ಜೆಡಿಎಸ್-ಬಿಜೆಪಿ ಮೈತ್ರಿಯಲ್ಲಿ ಭಿನ್ನಭಿಪ್ರಾಯವಿಲ್ಲ
ಬೆಂಗಳೂರು: ಜೆಡಿಎಸ್-ಬಿಜೆಪಿ ನಡುವಿನ ಮೈತ್ರಿಯಲ್ಲಿ ಯಾವುದೇ ಭಿನ್ನಭಿಪ್ರಾಯವಿಲ್ಲ. ನಮ್ಮ ಪಕ್ಷದ ಕತ್ತು ಹಿಸುಕಿ ಸಾಯಿಸಲು ಹೊರಟಿದ್ದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಅನುಕಂಪ ನಮಗೆ ಬೇಕಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಕೆಂಡಕಾರಿದ್ದಾರೆ.
ಚೆನ್ನೈ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ತೆರಳುವುದಕ್ಕೂ ಮುನ್ನ ತುರ್ತು ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿ ಅವರು, ಡಿ.ಕೆ. ಸಹೋದರರ ಮಾನ ಜಾಲಾಡಿದರು. ಬಿಜೆಪಿ ಮತ್ತು ನಮ್ಮ ನಡುವೆ ಸೀಟು ಹಂಚಿಕೆ ಮಾತುಕತೆ ಸಂದರ್ಭದಲ್ಲಿ ನಮಗೆ ಮೂರರಿಂದ ನಾಲ್ಕು ಸೀಟು ಬಿಟ್ಟುಕೊಡುವ ಮಾತುಕತೆ ಆಗಿತ್ತು.

ಈಗ ಎರಡು ಮಾತ್ರ ಎಂದು ಮಾಹಿತಿ ಬರುತ್ತಿದ್ದಂತೆ ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ನಿನ್ನೆ ಕರೆದಿದ್ದ ಸಭೆಯಲ್ಲಿ ಕಿಡಿಕಾರಿದ್ದಾರೆ. ನಾವು ಮಂಡ್ಯ, ಹಾಸನ, ಕೋಲಾರದಲ್ಲಿ ಸ್ಪರ್ಧೆ ಮಾಡುವುದಾಗಿ ಪ್ರಕಟ ಮಾಡಿದ್ದೇನೆ. ಕಣಕಿಳಿಯುತ್ತೇವೆ ಎಂದ ತಕ್ಷಣ ನಮ್ಮ ಮೈತ್ರಿಗೆ ಯಾವುದೇ ದಕ್ಕೆ ಇಲ್ಲ.
ಕಾಂಗ್ರೆಸ್‌ನವರನ್ನು ನಂಬಿ ನಾನು ಕತ್ತು ಕೊಯಿಸಿಕೊಂಡಿದ್ದೇನೆ. ಮತ್ತೆ ಅಂತಹ ಪಾಪದ ಕೆಲಸ ಮಾಡುವುದಿಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜೊತೆ ೨೦ ತಿಂಗಳು ಆಡಳಿತ ಮಾಡಿದ್ದರಿಂದಲೇ ಪಕ್ಷ ಉಳಿಸಿಕೊಳ್ಳಲು ಸಾಧ್ಯವಾಯಿತು. ನನಗೆ ಹೆಸರೂ ಬಂತು, ಕಾಂಗ್ರೆಸ್ ಸಹವಾಸ ಮಾಡಿ ನನ್ನ ಪಕ್ಷ ಬಲಿ ಕೊಟ್ಟೆ ಎಂದರು.
ಯಡಿಯೂರಪ್ಪ, ವಿಜಯೇಂದ್ರ, ರಾಧಾ ಮೋಹನ ದಾಸ್ ಅಗರ್‌ವಾಲ್ ಅವರು ನಮ್ಮ ಜೊತೆ ಮಾತನಾಡಿದ್ದಾರೆ. ವರಿಷ್ಠರ ಜೊತೆ ಚರ್ಚಿಸಿ ಸಮಸ್ಯೆ ಪರಿಹರಿಸುವುದಾಗಿ ತಿಳಿಸಿದ್ದಾರೆ.
ನಾವು ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತೇವೆ. ಬಿಜೆಪಿಗೆ ಬೆನ್ನೆಲುಬಾಗಿ ನಿಲ್ಲುತ್ತೇವೆ. ನಮಗಾಗಿರುವ ಅಸಮಾಧಾನವನ್ನು ಹೇಳಿದ್ದೇನೆ. ಎಲ್ಲವೂ ಸರಿ ಹೋಗಲಿದೆ. ಶಿವಕುಮಾರ್ ಅಂತಹವರಿಂದ ನನಗೆ, ನನ್ನ ಕಾರ್ಯಕರ್ತರಿಗೆ ಭುಜ ಬಲದ ಅಗತ್ಯವಿಲ್ಲ ಎಂದರು.
ಅರೆಸೇನಾ ಪಡೆ ತುಕಡಿ ನಿಯೋಜಿಸಲು ಆಯೋಗಕ್ಕೆ ಆಗ್ರಹ
ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಿಂದ ಚುನಾವಣಾ ಅಕ್ರಮಗಳು ಅವ್ಯಾಹತವಾಗಿ ನಡೆಯುತ್ತಿದ್ದು, ಕೂಡಲೇ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಚುನಾವಣಾ ಆಯೋಗವನ್ನು ಒತ್ತಾಯ ಮಾಡಿದರು.
ಪಾರದರ್ಶಕ ಚುನಾವಣೆ ನಡೆಸುವ ಸಲುವಾಗಿ ಕೂಡಲೇ ಈ ಕ್ಷೇತ್ರದಲ್ಲಿ ಅರೆಸೇನಾ ಪಡೆ ತುಕಡಿಗಳನ್ನು ನಿಯೋಜಿಸಬೇಕು ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರನ್ನು ಆಗ್ರಹಪಡಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ನಡೆಸುತ್ತಿರುವ ಅಕ್ರಮಗಳಿಗೆ ಮೌನ ಸಹಕಾರ ನೀಡುತ್ತಿರುವ ಈ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಅವರನ್ನು ತಕ್ಷಣವೇ ವರ್ಗಾವಣೆ ಮಾಡಬೇಕು ಎಂದು ಆಯೋಗವನ್ನು ಕುಮಾರಸ್ವಾಮಿ ಅವರು ಒತ್ತಾಯ ಮಾಡಿದರು.
ಕರ್ನಾಟಕದಲ್ಲಿ ಚುನಾವಣಾ ಆಯೋಗ ಇದೆಯಾ? ಕೇಂದ್ರ ಚುನಾವಣಾ ಆಯೋಗ ಏನು ಮಾಡುತ್ತಿದೆ? ಚುನಾವಣೆ ಘೋಷಣೆಯಾದ ನಂತರ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಏನು ನಡೆಯುತ್ತಿದೆ ಎನ್ನುವುದು ಆಯೋಗಕ್ಕೆ ಗೊತ್ತಿಲ್ಲವೇ? ಆಯೋಗದ ಸಿಬ್ಬಂದಿ ಏನು ಮಾಡುತ್ತಿದ್ದಾರೆ? ಭಾನುವಾರ ರಾತ್ರಿ ಈ ಕ್ಷೇತ್ರದಲ್ಲಿ ಏನು ನಡೆದಿದೆ ಎನ್ನುವುದನ್ನು ಆಯೋಗ ನೋಡಬೇಕು ಎಂದು ಆಗ್ರಹಿಸಿದರು.
ಚುನಾವಣಾ ದಿನಾಂಕ ಘೋಷಣೆಯಾದ ದಿನದಿಂದ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಚುನಾವಣಾ ಅಕ್ರಮಗಳು ಮಿತಿಮೀರಿವೆ. ಕುಕ್ಕರ್ ಮತ್ತು ಹಣವನ್ನು ಅವ್ಯಾಹತವಾಗಿ ಹಂಚಲಾಗುತ್ತಿದೆ.
ಮರಳವಾಡಿಯಲ್ಲಿ ಮತದಾರರಿಗೆ ಹಂಚಲು ಇರಿಸಿದ್ದ ಕುಕ್ಕರ್‌ಗಳನ್ನು ಲೋಡ್ ಮಾಡಲಾಗಿದ್ದ ಎರಡು ಲಾರಿಗಳನ್ನು ಜೆಡಿಎಸ್ ಕಾರ್ಯಕರ್ತರು ಹಿಡಿದಿದ್ದಾರೆ. ಮಾಧ್ಯಮಗಳು ಅದನ್ನು ತೋರಿಸಿವೆ.
ಬಿಜೆಪಿ ಅತೃಪ್ತರಿಗೆ ಕಾಂಗ್ರೆಸ್ ಟಿಕೆಟ್!
ದೇಶದಲ್ಲಿ ಅಕ್ರಮ ಎಲ್ಲೇ ನಡೆದರೂ ಅದರ ವಿಡಿಯೋ ಅಥವಾ ಫೋಟೋ ತೆಗೆದು ಕಳಿಸಿದರೆ ನೂರು ನಿಮಿಷದಲ್ಲಿ ಕ್ರಮ ಜರುಗಿಸಲಾಗುತ್ತದೆ ಎಂದು ಮುಖ್ಯ ಚುನಾವಣಾ ಆಯುಕ್ತರು ತಮ್ಮ ಮೂರು ಗಂಟೆಗಳ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು. ಈ ಅಕ್ರಮದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿ ೪೮ ಗಂಟೆ ಕಳೆದಿದೆ. ಇನ್ನೂ ಏಕೆ ಕ್ರಮ ಜರುಗಿಸಿಲ್ಲ ಎಂದರು.
ತಹಸೀಲ್ದಾರ್ ಅವರಿಗೆ ದೂರು ಕೊಟ್ಟರೆ, ಹೌದಾ, ನನ್ನ ಗಮನಕ್ಕೆ ಬಂದೇ ಇಲ್ಲ ಎನ್ನುತ್ತಾರೆ. ವಾಣಿಜ್ಯ ತೆರಿಗೆ ಇಲಾಖೆಗೆ ಮಾಹಿತಿ ಕೊಟ್ಟರೆ ಜಿಲ್ಲಾಧಿಕಾರಿಗೆ ತಿಳಿಸುತ್ತೇವೆ ಎನ್ನುತ್ತಾರೆ. ಜಿಲ್ಲಾಧಿಕಾರಿ ಅವರನ್ನು ಪ್ರಶ್ನಿಸಿದರೆ, ನಮ್ಮ ಗಮನಕ್ಕೆ ಬಂದಿಲ್ಲ, ಪರಿಶೀಲನೆ ನಡೆಸುತ್ತೇವೆ ಎಂದು ಹಾರಿಕೆಯ ಉತ್ತರ ಕೊಡುತ್ತಾರೆ.
ಅಭ್ಯರ್ಥಿಗಳ ಎರಡನೇ ಪಟ್ಟಿ ಸದ್ಯದಲ್ಲೇ ಬಿಡುಗಡೆ
ಚುನಾವಣೆ ಎಂದರೆ ಇದೇನಾ, ಈ ಅಕ್ರಮಗಳಿಗೆ ಕಡಿವಾಣ ಹಾಕಲು ಕೂಡಲೇ ಚುನಾವಣಾ ಆಯೋಗ ಈ ಕ್ಷೇತ್ರದಲ್ಲಿ ಅರೆಸೇನಾ ಪಡೆ ನಿಯೋಜಿಸಬೇಕು ಎಂದು ಅವರು ಆಗ್ರಹಿಸಿದರು.
ಮತದಾರರಿಗೆ ಹಂಚಲು ಕಾಂಗ್ರೆಸ್ ಅಭ್ಯರ್ಥಿ ಇರಿಸಿದ್ದ ಕುಕ್ಕರ್‌ಗಳ ಲೋಡ್ ಇದ್ದ ಲಾರಿಗಳ ಚಿತ್ರಗಳು, ವಿಡಿಯೋಗಳನ್ನು ಸುದ್ದಿಗೋಷ್ಠಿಯಲ್ಲಿ ಕುಮಾರಸ್ವಾಮಿ ಬಿಡುಗಡೆ ಮಾಡಿದರು.
2 comments
[…] ರಾಜಕೀಯ […]
[…] ರಾಜಕೀಯ […]