ಬೆಂಗಳೂರು:ನಗರದ ವೈಟ್ಫೀಲ್ಡ್ನ ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್ ಒಂದರಂದು ಬಾಂಬ್ ಸ್ಫೋಟ ನಡೆಸಿದ ಶಂಕಿತ ವ್ಯಕ್ತಿ ಕರ್ನಾಟಕ ಮೂಲದವನು ಎಂಬುದು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಅಧಿಕಾರಿಗಳು ನಡೆಸಿದ ತನಿಖೆಯಿಂದ ಪತ್ತೆಯಾಗಿದೆ.
ಆರೋಪಿಗೆ ಬೆಂಗಳೂರಿನ ಪರಿಚಯ ಚೆನ್ನಾಗಿತ್ತು, ಆತ ಯಾವ ಸಂಘಟನೆಗೆ ಸೇರಿದವನು ಎಂಬುದೂ ಎನ್ಐಎ ಅಧಿಕಾರಿಗಳಿಗೆ ಗೊತ್ತಾಗಿದೆ.
ಎನ್ಐಎಗೆ ರಹಸ್ಯ ಮಾಹಿತಿ
ಶಂಕಿತ ಈ ಹಿಂದೆ ಶಿವನಸಮುದ್ರ ಹಾಗೂ ಗುಂಡ್ಲುಪೇಟೆ, ಕೃಷ್ಣಗಿರಿ ಅರಣ್ಯ ಪ್ರದೇಶದಲ್ಲಿ ನಡೆಸಿದ ತರಬೇತಿ, ಟ್ರಯಲ್ ಬಾಂಬ್ ಸ್ಫೋಟ ಮತ್ತು ಸರ್ವೈವಲ್ ಕ್ಯಾಂಪ್ ನಡೆಸಿರುವ ಬಗ್ಗೆ ರಾಷ್ಟ್ರೀಯ ತನಿಖಾ ದಳ (ಎನ್ಐಎ)ಗೆ ಮಾಹಿತಿ ದೊರೆತಿದ್ದು ಆರೋಪಿಗಳ ಬಂಧನ ಕಾರ್ಯಾಚರಣೆ ತೀವ್ರಗೊಂಡಿದೆ.
ಸ್ಫೋಟದ ದಿನವೇ ಶಂಕಿತ ವ್ಯಕ್ತಿ ಚೆನ್ನೈಯಿಂದ ತಿರುಪತಿಗೆ ರೈಲಿನಲ್ಲಿ ತೆರಳಿ ಅಲ್ಲಿಂದ ಬಸ್ ಮೂಲಕ ಬಂದಿದ್ದಾನೆ. ಕೆ.ಆರ್.ಪುರ ಬಸ್ ನಿಲ್ದಾಣದಲ್ಲಿ ಇಳಿದು ನಂತರ ಆತ ಮಹದೇವಪುರದ ಗ್ರಫೇಡ್ ಇಂಡಿಯಾ ಸರ್ಕಲ್ (ಬಸ್ನಿಲ್ದಾಣ)ಗೆ ಬಂದು ಬಸ್ ಬದಲಾಯಿಸಿ, ಬ್ರೂಕ್ ಫೀಲ್ಡ್ ಕಡೆಗಿನ ಬಸ್ನಲ್ಲಿ ಕುಳಿತು ರಾಮೇಶ್ವರಂ ಕೆಫೆಗೆ ಆಗಮಿಸಿದ್ದಾನೆ ಎಂಬುದು ಈವರೆಗಿನ ತನಿಖೆಯಿಂದ ಗೊತ್ತಾಗಿದೆ.
ಸಿಲ್ವರ್ ಪೇಪರ್ ಮತ್ತು ಬ್ಯಾಗ್ ಬಳಸಿ ಅತ್ಯಾಧುನಿಕ ತಂತ್ರಜ್ಞಾನದಿಂದ ಬಾಂಬ್ ಸಿದ್ಧಪಡಿಸಿರುವ ಬಗ್ಗೆ ತನಿಖಾಧಿಕಾರಿಗಳಿಗೆ ಮಾಹಿತಿ ದೊರೆತಿದೆ.
ವಿವಿಧೆಡೆ ಶಂಕಿತನಿಗಾಗಿ ಹುಡುಕಾಟ
ಬಾಂಬ್ ಸ್ಫೋಟ ಸ್ಥಳಕ್ಕೆ ತಲುಪಲು ನೇರ ಮಾರ್ಗ ಬಳಸದೇ ನೂರಾರು ಕಿಲೋಮೀಟರ್ ಸುತ್ತಾಡಿ ಬಂದಿರುವುದಲ್ಲದೆ, ಘಟನೆ ನಂತರ ಮತ್ತೆ ಸುತ್ತಾಡಿಕೊಂಡು ರಹಸ್ಯ ತಾಣ ಸೇರಿರುವ ಸಾಧ್ಯತೆ ಇದೆ ಎಂಬುದು ತನಿಖೆಯಿಂದ ತಿಳಿದುಬಂದಿದ್ದು, ಕರ್ನಾಟಕ, ತೆಲಂಗಾಣ ಮತ್ತು ತಮಿಳುನಾಡಿನ ವಿವಿಧೆಡೆ ಶಂಕಿತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಶಂಕಿತ ವ್ಯಕ್ತಿಯ ಸುಳಿವಿನ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಬಾಂಬ್ ಸ್ಫೋಟ ನಡೆಸಿದ ವ್ಯಕ್ತಿ ಕರ್ನಾಟಕದವ, ಮಲೆನಾಡಿನವ ಎಂಬೆಲ್ಲ ಊಹಾಪೋಹ ಸುದ್ದಿಗಳು ಹರಿದಾಡುತ್ತಿವೆ, ಆರೋಪಿಯನ್ನು ಬಂಧಿಸಿ ತನಿಖೆ ನಡೆಸಿದಾಗ ಸತ್ಯ ಗೊತ್ತಾಗುತ್ತದೆ ಎಂದಿದ್ದಾರೆ.