ಸಂವಿಧಾನಿಕ ಸಂಸ್ಥೆಗಳ ದುರುಪಯೋಗ: ಕಾಂಗ್ರೆಸ್ ಟೀಕೆ
ಬೆಂಗಳೂರು:ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಕೇಂದ್ರದ ಬಿಜೆಪಿ ಸರ್ಕಾರ ವಿರೋಧ ಪಕ್ಷಗಳ ಬ್ಯಾಂಕ್ ಖಾತೆ ಮುಟ್ಟುಗೋಲು, ಮುಖ್ಯಮಂತ್ರಿಗಳ ಬಂಧನ, ರಾಜ್ಯಪಾಲರ ದುರ್ಬಳಕೆ, ಸಂವಿಧಾನಿಕ ಸಂಸ್ಥೆಗಳ ದುರುಪಯೋಗಕ್ಕೆ ಮುಂದಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಕಿಡಿಕಾರಿದ್ದಾರೆ.
ರಾಜ್ಯದ ಉಸ್ತುವಾರಿ ಹೊಣೆ ಹೊತ್ತ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲ ಜೊತೆಗೂಡಿ ಇಂದು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಲೋಕಸಭಾ ಚುನಾವಣೆಯಲ್ಲಿ ಸೋಲಿನ ಭಯದಿಂದ ಬಿಜೆಪಿ ಸಂವಿಧಾನದ ಅಡಿಯಲ್ಲಿರುವ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡು ಪ್ರತಿಪಕ್ಷಗಳನ್ನು ಹತ್ತಿಕ್ಕುತ್ತಿವೆ ಎಂದರು.
ಬಿಜೆಪಿ ತಿರಸ್ಕರಿಸಬೇಕು
ಇಂತಹ ಬಿಜೆಪಿಯನ್ನು ಸ್ಪಷ್ಟವಾಗಿ ತಿರಸ್ಕರಿಸಬೇಕು ಎಂದು ರಾಜ್ಯ ಮತ್ತು ರಾಷ್ಟ್ರದ ಜನತೆಗೆ ಕರೆ ನೀಡಿದರು.
ಬಿಜೆಪಿಗೆ ಪ್ರಜಾತಂತ್ರ ಮತ್ತು ಸಂವಿಧಾನದ ಮೇಲೆ ನಂಬಿಕೆ ಇಲ್ಲ, ಸರ್ವಾಧಿಕಾರದಲ್ಲಿ ಮಾತ್ರ ನಂಬಿಕೆ ಇದೆ ಎಂದರು. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ಒತ್ತಾಯಿಸಿದರು.
ಕಾಂಗ್ರೆಸ್ ಹೋರಾಟದ ಹಾದಿ
ಬ್ರಿಟೀಷರನ್ನು ಭಾರತದಿಂದ ಓಡಿಸಲು ಸುದೀರ್ಘ ಹೋರಾಟ ನಡೆಸಿ ಹುತಾತ್ಮರಾದ, ಜೈಲು ಸೇರಿದ ಚರಿತ್ರೆ ಇರುವ ಪಕ್ಷ ಕಾಂಗ್ರೆಸ್. ಬಿಜೆಪಿ ನಮಗೆ ಎಷ್ಟೇ ತೊಂದರೆ ಕೊಟ್ಟರೂ ಕಾಂಗ್ರೆಸ್ ಕಾರ್ಯಕರ್ತರು ಹೋರಾಟದ ಹಾದಿಯಲ್ಲೇ ಎಲ್ಲವನ್ನೂ ಎದುರಿಸಲಿದ್ದಾರೆ ಎಂದರು.
ಪ್ರಜಾಪ್ರಭುತ್ವದಲ್ಲಿ ಜನಾಭಿಪ್ರಾಯ ಅಂತಿಮ. ಕಾಂಗ್ರೆಸ್ ಜನರಿಂದ ಹಣ ಸಂಗ್ರಹಿಸಿದೆ. ಜನರು ಸ್ವಯಂಪ್ರೇರಿತವಾಗಿ ಕೊಟ್ಟ ಹಣ ಕಾಂಗ್ರೆಸ್ ಖಾತೆಯಲ್ಲಿತ್ತು. ಸಣ್ಣ ತಾಂತ್ರಿಕ ಕಾರಣ ನೀಡಿ ಇಡೀ ಖಾತೆಯನ್ನು ಸೀಜ್ ಮಾಡಿರುವುದು ಸರ್ವಾಧಿಕಾರಿ ಧೋರಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾಪ್ರಭುತ್ವಕ್ಕೆ ಮಾರಕ
ಕಾಂಗ್ರೆಸ್ ಪಕ್ಷ ಚುನಾವಣೆ ನಡೆಸದಂತೆ ಬಿಜೆಪಿ ಈ ರೀತಿಯ ತೊಂದರೆ ಕೊಡುವುದು ಪ್ರಜಾಪ್ರಭುತ್ವಕ್ಕೆ ಮಾರಕ, ಇದು ಖಂಡನೀಯ ಎಂದರು.
ಬಿಜೆಪಿ ಮನುಸ್ಮೃತಿಯ ಮಾರಕ ಮನಸ್ಥಿತಿಯನ್ನು ಹೊಂದಿದೆ, ಬಿಜೆಪಿಗೆ ಅಸಮಾನತೆ ಇರಬೇಕು, ಜಾತಿ ವ್ಯವಸ್ಥೆ ಗಟ್ಟಿಯಾಗಬೇಕು, ನಿರುದ್ಯೋಗ ಹೆಚ್ಚಾಗಬೇಕು, ರೈತರ ಸಮಸ್ಯೆಗಳಿಗೆ ಪರಿಹಾರ ಸಿಗಬಾರದು, ಈ ಸಮಸ್ಯೆಗಳ ವಿರುದ್ಧ ಕಾಂಗ್ರೆಸ್ ಹೋರಾಟ ನಡೆಸಬಾರದು ಎನ್ನುವ ಮನಸ್ಥಿತಿ ಬಿಜೆಪಿಯದ್ದಾಗಿದೆ, ಇದಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ಹಣ ಇಲ್ಲದಂತೆ ಮಾಡಲು ಬ್ಯಾಂಕ್ ಖಾತೆಗಳನ್ನು ಸೀಜ್ ಮಾಡಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಶಿವಕುಮಾರ್, ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದ ಅವರು, ನಾವು ರಾಜ್ಯದಲ್ಲಿ 78 ಲಕ್ಷ ಪಕ್ಷದ ಸದಸ್ಯತ್ವ ನೀಡಿ ಪ್ರತಿಯೊಬ್ಬರಿಂದ 10 ರೂ. ಸಂಗ್ರಹಿಸಿ ಎಐಸಿಸಿಗೆ ನೀಡಿದೆವು. ಇನ್ನು ಯುವ ಕಾಂಗ್ರೆಸ್ ಸದಸ್ಯತ್ವದಿಂದ 90 ಕೋಟಿ ಸಂಗ್ರಹವಾಗಿತ್ತು. ಇನ್ನು ವಿಧಾನಸಭೆ ಚುನಾವಣೆ ಸಮಯದಲ್ಲಿ ಟಿಕೆಟ್ ಆಕಾಂಕ್ಷಿಗಳಿಂದ ತಲಾ 2 ಲಕ್ಷ ಸಂಗ್ರಹಿಸಿ ಸುಮಾರು 20 ಕೋಟಿ ಸಂಗ್ರಹಿಸಲಾಯಿತು.
ಈ ಬಾರಿ ಲೋಕಸಭೆ ಚುನಾವಣೆ ಸಮಯದಲ್ಲೂ ದೇಣಿಗೆ ಸಂಗ್ರಹಿಸಲು ಮುಂದಾಗಿದ್ದೆ. ಎಐಸಿಸಿ ನಾಯಕರು ಬೇಡ ಎಂದು ತಿಳಿಸಿದರು.
290 ಕೋಟಿ ರೂ. ಮುಟ್ಟುಗೋಲು
ನಾವು ಪಕ್ಷದ ಕಟ್ಟಡ, ಸಿಬ್ಬಂದಿ ವೇತನ ನೀಡಲು ಪರದಾಡುವ ಸಂದರ್ಭದಲ್ಲಿ ಎಐಸಿಸಿ ಖಾತೆಯಲ್ಲಿನ 290 ಕೋಟಿಯಷ್ಟು ಹಣವನ್ನು ಕೇಂದ್ರ ಸರ್ಕಾರ ಆದಾಯ ತೆರಿಗೆ ಇಲಾಖೆ ಮೂಲಕ ಮುಟ್ಟುಗೋಲು ಹಾಕಿಸಿದ್ದಾರೆ. ನಾವು ನ್ಯಾಯಾಧಿಕರಣಕ್ಕೆ ಹೋದರೂ ನಮಗೆ ನಿರಾಳತೆ ಸಿಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾವು ಯಾರ ಬಳಿ ನ್ಯಾಯ ಕೇಳಬೇಕು.
ನಮ್ಮದು ವ್ಯವಹಾರಿಕ ಸಂಸ್ಥೆಯಲ್ಲ. ನಮಗೆ ಜನರ ದೇಣಿಗೆ ಮಾತ್ರ ಸಿಗುತ್ತಿದೆ. ನಮಗೆ ಚುನಾವಣಾ ಬಾಂಡ್ ಮೂಲಕ ನಮಗೆ ಸಿಕ್ಕಿರೋದು ಕೇವಲ 11% ಮಾತ್ರ. ಆದರೆ ಬಿಜೆಪಿ ಅವರಿಗೆ 57% ಸಿಕ್ಕಿದೆ. ಇಂದು ಪತ್ರಿಕೆಗಳಲ್ಲಿ ಯಾರು ಯಾರಿಗೆ ಎಷ್ಟು ದೇಣಿಗೆ ನೀಡಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ. ನಾವು ಮಾಧ್ಯಮಗಳಲ್ಲಿ ಪಕ್ಷದ ವತಿಯಿಂದ ಜಾಹೀರಾತು ನೀಡಲು ಈಗ ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡರೆ ವಿರೋಧ ಪಕ್ಷಗಳು ಚುನಾವಣೆ ನಡೆಸುವುದು ಹೇಗೆ ಎಂದು ಪ್ರಶ್ನಿಸಿದರು.