ಸಿಎಂ, ಡಿಸಿಎಂ ಏನು ಹೇಳುತ್ತಾರೆ: ಬಿಜೆಪಿ ಪ್ರಶ್ನೆ
ಬೆಂಗಳೂರು:ಮೇಕೆದಾಟು ಯೋಜನೆಯನ್ನು ಯಾವುದೇ ಕಾರಣಕ್ಕೂ ಜಾರಿ ಮಾಡಲು ಬಿಡುವುದಿಲ್ಲ ಎಂದು ಐ.ಎನ್.ಡಿ.ಐ.ಎ. ಒಕ್ಕೂಟದ ಮಿತ್ರಪಕ್ಷ ಡಿಎಂಕೆ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದು ರಾಜ್ಯ ಕಾಂಗ್ರೆಸ್ ನಾಯಕರು ಇದಕ್ಕೆ ಏನು ಉತ್ತರ ಕೊಡುತ್ತಾರೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಇಂದಿಲ್ಲಿ ಪ್ರಶ್ನಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಉದ್ದೇಶಿಸಿ ಟ್ವೀಟ್ ಮಾಡಿರುವ ಅವರು, ತಮಿಳುನಾಡಿನ ಆಡಳಿತಾರೂಢ ಡಿಎಂಕೆ ತನ್ನ ಪ್ರಣಾಳಿಕೆಯಲ್ಲಿ, ಕೇಂದ್ರದಲ್ಲಿ ಐ.ಎನ್.ಡಿ.ಐ.ಎ. ಅಧಿಕಾರಕ್ಕೆ ಬಂದರೆ ಮೇಕೆದಾಟು ಯೋಜನೆಯನ್ನು ತಡೆಹಿಡಿಯುವುದಾಗಿ ಹೇಳಿಕೊಂಡಿದೆ, ಈಗ ಕರ್ನಾಟಕ ಕಾಂಗ್ರೆಸ್ ನಾಯಕರು ತಮ್ಮ ಶಾಸಕರನ್ನು ಚೆನ್ನೈಗೆ ಕರೆದುಕೊಂಡು ಹೋಗಿ ’ನಮ್ಮ ನೀರು, ನಮ್ಮ ಹಕ್ಕು’ ಪ್ರತಿಭಟನೆ ಮಾಡುತ್ತೀರಾ ಎಂದಿದ್ದಾರೆ.
ಕನ್ನಡಿಗರ ಹಿತಾಸಕ್ತಿ ಬಲಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಮೆಚ್ಚಿಸಲು ಕನ್ನಡಿಗರ ಹಿತಾಸಕ್ತಿ ಬಲಿಕೊಟ್ಟು ರಾಜಿ ಮಾಡಿಕೊಳ್ಳುತ್ತೀರಾ ಎಂದು ಕೇಳಿದ್ದಾರೆ.
ಬೆಂಗಳೂರಿಗೆ ನೀರು ತರುತ್ತೇವೆ ಎಂದು ಮೇಕೆದಾಟು ಪಾದಯಾತ್ರೆ ಮಾಡಿ ಕನ್ನಡಿಗರ ಮೂಗಿಗೆ ತುಪ್ಪ ಸವರಿ ಅಧಿಕಾರಕ್ಕೇರಿದ ಕಾಂಗ್ರೆಸ್, ಈಗ ಕನ್ನಡಿಗರ ಬೆನ್ನಿಗೆ ಚೂರಿ ಹಾಕುತ್ತಿದೆ ಎಂದು ಅಶೋಕ್ ಟೀಕಿಸಿದ್ದಾರೆ.
ಕನ್ನಡಿಗರು ಮತ ಹಾಕಬೇಕೆ
ಡಿಎಂಕೆ ಪ್ರಣಾಳಿಕೆಯಲ್ಲಿನ ಮೇಕೆದಾಟು ವಿಷಯ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿರುವ ಶಾಸಕ ಹಾಗೂ ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್, ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಮೇಕೆದಾಟು ಯೋಜನೆಯನ್ನು ನಿಲ್ಲಿಸಲಾಗುವುದು ಎಂದು ಘಂಟಾಘೋಷವಾಗಿ ಹೇಳಿರುವ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಮಾತುಗಳನ್ನು ಧಿಕ್ಕರಿಸಿ ಇಂಡಿಯಾ ಮೈತ್ರಿಕೂಟದಿಂದ ಡಿ.ಎಂ.ಕೆ.ಯನ್ನು ಕಿತ್ತೆಸೆಯುವ ತಾಕತ್ತು, ಕನ್ನಡಿಗರ ನೀರಿನ ಹಕ್ಕನ್ನು ರಕ್ಷಿಸುವ ಸ್ವಾಭಿಮಾನ ಕಾಂಗ್ರೆಸ್ ಪಕ್ಷಕ್ಕೆ ಇದೆಯೇ, ಕುಡಿಯುವ ನೀರಿನ ಯೋಜನೆಗೆ ಕಡಿವಾಣ ಹಾಕುವ ಪಕ್ಷಕ್ಕೆ ಕನ್ನಡಿಗರು ಮತ ಹಾಕಬೇಕೆ ಎಂದು ಪ್ರಶ್ನಿಸಿದ್ದಾರೆ.
ಮೇಕೆದಾಟು ಯೊಜನೆ ಸ್ಥಗಿತ ಕುರಿತ ಡಿಎಂಕೆ ಪ್ರಣಾಳಿಕೆ ವಿರುದ್ಧ ಯಾವಾಗ ಪಾದಯಾತ್ರೆ ಮಾಡುತ್ತೀರಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ರಾಜ್ಯ ಬಿಜೆಪಿ ಪ್ರಶ್ನಿಸಿದೆ.
2 comments
[…] ರಾಜಕೀಯ […]
[…] ರಾಜಕೀಯ […]