ಜೂನ್ 4 ಕ್ಕೆ ಲೋಕಸಭೆ ಚುನಾವಣೆ ಫಲಿತಾಂಶ ; ಸುರಪುರ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ
ಬೆಂಗಳೂರು:ಲೋಕಸಭಾ ಚುನಾವಣೆ ದಿನಾಂಕಗಳು ಘೋಷಣೆಯಾಗಿದ್ದು, ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಏಪ್ರಿಲ್ 26 ರಂದು ಮೊದಲ ಹಂತದಲ್ಲಿ ಮತ್ತು ಮೇ 7 ರಂದು ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ, ಜೂನ್ 4ಕ್ಕೆ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ.
ಮುಖ್ಯಚುನಾವಣಾ ಆಯುಕ್ತ ರಾಜೀವ್ ಕುಮಾರ್ ದೆಹಲಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.
ಕರ್ನಾಟಕದಲ್ಲಿ ಮೊದಲ ಹಂತದಲ್ಲಿ ದಕ್ಷಿಣ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 26ರಂದು ಹಾಗೂ ಉತ್ತರ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ಮೇ 7 ರಂದು ಮತದಾನ ನಡೆಯಲಿದೆ.
ಮೊದಲ ಹಂತದ 14 ಕ್ಷೇತ್ರಗಳು
ಮೊದಲ ಹಂತದಲ್ಲಿ ಏಪ್ರಿಲ್ 26 ರಂದು ಚುನಾವಣೆ ನಡೆಯಲಿರುವ ಕ್ಷೇತ್ರಗಳಲ್ಲಿ ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಹಾಸನ, ಉಡುಪಿ-ಚಿಕ್ಕಮಗಳೂರು, ಚಿತ್ರದುರ್ಗ, ಮೈಸೂರು-ಕೊಡಗು, ಚಾಮರಾಜನಗರ ಮತ್ತು ದಕ್ಷಿಣ ಕನ್ನಡ ಸೇರಿವೆ.
ಕರ್ನಾಟಕದಲ್ಲಿ ನಡೆಯಲಿರುವ ಮೊದಲ ಹಂತದ ಚುನಾವಣೆಗೆ ಅಧಿಸೂಚನೆ ಮಾರ್ಚ್ 28 ರಂದು ಹೊರಬೀಳಲಿದ್ದು ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ. ನಾಮಪತ್ರ ಸಲ್ಲಿಕೆಗೆ ಏಪ್ರಿಲ್ 4 ಕೊನೆಯ ದಿನವಾಗಿದೆ. ನಾಮಪತ್ರ ಪರಿಶೀಲನೆ ಏಪ್ರಿಲ್ 5 ರಂದು ನಡೆಯಲಿದ್ದು, ನಾಮಪತ್ರ ಹಿಂತೆಗೆದುಕೊಳ್ಳಲು ಏಪ್ರಿಲ್ 8 ಕೊನೆಯ ದಿನವಾಗಿದೆ. ಏಪ್ರಿಲ್ 26 ರಂದು ಮತದಾನ ನಿಗದಿಯಾಗಿದೆ.
ಎರಡನೇ ಹಂತದ 14 ಕ್ಷೇತ್ರಗಳು
ಎರಡನೇ ಹಂತದಲ್ಲಿ ಮೇ 7 ರಂದು ಚುನಾವಣೆ ನಡೆಯಲಿರುವ ಕ್ಷೇತ್ರಗಳಲ್ಲಿ ಬೀದರ್, ಚಿಕ್ಕೋಡಿ, ಬೆಳಗಾವಿ, ಕಲಬುರಗಿ, ವಿಜಯಪುರ, ಬಾಗಲಕೋಟೆ, ಕೊಪ್ಪಳ, ರಾಯಚೂರು, ಬಳ್ಳಾರಿ, ಹಾವೇರಿ-ಗದಗ, ದಾವಣಗೆರೆ, ಶಿವಮೊಗ್ಗ, ಧಾರವಾಡ, ಉತ್ತರ ಕನ್ನಡ ಸೇರಿವೆ.
ಇದರೊಂದಿಗೆ ಮೇ 7 ರಂದು ಎರಡನೇ ಹಂತದಲ್ಲಿ ನಡೆಯುವ ಕೊಪ್ಪಳ ಲೋಕಸಭಾ ಕ್ಷೇತ್ರದ ಚುನಾವಣೆ ಸಂದರ್ಭದಲ್ಲೇ ಶಾಸಕ ರಾಜಾವೆಂಕಟಪ್ಪ ನಾಯಕ ಅವರ ನಿಧನದಿಂದ ತೆರವಾಗಿರುವ ಕರ್ನಾಟಕದ ಸುರಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯೂ ನಡೆಯಲಿದೆ.
ಕರ್ನಾಟಕದಲ್ಲಿ ನಡೆಯಲಿರುವ ಎರಡನೇ ಹಂತದ ಚುನಾವಣೆಗೆ ಅಧಿಸೂಚನೆ ಏಪ್ರಿಲ್ 12 ರಂದು ಹೊರಬೀಳಲಿದ್ದು, ನಾಮಪತ್ರ ಸಲ್ಲಕೆಗೆ ಏಪ್ರಿಲ್ 19 ಕೊನೆಯ ದಿನವಾಗಿದೆ. ನಾಮಪತ್ರ ಪರಿಶೀಲನೆ ಏಪ್ರಿಲ್ 20 ರಂದು ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಏಪ್ರಿಲ್ 22 ಕೊನೆಯ ದಿನವಾಗಿದೆ. ಮೇ 7 ರಂದು ಮತದಾನ ನಡೆಯಲಿದೆ.
ರಾಷ್ಟ್ರಾದ್ಯಂತ 7 ಹಂತದ ಚುನಾವಣೆ
ರಾಷ್ಟ್ರಾದ್ಯಂತ 543 ಲೋಕಸಭಾ ಕ್ಷೇತ್ರಗಳಿಗೆ ಒಟ್ಟು ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮೊದಲನೇ ಹಂತ ಏಪ್ರಿಲ್ 19 ಮತ್ತು ಎರಡನೇ ಹಂತ ಏಪ್ರಿಲ್ 26, ಮೂರನೇ ಹಂತ ಮೇ 7, ನಾಲ್ಕನೇ ಹಂತ ಮೇ 13, ಐದನೇ ಹಂತ ಮೇ 20, ಆರನೇ ಹಂತ ಮೇ 25 ಮತ್ತು ಏಳನೇ ಹಾಗೂ ಕೊನೆಯ ಹಂತ ಜೂನ್ 1 ರಂದು ಮತದಾನ ನಡೆಯಲಿದೆ.
ಒಟ್ಟು 96.8 ಕೋಟಿ ಮತದಾರರಿದ್ದು, ಪುರುಷ ಮತದಾರರ ಸಂಖ್ಯೆ 49.71 ಕೋಟಿಯಾಗಿದ್ದು, ಮಹಿಳಾ ಮತದಾರರ ಸಂಖ್ಯೆ 47.1 ಕೋಟಿಯಾಗಿದೆ. 1.8 ಕೋಟಿ ಹೊಸ ಮತದಾರರು ಈ ಬಾರಿ ಮತದಾನದ ಹಕ್ಕು ಪಡೆದಿದ್ದಾರೆ.
ಚುನಾವಣಾ ಕಾರ್ಯಕ್ಕೆ 1.5 ಕೋಟಿ ಸಿಬ್ಬಂದಿ ನೇಮಕವಾಗಲಿದ್ದಾರೆ. ಕೇಂದ್ರ ಚುನಾವಣಾ ಆಯೋಗವು ದೇಶಾದ್ಯಂತ ಒಟ್ಟು 2,100 ಮುಖ್ಯ ಚುನಾವಣಾ ವೀಕ್ಷಕರನ್ನು ನೇಮಿಸಿದೆ.
85 ವರ್ಷ ಮೀರಿದ ಮತದಾರರು ಮತಗಟ್ಟೆಗೆ ಬರಲು ಸಾಧ್ಯವಾಗದೆ, ಮನೆಯಿಂದಲೇ ಮತದಾನ ಮಾಡಲು ಇಚ್ಛಿಸಿದರೆ ಮನೆಯಿಂದಲೇ ಮತದಾನ ಮಾಡುವ ವ್ಯವಸ್ಥೆ ಮಾಡಲಾಗುವುದು.
ಮತಗಟ್ಟೆಗಳಲ್ಲಿ ಕುಡಿಯುವ ನೀರು, ಶೌಚಾಲಯ, ವಿಶೇಷಚೇತನರಿಗೆ ರ‍್ಯಾಂಪ್, ಗಾಲಿ ಕುರ್ಚಿ ಸೇರಿದಂತೆ ಎಲ್ಲಾ ಮೂಲಸೌಕರ್ಯಗಳನ್ನು ಕಲ್ಪಿಸಲಾಗುವುದು.
ಮತದಾರರಿಗೆ ಆಮಿಷ ವಿರುದ್ಧ ಕಠಿಣ ಕ್ರಮ
ಚುನಾವಣಾ ಮಾರ್ಗಸೂಚಿಗಳ ಪಾಲನೆ ಬಗ್ಗೆ ನಿಗಾ ವಹಿಸಲು ಈ ಬಾರಿ ಡ್ರೋನ್ ಬಳಸಲಾಗುತ್ತಿದೆ. ಮತದಾರರಿಗೆ ಆಮಿಷ ಒಡ್ಡುವಂತಹ ಉಡುಗೊರೆ ನೀಡುವುದು, ಫೋನ್ ಪೇ ಮತ್ತು ಗೂಗಲ್ ಪೇ ಚಟುವಟಿಕೆಗಳ ಮೇಲೆ ನಿಗಾ ಇಡಲಾಗುವುದು.
ಮಾದರಿ ಚುನಾವಣಾ ನೀತಿ ಸಂಹಿತೆ ಇಂದಿನಿಂದಲೇ ಜಾರಿಗೆ ಬಂದಿದ್ದು, ಮಾರ್ಗಸೂಚಿಗಳನ್ನು ತಪ್ಪದೆ ಪಾಲಿಸುವಂತೆ ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.