ಮಾರ್ಚ್ 21 ರಂದು ಚೆನ್ನೈನ ಅಪೊಲೋ ಆಸ್ಪತ್ರೆ
ಬೆಂಗಳೂರು:ಲೋಕಸಭಾ ಚುನಾವಣಾ ಹೊಸ್ತಿಲಲ್ಲೇ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತೊಮ್ಮೆ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಲಿದ್ದಾರೆ.
ಇದರ ಮಧ್ಯೆ ಲೋಕಸಭಾ ಚುನಾವಣಾ ತಯಾರಿ ಹಾಗೂ ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಕುಮಾರಸ್ವಾಮಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಉದ್ದೇಶದಿಂದ ದೆಹಲಿಗೆ ಬರುವಂತೆ ಬಿಜೆಪಿ ವರಿಷ್ಠರು ಆಹ್ವಾನಿಸಿದ್ದಾರೆ.
ಬಹುತೇಕ ನಾಳೆ ದೆಹಲಿಗೆ ತೆರಳಲಿರುವ ಕುಮಾರಸ್ವಾಮಿ, ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಷಾ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಲಿದ್ದಾರೆ.
ಕುಮಾರಸ್ವಾಮಿ ಅವರಿಗೆ ವಿಶ್ರಾಂತಿ ಅಗತ್ಯ
ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗುವ ಕುಮಾರಸ್ವಾಮಿ ಅವರಿಗೆ ವಿಶ್ರಾಂತಿ ಅಗತ್ಯವಿರುವುದರಿಂದ ಅವರು ಲೋಕಸಭಾ ಚುನಾವಣಾ ಕಣಕ್ಕಿಳಿಯುವುದು ಕ್ಲಿಷ್ಟಕರ, ಆದರೆ, ನಾಳೆ ದೆಹಲಿಯಲ್ಲಿ ಪ್ರಧಾನಿ ಅವರು ಚುನಾವಣಾ ಕಣಕ್ಕಿಳಿಯುವಂತೆ ಸಲಹೆ ಮಾಡಿದರೆ ಮಂಡ್ಯದಲ್ಲಿ ಸ್ಪರ್ಧಿಸಲಿದ್ದಾರೆ.
ವಿಧಾನಮಂಡಲದ ಅಧಿವೇಶನ ನಡೆಯುವ ಸಂದರ್ಭದಲ್ಲೇ ಕುಮಾರಸ್ವಾಮಿ ಅವರಿಗೆ ಆರೋಗ್ಯದಲ್ಲಿ ಏರುಪೇರು ಕಂಡ ತಕ್ಷಣ ಡಾ. ಮಂಜುನಾಥ್ ಚೆನ್ನೈನ ಅಪೊಲೋ ಆಸ್ಪತ್ರೆಯ ಪರಿಣಿತ ವೈದ್ಯರ ಬಳಿ ಕಳುಹಿಸಿದ್ದರು.
ಅಲ್ಲಿ ಮೂರು ದಿನಗಳ ಕಾಲ ಚಿಕಿತ್ಸೆ ಪಡೆದ ನಂತರ ಮತ್ತೊಂದು ಶಸ್ತ್ರ ಚಿಕಿತ್ಸೆ ಅಗತ್ಯವಿದ್ದು ಇದನ್ನು ನಮ್ಮಿಂದ ಮಾಡಲು ಸಾಧ್ಯವಿಲ್ಲ ಎಂದು ಅಮೆರಿಕ ವೈದ್ಯರನ್ನು ಅವರೇ ಸಂಪರ್ಕಿಸಿ, ಕುಮಾರಸ್ವಾಮಿ ಅವರ ಶಸ್ತ್ರ ಚಿಕಿತ್ಸೆಗೆ ಸಮಯ ನಿಗದಿ ಮಾಡಿದ್ದರು.
ಮಾರ್ಚ್ 21 ರಂದು ಚೆನ್ನೈನ ಅಪೊಲೋದಲ್ಲೇ ಮೂರನೇ ಬಾರಿಗೆ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಲಿದ್ದಾರೆ.
ಅಮೆರಿಕದ ವೈದ್ಯರ ತಂಡ ಚೆನ್ನೈಗೆ
ಕುಮಾರಸ್ವಾಮಿ ಅವರಿಗೆ ಶಸ್ತ್ರ ಚಿಕಿತ್ಸೆ ಮಾಡಲು ಅಮೆರಿಕದಿಂದ ಪರಿಣಿತರ ವೈದ್ಯರ ತಂಡವೇ ಮಾರ್ಚ್ 19 ಕ್ಕೆ ಚೆನ್ನೈಗೆ ಬರಲಿದ್ದಾರೆ, ಅಂದೇ ಕುಮಾರಸ್ವಾಮಿ ಅವರು ಆಸ್ಪತ್ರೆಗೆ ದಾಖಲಾಗಲಿದ್ದಾರೆ.
ಶಸ್ತ್ರ ಚಿಕಿತ್ಸೆ ನಂತರ ಮೂರು ದಿನಗಳ ಕಾಲ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆದು ಮಾರ್ಚ್ 25 ರಂದು ಹಿಂತಿರುಗಲಿದ್ದಾರೆ.
ಈ ಹಿಂದೆಯೂ ಕುಮಾರಸ್ವಾಮಿ ಅವರಿಗೆ ತೆರೆದ ಹೃದಯ ಶಸ್ತ್ರ ಚಿಕಿತ್ಸೆ ನಡೆದ ಸಂದರ್ಭದಲ್ಲೇ ವೈದ್ಯರು ಹೆಚ್ಚು ಆಯಾಸ ಮಾಡಿಕೊಳ್ಳಬಾರದು ಎಂದು ಸಲಹೆ ಮಾಡಿದ್ದರು.
ಆದರೆ ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಹಗಲು-ರಾತ್ರಿ ಎನ್ನದೇ ಚುನಾವಣಾ ಪ್ರಚಾರ ನಡೆಸಿದ್ದು ಮತ್ತು ವಿಶ್ರಾಂತಿ ಇಲ್ಲದೆ, ಶ್ರಮಿಸಿದ್ದು ಹೃದಯ ಅಸ್ವಸ್ತತೆಗೆ ಕಾರಣವಾಗಿದೆ ಎಂದು ವೈದ್ಯರು ಹೇಳಿದ್ದಾರೆ.