ಬೆಂಗಳೂರು:ಸಂಸದೆ ಸುಮಲತಾ ಅಂಬರೀಷ್ ಚುನಾವಣಾ ಕಣದಿಂದ ಹಿಂದೆ ಸರಿದು ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಎನ್ಡಿಎ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಬೆಂಬಲಿಸುತ್ತಾರಂತೆ.
ಚುನಾವಣಾ ಕಣಕ್ಕಿಳಿಯುವ ಬಗ್ಗೆ ಗೊಂದಲದಲ್ಲಿದ್ದ ಸುಮಲತಾ ನಿನ್ನೆ ಕುಮಾರಸ್ವಾಮಿ ಅವರು ಭೇಟಿ ಮಾಡಿದ ನಂತರ ತಮ್ಮ ನಿಲುವನ್ನು ಬದಲಿಸಿಕೊಂಡಿದ್ದಾರೆ ಎನ್ನಲಾಗಿದೆ.
ಏಪ್ರಿಲ್ 3ರಂದು ತಮ್ಮ ಬೆಂಬಲಿಗರ ಸಭೆ ಕರೆದಿದ್ದು, ಅಂದಿನ ಸಭೆಯಲ್ಲಿ ಬಿಜೆಪಿ ವರಿಷ್ಠರ ತೀರ್ಮಾನದ ನಂತರ ಎನ್ಡಿಎ ಅಭ್ಯರ್ಥಿಯಾಗಿ ಕುಮಾರಸ್ವಾಮಿ ಕಣಕ್ಕಿಳಿದಿರುವ ಬಗ್ಗೆ ಮಾಹಿತಿ ಹಂಚಿಕೊಳ್ಳಲಿದ್ದಾರೆ.
ಅನಿವಾರ್ಯ ನಿರ್ಧಾರ
ಪ್ರಸಕ್ತ ಸನ್ನಿವೇಶದಲ್ಲಿ ವರಿಷ್ಠರ ಮಾತಿಗೆ ಬೆಲೆ ನೀಡಬೇಕಾಗುತ್ತದೆ, ಮುಂದಿನ ರಾಜಕೀಯ ನೋಡೋಣ, ಈಗಿನ ಪರಿಸ್ಥಿತಿಯಲ್ಲಿ ಅನಿವಾರ್ಯ ನಿರ್ಧಾರಗಳನ್ನು ಕೈಗೊಳ್ಳಬೇಕಾಗುತ್ತದೆ, ಕಾರ್ಯಕರ್ತರು ಮತ್ತು ಅಭಿಮಾನಿಗಳ ಸಭೆಯ ನಂತರ ಸುಮಲತಾ, ಎನ್ಡಿಎ ಅಭ್ಯರ್ಥಿಯನ್ನು ಬೆಂಬಲಿಸುವ ನಿಲುವು ತೆಗೆದುಕೊಳ್ಳಲಿದ್ದಾರೆ ಎಂಬ ಮಾತು ಕೇಳಿಬಂದಿದೆ.
ಕುಮಾರಸ್ವಾಮಿ ಅವರು ಏಪ್ರಿಲ್ 4ರಂದು ಎನ್ಡಿಎ ಕೂಟದ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ. ಆ ಸಂದರ್ಭದಲ್ಲಿ ಸುಮಲತಾ ಅವರು ಭಾಗಿಯಾಗಲಿದ್ದಾರೆಂಬ ಮಾಹಿತಿ ಇದೆ.
ನಿನ್ನೆ ಕುಮಾರಸ್ವಾಮಿ ಅವರು, ಸಂಸದರ ಮನೆಗೆ ತೆರಳಿ ಸುಮಾರು ಒಂದು ಗಂಟೆಗಳ ಕಾಲ ಸಿನೆಮಾ, ರಾಜಕೀಯ ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದರು.
3 ರಂದು ಸಭೆ
ಮಾತುಕತೆ ಸಂದರ್ಭದಲ್ಲೇ ಕುಮಾರಸ್ವಾಮಿ, ತಮ್ಮನ್ನು ಬೆಂಬಲಿಸುವಂತೆ ಮಾಡಿದ ಮನವಿಗೆ ಸುಮಲತಾ ಅವರು, ಪಕ್ಷದ ವರಿಷ್ಠರ ಮಾತಿಗೆ ವಿರುದ್ಧವಾಗಿ ನಡೆಯಲು ಸಾಧ್ಯವಿಲ್ಲ, ಆದರೂ, 3 ರಂದು ಸಭೆ ಕರೆದಿದ್ದೇನೆ, ಆ ನಂತರ ಒಳ್ಳೆಯ ನಿರ್ಧಾರವನ್ನು ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.
ಕಳೆದ ಚುನಾವಣೆಯಲ್ಲಿ ಸುಮಲತಾ ಅವರು, ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಬಹಳ ಮತಗಳ ಅಂತರದಿಂದ ಪರಾಭವಗೊಳಿಸಿ ಸಂಸತ್ ಪ್ರವೇಶಿಸಿದ್ದರು.
ಇತ್ತೀಚಿಗಷ್ಟೇ ಬಿಜೆಪಿ ಜೊತೆ ಕೈಜೋಡಿಸಿದ್ದ ಸುಮಲತಾ ಪಕ್ಷದ ಟಿಕೆಟ್ ಆಕಾಂಕ್ಷಿಯೂ ಆಗಿದ್ದರು, ಆದರೆ ಮೈತ್ರಿ ಪಕ್ಷಕ್ಕೆ ಮಂಡ್ಯ ಕ್ಷೇತ್ರ ಬಿಟ್ಟುಕೊಟ್ಟಿದ್ದರಿಂದ ಸುಮಲತಾ ಅವರಿಗೆ ಮುಂದಿನ ದಿನಗಳಲ್ಲಿ ಒಳ್ಳೆಯ ರಾಜಕೀಯ ಭವಿಷ್ಯವಿದೆ, ಈಗ ಎನ್ಡಿಎ ಅಭ್ಯರ್ಥಿಯನ್ನು ಬೆಂಬಲಿಸಿ ಎಂದು ಹೇಳಿ ಕಳುಹಿಸಿದ್ದರು.
ಈ ಬೆಳವಣಿಗೆ ನಂತರ ಸುಮಲತಾ ಗೊಂದಲಕ್ಕೆ ಸಿಲುಕಿದ್ದರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಂಸದೆಯ ಮನೆಗೆ ತೆರಳಿ ಚರ್ಚೆ ನಡೆಸಿದ್ದಲ್ಲದೆ, ಕುಮಾರಸ್ವಾಮಿ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿಕೊಂಡಿದ್ದರು.
ವಿಜಯೇಂದ್ರ ಭೇಟಿ ನಂತರ ಕುಮಾರಸ್ವಾಮಿ, ಕಳೆದ ಭಾನುವಾರ ಸುಮಲತಾ ಅವರ ಮನೆಗೆ ತೆರಳಿ ತಮ್ಮಲ್ಲಿದ್ದ ಭಿನ್ನಾಭಿಪ್ರಾಯಗಳಿಗೆ ತೆರೆ ಎಳೆದು ಚುನಾವಣೆಯಲ್ಲಿ ಬೆಂಬಲಿಸುವಂತೆ ಮಾಡಿದ ಮನವಿ ಅವರು ಸ್ಪಂದಿಸುವ ಸಾಧ್ಯತೆ ಇದೆ.
1 comment
[…] ರಾಜಕೀಯ […]