ಬಿಜೆಪಿ-ಜೆಡಿಎಸ್ ಮೈತ್ರಿ ಸುಸೂತ್ರ ಮುಂದುವರಿಕೆ
ಬೆಂಗಳೂರು:ಸೀಟು ಹೊಂದಾಣಿಕೆಗೆ ಸಂಬಂಧಿಸಿದಂತೆ ಬಿಜೆಪಿ-ಜೆಡಿಎಸ್ ನಡುವೆ ಯಾವುದೇ ಸಣ್ಣಪುಟ್ಟ ವ್ಯತ್ಯಾಸಗಳಿದ್ದರೂ ಸಹಾ ಎಲ್ಲವೂ ಸುಖಾಂತ್ಯಗೊಂಡು ಮೈತ್ರಿ ಸುಸೂತ್ರವಾಗಿ ಮುಂದುವರೆಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇಂದಿಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ನಾಯಕರಿಗೂ ಸಮಾಧಾನ ಆಗುವ ರೀತಿಯಲ್ಲಿ ಬಿಜೆಪಿ ರಾಷ್ಟ್ರೀಯ ನಾಯಕರು ತೀರ್ಮಾನ ಮಾಡುವ ವಿಶ್ವಾಸವಿದೆ, ಚರ್ಚೆಯಿಂದ ವಿಷಯ ಬಗೆಹರಿಯಲಿದೆ ಎಂದರು.
ಹೈಕಮಾಂಡ್ ನಿರ್ಧಾರವೇ ಅಂತಿಮ
ರಾಜ್ಯ ಬಿಜೆಪಿ ಅಭ್ಯರ್ಥಿಗಳ ಮೊದಲನೇ ಪಟ್ಟಿ ಬಿಡುಗಡೆ ಆಗಿದೆ, ಎರಡನೇ ಪಟ್ಟಿ ಸದ್ಯದಲ್ಲೇ ಬಿಡುಗಡೆ ಆಗಲಿದೆ, ಟಿಕೆಟ್ ನೀಡಿಕೆ ವಿಚಾರದಲ್ಲಿ ಪಕ್ಷದ ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಸ್ಪಷ್ಟಪಡಿಸಿದರು.
ಪಕ್ಷದ ರಾಷ್ಟ್ರೀಯ ನಾಯಕರ ಜೊತೆ ನಿನ್ನೆ ದೂರವಾಣಿ ಮೂಲಕ ಚರ್ಚೆ ಮಾಡಿದ್ದು, ಬಳಿಕ ಮಾಜಿ ಪ್ರಧಾನಿ ದೇವೇಗೌಡ ಅವರೊಂದಿಗೂ ಚರ್ಚಿಸಲಾಗಿದೆ, ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೂ ಮಾಹಿತಿ ನೀಡಿದ್ದೇನೆ.
ಹಲವು ವಿಚಾರಗಳ ಕುರಿತು ಪಕ್ಷದ ವರಿಷ್ಠರು ಮತ್ತು ಜೆಡಿಎಸ್ ವರಿಷ್ಠರೊಂದಿಗೆ ಚರ್ಚಿಸಿದ್ದಾರೆ, ಮಾತುಕತೆ ಇನ್ನೂ ಮುಂದುವರೆದಿದೆ, ಎಲ್ಲವೂ ಸುಖಾಂತ್ಯ ಕಾಣಲಿದೆ.
ಕೆ.ಎಸ್.ಈಶ್ವರಪ್ಪ ಪಕ್ಷದ ಹಿರಿಯ ನಾಯಕರು, ಕೆಲವು ತಪ್ಪು ಮಾಹಿತಿಗಳು ಅವರಿಗೆ ತಲುಪಿವೆ, ಆದ್ದರಿಂದ ಸಾರ್ವಜನಿಕ ವಲಯದಲ್ಲಿ ಹಲವು ರೀತಿಯ ಚರ್ಚೆಗಳು ನಡೆಯುತ್ತಿವೆ, ಅವರಿಗೆ ಸತ್ಯ ಅರ್ಥ ಆದ ಮೇಲೆ ಸಮಸ್ಯೆ ಬಗೆಹರಿಯುವ ವಿಶ್ವಾಸ ಇದೆ.
ಸದಾನಂದಗೌಡ ಬಿಜೆಪಿಯಲ್ಲೇ ಇರುತ್ತಾರೆ
ಕಳೆದ ಒಂದು ವಾರದ ರಾಜಕೀಯ ವಿದ್ಯಮಾನಗಳನ್ನು ಅವಲೋಕಿಸಿದರೆ, ಕಾಂಗ್ರೆಸ್ ಮುಖಂಡರಿಗೆ ಅವರ ನಾಯಕರಿಗಿಂತ ಬಿಜೆಪಿ ಮುಖಂಡರ ಬಗ್ಗೆ ಹೆಚ್ಚು ವಿಶ್ವಾಸ ಇದ್ದಂತಿದೆ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಬಿಜೆಪಿಯಲ್ಲೇ ಇರುತ್ತಾರೆ ಎಂದರು.
ರಾಜ್ಯದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನಪ್ರಿಯತೆ ದಿನೇ ದಿನೇ ಎತ್ತರಕ್ಕೆ ಬೆಳೆಯುತ್ತಿರುವುದು ಚುನಾವಣಾ ರಣಭೂಮಿಯಲ್ಲಿರುವ ಪಕ್ಷದ ಕಾರ್ಯಕರ್ತರಿಗೆ ಉತ್ಸಾಹ ತಂದುಕೊಟ್ಟಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಶಿವಮೊಗ್ಗ ಪ್ರವಾಸ ಹಾಗೂ ಸಾರ್ವಜನಿಕ ಸಮಾವೇಶ ಯಶಸ್ವಿಯಾಗಿದೆ, ಒಂದು ವಾರದ ಅಂತರದಲ್ಲಿ ಇಷ್ಟು ದೊಡ್ಡ ಸಮಾವೇಶ ಆಯೋಜಿಸಿರುವುದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ, ಶಿವಮೊಗ್ಗ, ಕಲಬುರಗಿ ಕಾರ್ಯಕ್ರಮಗಳ ಕುರಿತು ಸ್ವತಃ ಪ್ರಧಾನಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ ಎಂದರು.
2 comments
[…] ರಾಜಕೀಯ […]
[…] ರಾಜಕೀಯ […]