ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಬರುವಂತೆ ದುಂಬಾಲು
ಬೆಂಗಳೂರು:ಹೃದಯ ಶಸ್ತ್ರ ಚಿಕಿತ್ಸೆ ಪಡೆದು ನಗರಕ್ಕೆ ಹಿಂತಿರುಗಿದ ನಂತರ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮಿತ್ರ ಪಕ್ಷದ ಅಭ್ಯರ್ಥಿಗಳಿಂದ ಭಾರೀ ಬೇಡಿಕೆ ಹೆಚ್ಚಿದೆ.
ವಿಶ್ರಾಂತಿಗೂ ಅವಕಾಶ ನೀಡದೆ, ಬಿಜೆಪಿಯಿಂದ ಕಣಕ್ಕಿಳಿದಿರುವ ಅಭ್ಯರ್ಥಿಗಳು ಮತ್ತು ಮುಖಂಡರು ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ತಮ್ಮನ್ನು ಬೆಂಬಲಿಸಿ ತಮ್ಮ ಕ್ಷೇತ್ರಗಳಲ್ಲಿ ಪ್ರಚಾರಕ್ಕೆ ದಿನಗಳನ್ನು ಮೀಸಲಿಡುವಂತೆ ಮನವಿ ಮಾಡಿದ್ದಾರೆ.
ರಾಜ್ಯಾದ್ಯಂತ ಪ್ರವಾಸ ಮಾಡಿ
ಅವರ ಆರೋಗ್ಯ ವಿಚಾರಿಸುವ ನೆಪದಲ್ಲೇ ತಮ್ಮ ಕ್ಷೇತ್ರಗಳ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಿರುವ ಅಭ್ಯರ್ಥಿಗಳು, ತಾವು ಹಾಗೂ ಯಡಿಯೂರಪ್ಪ ಜಂಟಿಯಾಗಿ ರಾಜ್ಯಾದ್ಯಂತ ಪ್ರವಾಸ ಮಾಡಿ ಎಂದಿದ್ದಾರೆ.
ಬಿಜೆಪಿ ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸುತ್ತಿದ್ದಂತೆ ಡಾ.ಸುಧಾಕರ್ (ಚಿಕ್ಕಬಳ್ಳಾಪುರ), ಚಿತ್ರದುರ್ಗ ಮೀಸಲು ಕ್ಷೇತ್ರಕ್ಕೆ ಸಂಭವನೀಯ ಅಭ್ಯರ್ಥಿ ಆಗಿರುವ ಗೋವಿಂದ ಕಾರಜೋಳ್, ಬಳ್ಳಾರಿ ಅಭ್ಯರ್ಥಿ ಶ್ರೀರಾಮುಲು ಜೊತೆಗೆ ಭೇಟಿಯಾಗಿ ಮಾತುಕತೆ ನಡೆಸಿದರು.
ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ, ಸಂಸದ ಕರಡಿ ಸಂಗಣ್ಣ ಸೇರಿದಂತೆ ಹಲವು ಬಿಜೆಪಿ ನಾಯಕರು ಭೇಟಿ ಮಾಡಿ ಸಮಾಲೋಚನೆ ನಡೆಸಿದರೆ, ಕೆಲವರು ತಮ್ಮ ಕ್ಷೇತ್ರಗಳಲ್ಲಿ ಪ್ರಚಾರ ನಡೆಸುವಂತೆ ಮನವಿ ಮಾಡಿದರು.
ಇದರ ಮಧ್ಯೆ, ಮಂಡ್ಯ ಕ್ಷೇತ್ರದಿಂದ ಕಣಕ್ಕಿಳಿಯಲು ತೀರ್ಮಾನಿಸಿರುವ ಕುಮಾರಸ್ವಾಮಿ, ತಮ್ಮ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಮುಖಂಡರು ಮತ್ತು ಕಾರ್ಯಕರ್ತರ ಜೊತೆ ಈ ಸಂಬಂಧ ಚರ್ಚೆ ಮಾಡಿದರು.
ಅನಾಥರನ್ನಾಗಿ ಮಾಡಬೇಡಿ
ಚರ್ಚೆ ಸಂದರ್ಭದಲ್ಲಿ ಕೆಲವು ಮುಖಂಡರು ಮತ್ತು ಕಾರ್ಯಕರ್ತರು, ಚನ್ನಪಟ್ಟಣ ಬಿಟ್ಟು ನಮ್ಮನ್ನು ಅನಾಥರನ್ನಾಗಿ ಮಾಡಬೇಡಿ, ಬೇಕಾದರೆ ನಿಖಿಲ್ ಕುಮಾರಸ್ವಾಮಿ ಅವರನ್ನು ಮಂಡ್ಯದಿಂದ ಕಣಕ್ಕಿಳಿಸಿ ಎಂದು ಮನವಿ ಮಾಡಿದರು.
ಮಹಿಳೆಯರೂ ಸೇರಿದಂತೆ ಕೆಲವು ಕಾರ್ಯಕರ್ತರು ಕುಮಾರಸ್ವಾಮಿ ಅವರ ಕಾಲು ಹಿಡಿದು ಕಣ್ಣೀರಿಟ್ಟು, ಜಿಲ್ಲೆಯ ಕೆಲವು ರಾಜಕಾರಣಿಗಳ ಹಿಡಿತಕ್ಕೆ ಚನ್ನಪಟ್ಟಣ ಬಿಡಬೇಡಿ, ಬಿಟ್ಟರೆ, ಕಾರ್ಯಕರ್ತರಿಗೆ ಉಳಿಗಾಲವಿಲ್ಲ ಎಂದು ಗೋಗರೆದರು.
ಇದರ ಮಧ್ಯೆ, ಮಳವಳ್ಳಿಯಿಂದ ಬಂದಿದ್ದ ಭರತ್ ಎಂಬ ಕಾರ್ಯಕರ್ತ, ಅವರ ಮನೆಯ ಮುಂದೆ, ನೀವು ಮಂಡ್ಯದಿಂದ ಕಣಕ್ಕಿಳಿಯಬೇಕೆಂದು ಆತನ ಬಲಗೈ ಕೊಯ್ದುಕೊಂಡ.
ಚನ್ನಪಟ್ಟಣ ಕಾರ್ಯಕರ್ತರ ಸಭೆಯಲ್ಲಿ ಪಕ್ಷದ ಉಳಿವಿನ ದೃಷ್ಟಿಯಿಂದ ನಾವು ನಿರ್ಧಾರ ತೆಗೆದುಕೊಳ್ಳಲೇಬೇಕಾದ ಅನಿವಾರ್ಯ ಪರಿಸ್ಥಿತಿ ಬಂದಿದೆ ಎಂದು ಕುಮಾರಸ್ವಾಮಿ ಸಭೆಗೆ ತಿಳಿಸಿದರು.
ನಾನು ಎದುರಿಸಿದ ವೈಯಕ್ತಿಕ ರಾಜಕೀಯ ಸವಾಲುಗಳನ್ನು ನೀವೇ ನೋಡಿದ್ದೀರಿ, ಕಷ್ಟ ಕಾಲದಲ್ಲಿ ನನ್ನ ಕೈ ಹಿಡಿದಿದ್ದೀರಿ, ಚನ್ನಪಟ್ಟಣ ಕಾರ್ಯಕರ್ತರಾದ ನೀವು ಕೇಳಿದಾಗ ಬಂದು ನಾನು ನಿಮ್ಮ ಜತೆ ನಿಂತಿದ್ದೇನೆ.
ತಾಯಿ-ಮಗನ ಸಂಬಂಧ
ನಿಮ್ಮ-ನನ್ನ ನಡುವಿನ ಸಂಬಂಧ ತಾಯಿ-ಮಗನ ಸಂಬಂಧ, ನನ್ನನ್ನು ಮಗನಂತೆ ಕಂಡಿದ್ದೀರಿ, ರಾಜ್ಯದಲ್ಲಿ ಪಕ್ಷ ಉಳಿಸುವ ಸಮಯ ಬಂದಿದೆ. ಅದಕ್ಕೆ ನಿಮ್ಮ ಸಹಕಾರವೂ ಬೇಕು, ಪಕ್ಷಕ್ಕಾಗಿ ಕಠಿಣ ನಿರ್ಧಾರ ಕೈಗೊಳ್ಳಬೇಕು ಎಂದರು.
ಈ ಜೀವ ಇರುವ ತನಕ ನಾನು ಚನ್ನಪಟ್ಟಣ, ರಾಮನಗರ ಬಿಡುವ ಪ್ರಶ್ನೆಯೇ ಇಲ್ಲ, ನನ್ನ ಹೋರಾಟ ಇಲ್ಲಿಗೇ ನಿಲ್ಲುವುದಿಲ್ಲ, ರಾಜ್ಯದಲ್ಲಿ ನಾನು ದೊಡ್ಡ ಮಟ್ಟದ ಹೋರಾಟ ಮಾಡಬೇಕು, ನೀವು ಒಪ್ಪಿಗೆ ಕೊಡಬೇಕು, ನೀವು ಒಪ್ಪಿಗೆ ಕೊಟ್ಟರೆ ಮಾತ್ರ ನಾನು ಪಕ್ಷ ಬಲಪಡಿಸುವ ಕೆಲಸ ಮಾಡಬಹುದು, ಮಾಜಿ ಮುಖ್ಯಮಂತ್ರಿಗಳ ಮಾತಿಗೆ ಸಭೆಯಲ್ಲಿ ಬಹುತೇಕರು ಸಹಮತ ವ್ಯಕ್ತಪಡಿಸಿದರೆ, ಅನೇಕ ಮುಖಂಡರು ಪಕ್ಷ ಉಳಿಸಲು ನಿಮ್ಮ ನಿರ್ಧಾರಕ್ಕೆ ಬದ್ಧ ಎಂದರು.
ನೀವು ಚನ್ನಪಟ್ಟಣದಲ್ಲಿಯೇ ಇರಬೇಕು ಎಂದು ಕೆಲವರ ಮನವಿ, ಕಾರ್ಯಕರ್ತರನ್ನು ಸಮಾಧಾನಪಡಿಸಿದ ನಿಖಿಲ್ ಕುಮಾರಸ್ವಾಮಿ, ಪಕ್ಷ ಬಲಪಡಿಸುವ ಅನಿವಾರ್ಯತೆಯನ್ನು ಅವರಿಗೆ ಮನವರಿಕೆ ಮಾಡಿಕೊಟ್ಟರು.
1 comment
[…] ರಾಜಕೀಯ […]