ಟೀಕಿಸಿದ ಸ್ವಪಕ್ಷದವರ ಮೇಲೆ ಕ್ರಮ ಕೈಗೊಳ್ಳುವ ತಾಕತ್ತಿಲ್ಲ
ಬೆಂಗಳೂರು:ತಮ್ಮ ಕಾಂಗ್ರೆಸ್ ಪಕ್ಷದವರೇ ಟೀಕಿಸುತ್ತಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗದ ಸಿದ್ದರಾಮಯ್ಯ ಕರ್ನಾಟಕ ಕಂಡ ಅತ್ಯಂತ ದುರ್ಬಲ, ಅಸಹಾಯಕ ಮುಖ್ಯಮಂತ್ರಿ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಕಾಂಗ್ರೆಸ್ನ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ತಮ್ಮ ಮೇಲೆ ಪದೇ ಪದೇ ವಾಗ್ದಾಳಿ ನಡೆಸಿದರೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗದಷ್ಟು, ಕನಿಷ್ಠ ಪಕ್ಷ ಪ್ರತ್ಯುತ್ತರ ಕೂಡ ನೀಡಲಾಗದಷ್ಟು ಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ ಎಂದಿದ್ದಾರೆ.
ಬಂಡಾಯದ ಬಾವುಟ
ಇಷ್ಟೇ ಅಲ್ಲದೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಣ ಅವಕಾಶ ಸಿಕ್ಕಾಗಲೆಲ್ಲಾ ಬಂಡಾಯದ ಬಾವುಟ ಹಾರಿಸಿ ಮುಖ್ಯಮಂತ್ರಿ ಗಾದಿ ಕಿತ್ತುಕೊಳ್ಳುವ ಮಾತನಾಡುತ್ತಾ ಕಾಲೆಳೆಯುತ್ತಿದ್ದರೂ ಏನೂ ಮಾಡಲಾಗದ ಅಸಹಾಯಕ ಸ್ಥಿತಿ ಸಿದ್ದರಾಮಯ್ಯ ಅವರದ್ದಾಗಿದೆ.
ನಿಮಗೆ ತಾಕತ್ತಿದ್ದರೆ, ನೀವು ಹೇಳಿಕೊಳ್ಳುವಂತೆ ಸ್ಟ್ರಾಂಗ್ ಮುಖ್ಯಮಂತ್ರಿಯೇ ಆಗಿದ್ದರೆ, “ನಾನೇ ಐದು ವರ್ಷ ಮುಖ್ಯಮಂತ್ರಿ” ಎಂದು ಒಮ್ಮೆ ಹೇಳಿ ನೋಡೋಣ ಎಂದು ಸವಾಲು ಹಾಕಿದ್ದಾರೆ.
ಮೋದಿ ಅವರೇ ಮತ್ತೊಮ್ಮೆ ಪ್ರಧಾನಿ
ಬಿಜೆಪಿ ನಾಯಕರಿಗೆ ನರೇಂದ್ರ ಮೋದಿ ಅವರೇ ಮತ್ತೊಮ್ಮೆ ಐದು ವರ್ಷಕ್ಕೆ ದೇಶದ ಬಲಿಷ್ಠ ಪ್ರಧಾನಿಯಾಗಿ ಮುಂದುವರೆಯುತ್ತಾರೆ ಎಂದು ವಿಶ್ವಾಸದಿಂದ ಹೇಳುವ ಧೈರ್ಯ ಇದೆ ಎಂದು ಅಶೋಕ್ ಕುಟುಕಿದ್ದಾರೆ.
ಈ ರೀತಿ ನಿಮಗೆ ಹೇಳಲು ಖಂಡಿತ ಆಗಲ್ಲ, ಅದಕ್ಕೆ ತಮ್ಮನ್ನು ಈ ರಾಜ್ಯ ಕಂಡ ಅತ್ಯಂತ ದುರ್ಬಲ ಮುಖ್ಯಮಂತ್ರಿ ಎಂಬುದಾಗಿ ಜನ ಮಾತಾಡಿಕೊಳ್ಳುವುದು ಎಂದು ಟೀಕಿಸಿದ್ದಾರೆ.
1 comment
[…] ರಾಜಕೀಯ […]