ಎಲ್ಲಾ ರಾಜಕೀಯ ಪಕ್ಷಗಳ ದೇಣಿಗೆ ತನಿಖೆ ಆಗಲಿ
ಬೆಂಗಳೂರು:ಚುನಾವಣಾ ಬಾಂಡ್ ವಿಷಯದಲ್ಲಿ ಸುಪ್ರೀಂಕೋರ್ಟ್ ತೆಗೆದುಕೊಂಡ ನಿರ್ಣಯದಿಂದ ಪ್ರಧಾನಿ ನರೇಂದ್ರ ಮೋದಿ ಅವರ ನೈತಿಕತೆಯ ಮುಖವಾಡ ಕಳಚಿಬಿದ್ದಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಇಂದಿಲ್ಲಿ ಟೀಕಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ’ನಾ ಖಾವೂಂಗಾ..,ನಾ ಖಾನೆ ದೂಂಗಾ..,’ ಎಂಬ ಮಾತು ಸುಳ್ಳಾಗಿದೆ, ಭ್ರಷ್ಟಾಚಾರ ನಿಗ್ರಹ ದಾಳಿಗೆ ಒಳಗಾದವರು, ಗುತ್ತಿಗೆ ಪಡೆದವರು ಬಿಜೆಪಿ ಹೆಸರಲ್ಲಿ ಚುನಾವಣಾ ಬಾಂಡ್ ಖರೀದಿಸಿರುವುದು ಬಹಿರಂಗವಾಗಿದೆ, ಮೋದಿ ಅವರ ನಿಜ ಬಣ್ಣ ಬಯಲಾಗಿದೆ ಎಂದರು.

ತನಿಖಾ ಸಂಸ್ಥೆಗಳ ಬಳಸಿ ಬೆದರಿಕೆ
ಚುನಾವಣಾ ಬಾಂಡ್ ರೂಪದಲ್ಲಿ ಕಾಂಗ್ರೆಸ್ ಪಕ್ಷಕ್ಕೂ ಸಹಜವಾಗಿ ಒಂದಷ್ಟು ಹಣ ಬಂದಿದೆ, ಯಾವುದೇ ಇಡಿ, ಸಿಬಿಐ ಇನ್ನಿತರ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಬೆದರಿಕೆ ಹಾಕಿ ವಸೂಲಿ ಮಾಡಿರುವಂತದ್ದಲ್ಲ.
ಚುನಾವಣಾ ಬಾಂಡ್ ಆಳ ಬಹಳ ಇದೆ, ಎಲ್ಲಾ ರಾಜಕೀಯ ಪಕ್ಷಗಳ ದೇಣಿಗೆಯನ್ನೂ ತನಿಖೆಗೆ ಒಳಪಡಿಸಲಿ, ಬಾಂಡ್ ವ್ಯವಸ್ಥೆಯಿಂದ ದುರುಪಯೋಗವೇ ಜಾಸ್ತಿಯಾಗಿದೆ.
ಪ್ರವಾಹ, ಬರ ಸೇರಿದಂತೆ ಯಾವುದೇ ನೈಸರ್ಗಿಕ ವಿಪತ್ತಿಗೆ ಪ್ರಧಾನಿ ಅವರ ನಿಜವಾದ ಕಾಳಜಿ ಇಲ್ಲ, ರಾಜ್ಯದಲ್ಲಿ ಬರ ಇದ್ದಾಗ ಈ ಕಡೆ ಸುಳಿಯಲಿಲ್ಲ, ಚುನಾವಣೆಗಾಗಿ ಆಗಾಗ್ಯೆ ಭೇಟಿ ನೀಡುತ್ತಿದ್ದಾರೆ ಎಂದರು.