ಪ್ರಚಾರಕ್ಕೆ ಬರಲು ಅಮಿತ್ ಶಾಗೆ ಮನವಿ
ಬೆಂಗಳೂರು:ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರೊಂದಿಗೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್.ಮಂಜುನಾಥ್ ಅವರು ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಲೋಕಸಭೆ ಚುನಾವಣೆ ಕುರಿತಂತೆ ಮಾತುಕತೆ ನಡೆಸಿದರು.
ಶಾ ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಂಜುನಾಥ್, ಲೋಕಸಭೆ ಚುನಾವಣೆ ಒಂದು ಆರೋಗ್ಯಕರ ಸ್ಪರ್ಧೆಯಾಗಬೇಕು. ಮಾತನಾಡುವಾಗ ಇತಿಮಿತಿಯಲ್ಲಿರಬೇಕು. ಇದೊಂದು ಧರ್ಮಯುದ್ಧವೆಂದು ಪರಿಗಣಿಸಿದ್ದೇನೆ. ಅಧರ್ಮದ ಬಗ್ಗೆ ಮಾತನಾಡುವುದಿಲ್ಲ ಎಂದು ಹೇಳಿದರು.
ಹೃದ್ರೋಗ ತಜ್ಞನಾಗಿ 35 ವರ್ಷಗಳ ದೀರ್ಘ ಕಾಲ ಸೇವೆ ಸಲ್ಲಿಸುವಾಗ, ನಿರ್ದೇಶಕನಾಗಿ ಕೆಲಸ ಮಾಡುವಾಗ ಸಾಮಾಜಿಕ, ಆರ್ಥಿಕ ಪರಿಸ್ಥಿತಿ ಹಾಗೂ ಸ್ಥಳೀಯ ಸಮಸ್ಯೆಗಳ ಮಾಹಿತಿಯನ್ನು ರೋಗಿಗಳು ವೈದ್ಯರ ಗಮನಕ್ಕೆ ತರುತ್ತಾರೆ. ಹೀಗಾಗಿ ಸಮಗ್ರ ಮಾಹಿತಿಯ ಅರಿವಿರುತ್ತದೆ ಎಂದರು.
ಡಾ. ಮಂಜುನಾಥ್ ಯಾರು ಎಂಬುದನ್ನು ಜನರೇ ಹೇಳುತ್ತಾರೆ
ಮಂಜುನಾಥ್ ಅವರು, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಅಳಿಯರಾಗಿ ಮಾತ್ರ ಪರಿಚಯವೋ ಅಥವಾ ವೈದ್ಯರಾಗಿ ಜನ ಸೇವೆ ಮಾಡುವ ಮೂಲಕ ಗುರುತಿಸಿಕೊಂಡಿದ್ದಾರೆಯೋ ಎಂಬುದನ್ನು ಜನರನ್ನೇ ಕೇಳಿದರೆ ಹೇಳುತ್ತಾರೆ ಎಂದು ತಿಳಿಸಿದ ಅವರು, ರಾಜಕೀಯಕ್ಕೆ ಬಂದಿರೋದು ಸೇವೆ ಮಾಡುವ ಉದ್ದೇಶದಿಂದಲೇ ಹೊರತು, ರಾಜಕೀಯ ಮಾಡಲು ಬಂದಿಲ್ಲ. 35 ವರ್ಷದ ಸುದೀರ್ಘ ಆರೋಗ್ಯ ಕ್ಷೇತ್ರದ ಸೇವೆಯಲ್ಲಿ, ಅದರಲ್ಲೂ ಹೃದ್ರೋಗ ಚಿಕಿತ್ಸೆ ನೀಡುವ ವಿಚಾರದಲ್ಲಿ ಹಲವಾರು ಬದಲಾವಣೆ ಹಾಗೂ ಸುಧಾರಣೆ ತಂದ ಅನುಭವವಿದೆ ಎಂದು ಅವರು ತಿಳಿಸಿದರು.
ಪಕ್ಷಾತೀತವಾಗಿ ಹಿತೈಷಿಗಳು, ಬೇರೆ ಬೇರೆ ರಾಜ್ಯದವರೂ ಸಹ, ನಿಮ್ಮ ದೀರ್ಘಕಾಲದ ಅನುಭವವನ್ನು ಸದ್ಬಳಕೆ ಮಾಡಬೇಕು. ಕೇವಲ ತಜ್ಞರಾಗಿ, ವೈದ್ಯರಾಗಿ ಸೇವೆ ಮಾಡಿಲ್ಲ; ಉತ್ತಮ ನಿರ್ದೇಶಕರಾಗಿ, ಎಂಜಿನಿಯರಾಗಿ, ವಾಸ್ತುಶಿಲ್ಪಿಯಾಗಿ, ಮಾರ್ಗದರ್ಶಕರಾಗಿ ಕೆಲಸ ಮಾಡಿದ್ದೀರಿ. ನಿಮ್ಮ ಅನುಭವ ರಾಷ್ಟ್ರಮಟ್ಟದಲ್ಲಿ ಸದ್ಬಳಕೆ ಆಗಬೇಕು. ಅದಕ್ಕೊಂದು ವೇದಿಕೆಯಾಗಿ ಚುನಾವಣೆಗೆ ಸ್ಪರ್ಧಿಸಬೇಕು ಎಂಬ ಸಲಹೆ ಮಾಡಿದ್ದರಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿರುವುದಾಗಿ ಮಂಜುನಾಥ್ ಹೇಳಿದರು.
ಬಿಜೆಪಿ ಪ್ರಾಥಮಿಕ ಸದಸ್ಯತ್ವ ಪಡೆಯಲಾಗಿದೆ
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಹಿನ್ನೆಲೆಯಲ್ಲಿ ಶಾ ಅವರನ್ನು ಸೌಹಾರ್ಧಯುತವಾಗಿ ಭೇಟಿಯಾಗಿ ಧನ್ಯವಾದವನ್ನು ಹೇಳಿದ್ದೇನೆ. ಇದುವರೆಗೂ ಶಾ ಅವರನ್ನು ಭೇಟಿಯಾಗಿರಲಿಲ್ಲ. ವಿಶೇಷವಾದ ಚರ್ಚೆ ಅವರೊಂದಿಗೆ ಮಾಡಿಲ್ಲ. ಪ್ರಚಾರಕ್ಕಾಗಿ ಕ್ಷೇತ್ರಕ್ಕೆ ಆಗಮಿಸುವಂತೆ ಮನವಿ ಮಾಡಿದ್ದು, ಬರುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದರು.
ಕರ್ನಾಟಕದಲ್ಲಿ ಏಪ್ರಿಲ್ 26 – ಮೇ 7ರಂದು ಮತದಾನ
ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು, ಬಿಜೆಪಿಯ ಬದ್ಧತೆ, ದೇವೇಗೌಡರ ಸುದೀರ್ಘ ಅವಧಿಯ ಸೇವೆಯೂ ಚುನಾವಣೆಯಲ್ಲಿ ಗಣನೆಗೆ ಬರಲಿದೆ. ಈಗಾಗಲೇ ಬಿಜೆಪಿ ಪ್ರಾಥಮಿಕ ಸದಸ್ಯ ಪಡೆಯಲಾಗಿದ್ದು, ಮಾರ್ಚ್ 18ರಂದು ಬೆಂಗಳೂರಿನಲ್ಲಿ ಸಾಂಪ್ರದಾಯಿಕವಾಗಿ ಪಕ್ಷ ಸೇರ್ಪಡೆಯಾಗುವುದಾಗಿ ಹೇಳಿದರು.
ಅಮಿತ್ ಶಾ ಅವರ ಭೇಟಿ ಸಂದರ್ಭದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮತ್ತು ಮಂಜುನಾಥ್ ಅವರ ಪತ್ನಿ ಅನಸೂಯ ಮಂಜುನಾಥ್ ಅವರು ಉಪಸ್ಥಿತರಿದ್ದರು.
ಶೇ.27.5ರಷ್ಟು ರಾಜ್ಯ ಸರ್ಕಾರಿ ನೌಕರರ ವೇತನ ಹೆಚ್ಚಳಕ್ಕೆ ಶಿಫಾರಸು