ಸುಳ್ಳುಗಳ ಮೂಲಕ ಅಧಿಕಾರಕ್ಕೆ ಬಂದಿತು
ಬೆಂಗಳೂರು:ಕರ್ನಾಟಕದಲ್ಲಿನ ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಹಣ ಲೂಟಿ ಮಾಡುವ ಎಟಿಎಂ ಮಾಡಿಕೊಂಡಿದೆ, ಅಭಿವೃದ್ಧಿ ಕಾರ್ಯಗಳಿಗೂ ಹಣವಿಲ್ಲದೆ ಬರೀ ಲೂಟಿಯಲ್ಲಿ ತೊಡಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದರು.
ಶಿವಮೊಗ್ಗದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿದ ಅವರು, ಜನತೆಗೆ ನನ್ನ ನಮಸ್ಕಾರಗಳು, ಕರ್ನಾಟಕದ ಕೋಟಿ ಕೋಟಿ ಜನರಿಗೆ ನನ್ನ ನಮಸ್ಕಾರಗಳು ಎಂದು ಮಾತು ಆರಂಭಿಸಿ, ಸಿಗಂಧೂರು ಚೌಡೇಶ್ವರಿಯವರಿಗೆ ನಮನಗಳು ಎಂದರು.

ದೆಹಲಿ ಕಲೆಕ್ಷನ್‌ಗಾಗಿಯೇ ಮಂತ್ರಿ
ರಾಜ್ಯದಲ್ಲಿ ಸಿಎಂ, ಭವಿಷ್ಯದ ಸಿಎಂ, ಸೂಪರ್ ಸಿಎಂ, ಶ್ಯಾಡೋ ಸಿಎಂಗಳ ಆಡಳಿತವಿದೆ, ದೆಹಲಿ ಕಲೆಕ್ಷನ್‌ಗಾಗಿಯೇ ಮಂತ್ರಿಯಿದ್ದಾರೆ, ಕಾಂಗ್ರೆಸ್ ರಾಜ್ಯದ ಖಜಾನೆ ಖಾಲಿ ಮಾಡಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ಸುಳ್ಳುಗಳ ಮೂಲಕ ಅಧಿಕಾರಕ್ಕೆ ಬಂತು, ಬಳಿಕ ಕೇಂದ್ರ, ಮೋದಿ ಮೇಲೆ ಆರೋಪ ಹೊರಿಸುತ್ತಿದೆ.
ಅಧಿಕಾರಕ್ಕಾಗಿ ಕಾಂಗ್ರೆಸ್ ಏನನ್ನು ಬೇಕಾದರೂ ಮಾಡುತ್ತದೆ, ಬ್ರಿಟಿಷರ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದೆ, ಕರ್ನಾಟಕದ ಸಂಸದರೊಬ್ಬರು ರಾಜ್ಯವನ್ನೇ ಪ್ರತ್ಯೇಕ ರಾಷ್ಟ್ರ ಮಾಡುವ ಮಾತನ್ನು ಆಡುತ್ತಿದ್ದಾರೆ. ಅಂಥ ಸಂಸದರನ್ನು ವಜಾ ಮಾಡುವ ಬದಲು ಅವರನ್ನು ಬಚಾವ್ ಮಾಡಲು ಕಾಂಗ್ರೆಸ್ ಮುಂದಾಯಿತು. ಇದಕ್ಕೆ ತಕ್ಕ ಪಾಠವನ್ನು ಜನತೆ ನೀಡುವುದು ಖಚಿತ ಎಂದರು.
ನಾರಿ ಶಕ್ತಿ ದೇಶದ ಸುರಕ್ಷಾ ಕವಚ
ನಾರಿ ಶಕ್ತಿ ನನಗೆ ಮತದಾರರಾಗಿ ಕಾಣುವುದಿಲ್ಲ, ಅವರು ದೇಶದ ಸುರಕ್ಷಾ ಕವಚ, ಕರ್ನಾಟಕದ ಮೂಲೆ ಮೂಲೆಯಲ್ಲಿ ಬಿಜೆಪಿಗೆ ಅಪಾರ ಜನಬೆಂಬಲ ಸಿಗುತ್ತಿದೆ.
ನಾರಿಶಕ್ತಿಯನ್ನು ಕಾಂಗ್ರೆಸ್ ಮತ್ತು ಅದರ ಸಹಯೋಗಿ ಪಕ್ಷಗಳು ನಾಶ ಮಾಡಲು ಹೊರಟಿವೆ, ಹೆಣ್ಣು ದೇವಿಯಿದ್ದಂತೆ, ಈ ನಾರಿಶಕ್ತಿಯನ್ನು ಕೆಣಕಿದವರನ್ನು ಜೂನ್ 4ರಂದು ನಾಶಪಡಿಸುವ ತೀರ್ಪು ಬರಬೇಕು.
ಕರ್ನಾಟಕದ ಮತದಾರರು ವಿಭಜನಕಾರಿ ಶಕ್ತಿಗಳಿಗೆ ತಕ್ಕ ಉತ್ತರ ನೀಡುವ ಸಂಕಲ್ಪ ತೊಡಬೇಕು, ರಾಜ್ಯದ ವಿಕಸನಕ್ಕೆ ಎನ್‌ಡಿಎ ಸರ್ಕಾರ ಕಳೆದ 10 ವರ್ಷಗಳಲ್ಲಿ ಹಲವು ಜನಪರ ಯೋಜನೆಗಳನ್ನು ನೀಡಿದೆ, ತುರ್ತು ವೈದ್ಯಕೀಯ ಚಿಕಿತ್ಸೆಯಡಿ ಕರ್ನಾಟಕದ 75 ಲಕ್ಷ ಜನರು ಸೌಲಭ್ಯ ಪಡೆದುಕೊಂಡಿದ್ದಾರೆ, ಶಿವಮೊಗ್ಗ ಜಿಲ್ಲೆ ಒಂದರಲ್ಲೇ 5 ಲಕ್ಷಕ್ಕೂ ಹೆಚ್ಚು ಆಯುಷ್ಮಾನ್ ಕಾರ್ಡ್‌ದಾರರಿದ್ದಾರೆ.
ರಾಜ್ಯದ 40 ಲಕ್ಷ ಮನೆಗಳಿಗೆ ಉಚಿತ ಎಲ್‌ಪಿಜಿ ಸಂಪರ್ಕ ಒದಗಿಸಲಾಗಿದೆ, 9 ಲಕ್ಷ ಮಂದಿ ಪ್ರಧಾನಮಂತ್ರಿ ಆವಾಸ್ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ, ಇವರಲ್ಲಿ ಬಹಳಷ್ಟು ಮಂದಿ ಎಸ್‌ಸಿ, ಎಸ್‌ಟಿ, ಒಬಿಸಿ ಜನರೂ ಇದ್ದಾರೆ. ಎಲ್ಲ ವರ್ಗದ ಜನರಿಗಾಗಿ ಬಿಜೆಪಿ ಶ್ರಮಿಸುತ್ತಿದೆ.

ತುಮಕೂರು-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ
ತುಮಕೂರು-ಶಿವಮೊಗ್ಗ ನಡುವೆ ಆರು ಸಾವಿರ ಕೋಟಿ ರೂ. ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲಾಗುತ್ತಿದೆ, ಇದರಿಂದ ಶಿವಮೊಗ್ಗ-ಬೆಂಗಳೂರು ನಡುವಿನ ಪ್ರಯಾಣ ಸಮಯದಲ್ಲಿ ಎರಡು ಗಂಟೆ ಉಳಿತಾಯವಾಗಲಿದೆ.
ಮುಂದಿನ ಐದು ವರ್ಷ ಎನ್‌ಡಿಎ ಸರ್ಕಾರ ಜನರ ಮನೆ ಬಾಗಿಲಿಗೆ ಇನ್ನೂ ಹೆಚ್ಚಿನ ಅಭಿವೃದ್ಧಿಗೆ ಕಾರ್ಯಗಳನ್ನು ತಲುಪಿಸಲಿದೆ.
ನಾರಿಶಕ್ತಿಯನ್ನು ದಮನ ಮಾಡುವ ಪ್ರಯತ್ನದಲ್ಲಿ ನಿರತರಾಗಿರುವ ವಿರೋಧ ಪಕ್ಷಗಳು, ಜಾತಿ, ಸಮುದಾಯ, ಭಾಷೆ, ದೇಶ ಮತ್ತು ಕರ್ನಾಟಕದ ವಿಭಜನೆಯ ಮಾತನಾಡುತ್ತಿದ್ದಾರೆ.
’ಈ ಬಾರಿ 400 ಮೀರಿ’
ಇಂತಹ ವಿಭಜನಕಾರಿ ಶಕ್ತಿಗಳ ನಾಶಕ್ಕೆ ಪಣತೊಟ್ಟು ರಾಜ್ಯದ ಜನತೆ ಏಪ್ರಿಲ್ 26 ಮತ್ತು ಮೇ 7 ರಂದು ಮನೆಯಿಂದ ಹೊರಬಂದು ಮತದಾನ ಮಾಡಬೇಕು ಎಂದು ಪ್ರಧಾನಮಂತ್ರಿ ಕರೆ ನೀಡಿದ್ದಾರೆ. ರಾಜ್ಯದ ಎಲ್ಲಾ 28 ಕ್ಷೇತ್ರಗಳಲ್ಲೂ ಎನ್‌ಡಿಎ ಅಭ್ಯರ್ಥಿಗಳು ಜಯ ಗಳಿಸುವ ಮೂಲಕ ’ಈ ಬಾರಿ 400 ಮೀರಿ’ ಸಾಗಬೇಕು ಎಂದರು.
ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳ ಒಕ್ಕೂಟಕ್ಕೆ ದೇಶದ ವಿಕಸನದ ಅಜೆಂಡಾ ಇಲ್ಲಾ, ಬರೀ ಸುಳ್ಳುಗಳನ್ನೇ ಹೇಳುತ್ತಿವೆ, ಸುಳ್ಳು ಭರವಸೆಗಳನ್ನು ನೀಡುತ್ತಿವೆ, ಪದೇ ಪದೇ ಸುಳ್ಳು ಹೇಳುವ ಮೂಲಕ ಸುಳ್ಳನ್ನೇ ಸತ್ಯವಾಗಿಸಲು ಹೊರಟಿವೆ.
ಭ್ರಷ್ಟಾಚಾರ, ಅಭಿವೃದ್ಧಿ ವಿರೋಧಿ, ರೈತ ವಿರೋಧಿ, ಯುವಜನ ವಿರೋಧಿ ಕೆಲಸಗಳಲ್ಲೇ ನಿರತವಾಗಿವೆ, ಕಾಂಗ್ರೆಸ್‌ನ ಮನಸ್ಥಿತಿ ದೇಶವನ್ನು ಉದ್ಧಾರ ಮಾಡುವ ಬದಲಿಗೆ ಜನರನ್ನು ಲೂಟಿ ಮಾಡಿ ಜೇಬು ತುಂಬಿಸಿಕೊಳ್ಳುವುದಾಗಿದೆ.
ಎಲ್ಲ ಕ್ಷೇತ್ರಗಳಲ್ಲಿ ವಿಕಸನ
ಭಾರತದ ಪ್ರಗತಿಯನ್ನು ಇಡೀ ವಿಶ್ವ ನೋಡುತ್ತಿದೆ, ತಂತ್ರಜ್ಞಾನ, ಕೃಷಿ, ಬಾಹ್ಯಾಕಾಶ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ವಿಕಸನ ಹೊಂದುತ್ತಿರುವ ದೇಶವಾಗಿ ಗುರುತಿಸಲ್ಪಡುತ್ತಿದೆ.
ಕಳೆದ 10 ವರ್ಷಗಳ ಎನ್‌ಡಿಎ ಆಡಳಿತದಲ್ಲಿ ೨೫ ಕೋಟಿ ಜನತೆಯನ್ನು ಬಡತನ ರೇಖೆಯಿಂದ ಮೇಲೆತ್ತಲಾಗಿದೆ.
ದೇಶದ ನಾರಿಶಕ್ತಿ ಹಾಗೂ ಹಿಂದೂತ್ವ ನಾಶ ಮಾಡಲು ಹೊರಟಿರುವವರಿಗೆ ಜೂನ್ ೪ರ ಫಲಿತಾಂಶ ಬುದ್ಧಿ ಕಲಿಸುವಂತಿರಬೇಕು, ನಾರಿಶಕ್ತಿ ಏನೆಂಬುದನ್ನು ತೋರಿಸಬೇಕು ಎಂದು ಕರೆ ನೀಡಿದರು.
1 comment
[…] ರಾಜಕೀಯ […]