಲಿದ್ದು, ರಾಯಚೂರು, ಕಾರವಾರ, ಮಂಗಳೂರು, ಬೆಂಗಳೂರು ಉತ್ತರ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ವರಿಷ್ಠರಿಗೆ ಬಿಡಲಾಗಿದೆ.
ಬಣಗಳ ಸಂಘರ್ಷ
ಕರ್ನಾಟಕದ ಅಭ್ಯರ್ಥಿಗಳ ಪಟ್ಟಿ ಆಯ್ಕೆ ವಿಷಯದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಹಾಗೂ ಯಡಿಯೂರಪ್ಪ ಬಣಗಳ ನಡುವಣ ಸಂಘರ್ಷದಿಂದ ಬಿಜೆಪಿ ವರಿಷ್ಠರಿಗೆ ತಲೆನೋವು ಶುರುವಾಗಿತ್ತಾದರೂ ಅಂತಿಮವಾಗಿ ಯಡಿಯೂರಪ್ಪ ಅವರ ಮಾತಿಗೆ ಹೆಚ್ಚು ಮನ್ನಣೆ ದೊರೆತಿದೆ.
ಈ ಸಂದರ್ಭದಲ್ಲೂ ವರಿಷ್ಠರು ಚುನಾವಣಾ ಪೂರ್ವ ಸಮೀಕ್ಷೆ ಹಾಗೂ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರ ಅಭಿಪ್ರಾಯವನ್ನೂ ಪಡೆದಿದ್ದಾರೆ.
ದಾವಣಗೆರೆ, ಚಿಕ್ಕಬಳ್ಳಾಪುರ ಸೇರಿದಂತೆ ಮೂರ್ನಾಲ್ಕು ಕ್ಷೇತ್ರಗಳಲ್ಲಿ ಯಡಿಯೂರಪ್ಪ ಅವರು ಸೂಚಿಸಿದ ಅಭ್ಯರ್ಥಿಗಳಿಗೆ ಅವಕಾಶ ಸಿಕ್ಕಿಲ್ಲವಾದರೂ, ಉಳಿದಂತೆ ಬಹುತೇಕ ಕ್ಷೇತ್ರಗಳಲ್ಲಿ ಯಡಿಯೂರಪ್ಪ ಅವರು ಸೂಚಿಸಿದ ಹೆಸರುಗಳಿಗೆ ಮನ್ನಣೆ ನೀಡಲಾಗಿದೆ.
ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿ ಬಿಡಾರ ಹೂಡಿದ್ದ ನಾಯಕರು, ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಒಂದು ಹಂತಕ್ಕೆ ಬರುತ್ತಿದ್ದಂತೆ ಎಲ್ಲರೂ ಹಿಂತಿರುಗಿದ್ದಾರೆ.
ಮಾರ್ಚ್ 15 ರಂದು ಚುನಾವಣಾ ಪ್ರಚಾರಕ್ಕೆ ಪ್ರಧಾನಿ ಚಾಲನೆ
ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 15 ರಂದು ಕರ್ನಾಟಕದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳಿಗೆ ಚಾಲನೆ ನೀಡಿ, ಚುನಾವಣಾ ಪ್ರಚಾರವನ್ನೂ ಆರಂಭಿಸಲಿದ್ದಾರೆ.
ರಾಜ್ಯದಲ್ಲಿ ಮೋದಿ ಅವರ ಮೊದಲ ಚುನಾವಣಾ ಪ್ರಚಾರ ಈ ಕ್ಷೇತ್ರದ ದೇವನಹಳ್ಳಿಯಲ್ಲಿ ನಡೆಯಲಿದ್ದು, ಮಾಜಿ ಸಚಿವ ಹಾಗೂ ಸ್ಥಳೀಯ ಅಭ್ಯರ್ಥಿ ಡಾ.ಕೆ. ಸುಧಾಕರ್ ಅದ್ದೂರಿಯ ಸಿದ್ಧತೆಯಲ್ಲಿ ತೊಡಗಿದ್ದಾರೆ.