ಕರ್ನಾಟಕದಲ್ಲಿ ಎನ್ ಡಿಎ ಅಭ್ಯರ್ಥಿಗಳ ಪರ 4 ಸಮಾವೇಶ
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಬಿಜೆಪಿಯ ವರಿಷ್ಠ ನಾಯಕರ ದಂಡೇ ಕರ್ನಾಟಕದಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳಲಿದೆ.
ಬಿಜೆಪಿಯ ತಾರಾ ಪ್ರಚಾರಕರ ಪಟ್ಟಿಯಲ್ಲಿ ಪಕ್ಷದ ವರಿಷ್ಠ ನಾಯಕರಲ್ಲದೆ, ಜೆಡಿಎಸ್ ನಾಯಕ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಅವರೂ ಇದ್ದಾರೆ.
ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ ಮೊದಲ ಹಂತದಲ್ಲಿ ಹಳೆ ಮೈಸೂರು ಭಾಗದ 14 ಕ್ಷೇತ್ರಗಳಿಗೆ ಏಪ್ರಿಲ್ 26 ರಂದು ಮತದಾನ ನಡೆಯಲಿದೆ.
ಈ ಕ್ಷೇತ್ರಗಳಿಗೆ ಸೀಮಿತವಾಗಿ ಪ್ರಧಾನಿ ಅವರು ಏಪ್ರಿಲ್ ಮೊದಲ ವಾರದಿಂದ ಪ್ರಚಾರ ಅಂತ್ಯದವರೆಗೂ ನಾಲ್ಕು ಬೃಹತ್ ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಕೇಂದ್ರ ಬಿಜೆಪಿ ಕಚೇರಿಯಿಂದ ಬಂದಿರುವ ತಾತ್ಕಾಲಿಕ ವೇಳಾಪಟ್ಟಿಯಂತೆ ಪ್ರಧಾನಿ ಅವರು, ಮೈಸೂರು, ಬೆಂಗಳೂರು ಗ್ರಾಮಾಂತರ ಹಾಗೂ ಹಾಸನದಲ್ಲೂ ಸಾರ್ವಜನಿಕ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ.
ಚಿಕ್ಕಬಳ್ಳಾಪುರ ಇಲ್ಲವೇ ದಕ್ಷಿಣ ಕನ್ನಡದಲ್ಲಿ ಮತ್ತೊಂದು ಸಮಾವೇಶ ಉದ್ದೇಶಿಸಿ ಅವರು ಭಾಷಣ ಮಾಡುವ ನಿರೀಕ್ಷೆ ಇದೆ.
ಪ್ರಧಾನಿ ಅವರು, ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡುವ ಸ್ಥಳ ಕನಿಷ್ಠ ಮೂರು ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿರುತ್ತದೆ.
ಮೈಸೂರು ಕೇಂದ್ರದಲ್ಲಿ ಚಾಮರಾಜನಗರ, ಮಂಡ್ಯ ಹಾಗೂ ಸ್ಥಳೀಯ ಕ್ಷೇತ್ರವನ್ನು ಒಳಗೊಂಡಿರುತ್ತದೆ.
ಬೆಂಗಳೂರು ಗ್ರಾಮಾಂತರ ಪ್ರಚಾರ ಸಂದರ್ಭದಲ್ಲಿ ಬೆಂಗಳೂರು ನಗರ ವ್ಯಾಪ್ತಿಗೆ ಬರುವ ಎಲ್ಲಾ ಕ್ಷೇತ್ರಗಳು ಒಳಗೊಂಡಿರುತ್ತದೆ. ಇನ್ನು ಹಾಸನದ ಸಮಾವೇಶ ಉಡುಪಿ-ಚಿಕ್ಕಮಗಳೂರು ಹಾಗೂ ತುಮಕೂರು ಕ್ಷೇತ್ರಗಳನ್ನು ಒಳಗೊಂಡಿರುತ್ತದೆ.
ಪ್ರಧಾನಿ ಭಾಷಣ ಸಂದರ್ಭದಲ್ಲಿ ಒಂದು ಇಲ್ಲವೆ, ಎರಡು ಕಡೆ ಮಾತ್ರ ದೇವೇಗೌಡರು ವೇದಿಕೆ ಹಂಚಿಕೊಳ್ಳಲಿದ್ದಾರೆ.
ಇನ್ನುಳಿದ ಎಲ್ಲಾ ಪ್ರಚಾರ ವೇದಿಕೆಯಲ್ಲಿ ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಭಾಗಿಯಾಗಲಿದ್ದಾರೆ. ವೇದಿಕೆಯಲ್ಲಿ ಸುತ್ತಮುತ್ತಲಿನ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳು ಇರಲಿದ್ದಾರೆ.
ಪ್ರಧಾನಿ ಅವರಲ್ಲದೆ, ಬಿಜೆಪಿಯ ಮುಖಂಡರು ಹಾಗೂ ಕೇಂದ್ರ ಸಚಿವರಲ್ಲಿ ಯಾರಾದರು ಒಬ್ಬರು ದಿನನಿತ್ಯ ಮೊದಲ ಹಂತದಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡ, ಅಮಿತ್ ಷಾ, ಯೋಗಿ ಆದಿತ್ಯನಾಥ್ ಭಾಗವಹಿಸುವ ಸಮಾವೇಶಗಳಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪಾಲ್ಗೊಳ್ಳಲಿದ್ದಾರೆ.
ಕೆಲವು ಆಯ್ದ ಕ್ಷೇತ್ರಗಳಲ್ಲಿ ದೇವೇಗೌಡರು ಹಾಗೂ ಯಡಿಯೂರಪ್ಪ ಜಂಟಿಯಾಗಿ ಎನ್‌ಡಿಎ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ.
ಇದಲ್ಲದೆ, ಯಡಿಯೂರಪ್ಪ-ಕುಮಾರಸ್ವಾಮಿ, ಮತ್ತೆ ಕೆಲವೆಡೆ ಬಿ.ವೈ.ವಿಜಯೇಂದ್ರ-ಕುಮಾರಸ್ವಾಮಿ ಜಂಟಿಯಾಗಿ ಚುನಾವಣಾ ಪ್ರಚಾರ ಕೈಗೊಳ್ಳಲಿದ್ದಾರೆ.
ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವುದಕ್ಕೂ ಮುನ್ನವೇ ವಿಜಯೇಂದ್ರ ಮತ್ತು ಕುಮಾರಸ್ವಾಮಿ ಅವರು ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಸಭೆಗಳನ್ನು ನಡೆಸುವಂತೆ ವರಿಷ್ಠರು ಸೂಚಿಸಿದ್ದು, ಅದರಂತೆ ನಿನ್ನೆಯಿಂದಲೇ ಈ ಪ್ರಕ್ರಿಯೆ ಆರಂಭಗೊಂಡಿದೆ.
1 comment
[…] Special Story […]