ಗ್ಯಾರಂಟಿಗಳ ಸಮೀಕ್ಷೆಗೆ ಕೋಟ್ಯಂತರ ರೂ. ವೆಚ್ಚ
ಬೆಂಗಳೂರು:ರೈತರ ಆತ್ಮಹತ್ಯೆ, ಕೃಷಿ ಕಾರ್ಮಿಕರು, ನೇಕಾರರು, ಮೀನುಗಾರರು ಹಾಗೂ ಕುಡಿಯುವ ನೀರಿನ ಸಮಸ್ಯೆ ಕುರಿತು ಸಮೀಕ್ಷೆ ನಡೆಸದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ನೂರಾರು ಕೋಟಿ ರೂ. ವೆಚ್ಚ ಮಾಡಿ ಗ್ಯಾರೆಂಟಿಗಳ ಬಗ್ಗೆ ಸಮೀಕ್ಷೆ ನಡೆಸುತ್ತಿದ್ದಾರೆ ಎಂದು ವಿಧಾನಸಭೆಯಲ್ಲಿನ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಇಂದಿಲ್ಲಿ ಟೀಕಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಹೊಟ್ಟೆಪಾಡಿಗಾಗಿ ಗುಳೆ ಹೋಗುತ್ತಿರುವ ಲಕ್ಷಾಂತರ ಕೂಲಿ ಕಾರ್ಮಿಕರ ಬಗ್ಗೆ ಸಮೀಕ್ಷೆ ನಡೆಸಲಿಲ್ಲ, ರಾಜಧಾನಿ ಬೆಂಗಳೂರಿನಲ್ಲಿ ಎದುರಾಗಿರುವ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಸಮೀಕ್ಷೆ ನಡೆಸಲಿಲ್ಲ ಎಂದಿದ್ದಾರೆ.
ಮುಖ್ಯಮಂತ್ರಿಗೆ ಆತುರ
ಗ್ಯಾರಂಟಿ ಬಗ್ಗೆ ಹತ್ತಾರು ಮೂಲಗಳಿಂದ ಸಮೀಕ್ಷೆ ಮಾಡಿಸಲು ಮುಖ್ಯಮಂತ್ರಿ ಅವರಿಗೆ ಎಲ್ಲಿಲ್ಲದ ಆಸಕ್ತಿ, ಆತುರವಿದೆ.
ಕಳೆದ 9 ತಿಂಗಳ ಆಡಳಿತದಲ್ಲಿ ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಅಭಿವೃದ್ಧಿ ಶೂನ್ಯ ಮಾಡಿದೆ, ಲೋಕಸಭಾ ಚುನಾವಣೆಯಲ್ಲಿ ಜನರಿಗೆ ಮುಖ ತೋರಿಸಲು ಸಮೀಕ್ಷೆಗಳ ಮೂಲಕ ಗ್ಯಾರೆಂಟಿ ಯೋಜನೆಗಳ ಸರ್ಟಿಫಿಕೇಟ್ ಪಡೆಯುವ ಹಠಕ್ಕೆ ಬಿದ್ದಿದೆ.
ಗ್ಯಾರೆಂಟಿ ಯೋಜನೆಗಳು ನಿಜವಾಗಿಯೂ ಜನರಿಗೆ ತಲುಪಿದ್ದರೆ, ಜನ ಮೆಚ್ಚಿದ್ದರೆ ಸಮೀಕ್ಷೆ ನಡೆಸುವ ಅಗತ್ಯವೇನಿದೆ ಎಂದಿದ್ದಾರೆ.
ಜನರ ಬದುಕಿನ ಮೇಲೆ ಗ್ಯಾರಂಟಿ ಯೋಜನೆಗಳ ಪರಿಣಾಮ ತಿಳಿಯಲು, ಯೋಜನೆ ಜಾರಿಯಾಗಿ ಒಂದು ವರ್ಷ ಕಳೆದಿರಬೇಕು, ತರಾತುರಿಯಲ್ಲಿ ಮೂರು ದಿನಗಳಲ್ಲಿ ಸಮೀಕ್ಷೆ ಮಾಡಲು ಹೇಗೆ ಸಾಧ್ಯ.
ಸಮೀಕ್ಷೆ ಅವೈಜ್ಞಾನಿಕ
ಖಾಸಗಿ ಸಂಸ್ಥೆಯ ಸಮೀಕ್ಷೆಗೆ ಈಗಾಗಲೇ ಒಂದು ಕೋಟಿ ರೂ. ವೆಚ್ಚ ಮಾಡಿ, ಈಗ ಮತ್ತೆ ಮೂರು ದಿನದೊಳಗೆ ಸಮೀಕ್ಷೆ ಪೂರ್ಣಗೊಳಿಸುವಂತೆ ಸೂಚಿಸಿರುವುದು ಅವೈಜ್ಞಾನಿಕ.
ಗ್ಯಾರೆಂಟಿ ಅನುಷ್ಠಾನಕ್ಕೆ ಸಮಿತಿ ರಚಿಸಿ, ಸಿಕ್ಕಸಿಕ್ಕವರಿಗೆಲ್ಲಾ ಸಂಪುಟ ದರ್ಜೆ ಸ್ಥಾನಮಾನ ನೀಡಿ 16 ಕೋಟಿ ರೂ. ದುಂದು ವೆಚ್ಚ ಮಾಡಿದ್ದಲ್ಲದೆ, 1.2 ಲಕ್ಷ ’ಗ್ಯಾರೆಂಟಿ ಸ್ವಯಂ ಸೇವಕರ’ ಹುದ್ದೆ ಸೃಷ್ಟಿ ಮೂಲಕ 12 ಕೋಟಿ ರೂ. ವ್ಯರ್ಥ ಮಾಡಲಾಗಿದೆ ಎಂದು ಟೀಕಿಸಿದ್ದಾರೆ.