ಸ್ವಪ್ರತಿಷ್ಠೆ ಬದಿಗಿರಿಸಿ ಒಗ್ಗಟ್ಟಿನಿಂದ ಕೆಲಸ ಮಾಡಿ
ಬೆಂಗಳೂರು: ಒಳ ಒಪ್ಪಂದದ ರಾಜಕಾರಣನ್ನು ದೂರವಿರಿಸಿ, ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿ ಆಗಲು ಒಗ್ಗಟ್ಟಿನಿಂದ ಕೆಲಸ ಮಾಡಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯದ ಬಿಜೆಪಿ ನಾಯಕರಿಗೆ ತಾಕೀತು ಮತ್ತು ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕದಲ್ಲಿ ಬಿಜೆಪಿಯ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲು ಕಳೆದ ರಾತ್ರಿ ನಗರಕ್ಕೆ ಧಾವಿಸಿದ ಅಮಿತ್ ಶಾ, ಇಡೀ ದಿನ ಪ್ರತ್ಯೇಕ ಸಭೆಗಳನ್ನು ನಡೆಸಿ 28 ಕ್ಷೇತ್ರಗಳನ್ನು ಗೆಲ್ಲುವ ಗುರಿಯನ್ನು ನೀಡಿದ್ದಾರೆ.
ನಗರದ ಪಂಚತಾರಾ ಹೋಟೆಲ್‌ನಲ್ಲಿ ಬಿಜೆಪಿ-ಜೆಡಿಎಸ್ ಕೋರ್ ಕಮಿಟಿ ಸದಸ್ಯರ ಸಭೆಯಲ್ಲೂ, ಎನ್‌ಡಿಎ ಕೂಟದ ಮಿತ್ರ ಪಕ್ಷಗಳು ಒಗ್ಗಟ್ಟಿನಿಂದ ಕೆಲಸ ಮಾಡಿದರೆ ನಮ್ಮ ಗುರಿ ತಲುಪುವುದು ಸುಲಭವಾಗುತ್ತದೆ ಎಂದಿದ್ದಾರೆ.
ಕರ್ನಾಟಕದಲ್ಲಿ ಮೈತ್ರಿ ಕೂಟಕ್ಕೆ ಒಳ್ಳೆಯ ವಾತಾವರಣವಿದೆ.ನಮ್ಮ ಹೊಂದಾಣಿಕೆಯನ್ನು ಜನತೆ ಸ್ವಾಗತಿಸಿದ್ದಾರೆ. ನೀವು ಇದರ ಲಾಭ ಪಡೆದುಕೊಳ್ಳಿ ಎಂದು ಉಭಯ ಪಕ್ಷಗಳ ನಾಯಕರಿಗೆ ಕಿವಿಮಾತು ಹೇಳಿದ್ದಾರೆ.
ರಾಜ್ಯಮಟ್ಟದಲ್ಲಿ ಸಮನ್ವಯತೆ ಇರುವಂತೆಯೇ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಸಮನ್ವಯತೆ ಕಾಪಾಡಿಕೊಂಡು ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ನೀವು ರೂವಾರಿಯಾಗಿ.
ನಿಮ್ಮ ಸ್ವಪ್ರತಿಷ್ಠೆಗಳು ಏನೇ ಇರಲಿ ಅವುಗಳನ್ನು ಬದಿಗಿರಿಸಿ, ಕೇಂದ್ರದಲ್ಲಿ ಮತ್ತೆ ಎನ್‌ಡಿಎ ಆಡಳಿತವನ್ನು ತರಲು ಶ್ರಮಿಸಿ, ನಿಮಗೆ ಒಳ್ಳೆಯ ಭವಿಷ್ಯವಿದೆ ಎಂದಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಡೆದಿರುವ ವಿದ್ಯಮಾನಗಳ ಪೂರ್ಣ ಅರಿವಿದೆ. ಅದು ಲೋಕಸಭಾ ಚುನಾವಣೆಯಲ್ಲೂ ಮರುಕಳಿಸಬಾರದು. ನಾನು ಈ ಬಗ್ಗೆ ಹೆಚ್ಚಿನ ಚರ್ಚೆ ಬಯಸುವುದಿಲ್ಲ. ಮುಂದೆ ದೊಡ್ಡ ಸಮರ ಇದೆ. ಅದನ್ನು ಎದುರಿಸಲು ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದೆ.
ಕೆಲವು ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ನಂತರದ ಗೊಂದಲ ಮತ್ತು ಸಮಸ್ಯೆಗಳ ಬಗ್ಗೆ ಕುಮಾರಸ್ವಾಮಿ ಅವರು ನಿಮ್ಮ ಮುಂದೆಯೇ ಎಲ್ಲವನ್ನೂ ಬಿಡಿಸಿಟ್ಟಿದ್ದಾರೆ. ಆ ಸಮಸ್ಯೆಗಳನ್ನು ನೀವೂ ಬಗೆಹರಿಸಿಕೊಳ್ಳಿ ನಾನೂ ಬಗೆಹರಿಸುತ್ತೇನೆ, ಯಾವುದನ್ನೂ ಎಳೆಯುವುದು ಬೇಡ.
ಗೆಲುವಿನ ಮಾನದಂಡ ಇಟ್ಟುಕೊಂಡು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಇದನ್ನು ಎಲ್ಲರೂ ಗೌರವಿಸಬೇಕು. ಇದನ್ನೇ ಕಾರಣವಾಗಿಟ್ಟುಕೊಂಡು ಕಾಲೆಳೆಯುವುದು ಬೇಡ. ಒಂದು ವೇಳೆ ಇದನ್ನೇ ಮುಂದು ಮಾಡಿಕೊಂಡು ಹೋದರೆ ಕಠಿಣ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಕರ್ನಾಟಕದ ಮಟ್ಟಿಗೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡ ನಂತರ ಉಭಯ ಪಕ್ಷಗಳಿಗೂ ಲಾಭ ಬಂದಿದೆ. ಅದನ್ನು ಮತಗಳಾಗಿ ಪರಿವರ್ತಿಸುವ ಕಾರ್ಯ ನಿಮ್ಮ ಕೈಯಲ್ಲಿದೆ ಎಂದಿದ್ದಾರೆ.
ರಾಜ್ಯದ ರಾಜಕೀಯ ಪರಿಸ್ಥಿತಿ ಮತ್ತು ಮೈತ್ರಿಯಲ್ಲಿನ ಸಮಸ್ಯೆಗಳ ಬಗ್ಗೆ ಕುಮಾರಸ್ವಾಮಿ ನಿರಂತರವಾಗಿ ನಮ್ಮ ಜೊತೆ ಸಂಪರ್ಕದಲ್ಲಿದ್ದಾರೆ. ಅವರು ಯಾವುದನ್ನೂ ಮುಚ್ಚಿಡದೆ ಎಲ್ಲಾ ಮಾಹಿತಿ ನೀಡುತ್ತಿದ್ದು, ಇದು ನಮಗೆ ಸಹಕಾರಿಯಾಗಿದೆ ಎಂದು ಷಾ ಸಭೆಗೆ ತಿಳಿಸಿದ್ದಾರೆ.
ಅಮಿತ್ ಷಾ ಮಾತನಾಡುವುದಕ್ಕೂ ಮುನ್ನಾ ಕುಮಾರಸ್ವಾಮಿ, ರಾಜ್ಯದ 28 ಕ್ಷೇತ್ರಗಳು ಅದರಲ್ಲೂ ಮೊದಲ ಹಂತದ ಚುನಾವಣೆ ಎದುರಿಸುತ್ತಿರುವ 14 ಕ್ಷೇತ್ರಗಳ ಚಿತ್ರಣವನ್ನು ಕೇಂದ್ರ ಸಚಿವರ ಮುಂದಿಟ್ಟರು.
ನಾವು ಎನ್‌ಡಿಎ ಮೈತ್ರಿ ಕೂಟಕ್ಕೆ ಸೇರಿದ ನಂತರ ರಾಜ್ಯ ಬಿಜೆಪಿ ನಾಯಕರು ನಮಗೆ ಸಂಪೂರ್ಣ ಸಹಕಾರ ನೀಡಿದ್ದಾರೆ. ಅದರಲ್ಲೂ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರು ನಮ್ಮೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತಿದ್ದೇವೆ.
ಚಿಕ್ಕಬಳ್ಳಾಪುರ, ಹಾಸನ ಲೋಕಸಭಾ ಕ್ಷೇತ್ರದಲ್ಲಿ ಇನ್ನೂ ಸಮಸ್ಯೆ ಇದೆ. ರಾಜ್ಯ ನಾಯಕರು ಇದನ್ನು ಬಗೆಹರಿಸಲು ನಿರಂತರ ಪ್ರಯತ್ನ ಮಾಡಿದ್ದಾರೆ. ಇದನ್ನೂ ಮೀರಿದ ವಿಷಯದಲ್ಲಿ ಮಧ್ಯೆ ಪ್ರವೇಶ ಮಾಡಿ ಬಗೆಹರಿಸಬೇಕೆಂದು ಷಾ ಅವರಲ್ಲಿ ಮವನಿ ಮಾಡಿದರು.
ಮೈಸೂರು, ಮಂಡ್ಯ ಹಾಗೂ ಬೆಂಗಳೂರಿನಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ನಡೆಸಿದ ಸಮನ್ವಯ ಸಭೆಗಳು ಭಾರೀ ಯಶ್ವಸ್ವಿಯಾಗಿವೆ. ಮುಂದೆಯೂ ಪ್ರಯತ್ನಿಸುತ್ತೇವೆ ಎನ್ನುತ್ತಿದ್ದಂತೆ ಷಾ ಮಧ್ಯೆ ಪ್ರತವೇಶಿಸಿ, ವಿಧಾನಸಭಾ ಮಟ್ಟದಲ್ಲೂ ಇಂತಹ ಸಭೆಗಳು ನಡೆಯಬೇಕು ಎಂದರು.
ಉಭಯ ಪಕ್ಷಗಳ ಕೋರ್ ಕಮಿಟಿ ಸಭೆ ನಂತರ ಅಮಿತ್ ಷಾ ಅವರು ಕುಮಾರಸ್ವಾಮಿ ಅವರನ್ನು ಹೋಟೆಲ್‌ನ ತಮ್ಮ ಕೊಠಡಿಗೆ ಕರೆದುಕೊಂಡು ಹೋಗಿ ಕಾಂಗ್ರೆಸ್ ಚುನಾವಣಾ ತಂತ್ರಗಾರಿಕೆ ಬಗ್ಗೆ ಮಾಹಿತಿ ಪಡೆದರು ಎನ್ನಲಾಗಿದೆ.
ಗೆಲುವಿಗಾಗಿ ಕಾಂಗ್ರೆಸ್ ನಡೆಸುತ್ತಿರುವ ರಾಜಕೀಯ ತಂತ್ರಗಾರಿಕೆ, ಎಲ್ಲಿ ಆ ಪಕ್ಷ ಬಲಾಢ್ಯವಾಗಿದೆ ಅಲ್ಲಿ ನಾವು ಯಾವ ರೀತಿ ತಂತ್ರಗಾರಿಕೆ ಬಳಸಿ ಬಲಾಢ್ಯರಾಗಬೇಕು ಎಂಬ ಬಗ್ಗೆ ಚರ್ಚಿಸಿದ್ದಾರೆ.
ಕಾಂಗ್ರೆಸ್ ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ಮತದಾರರನ್ನು ಹೇಗೆ ಓಲೈಸುತ್ತಿದೆ ಎಂಬುದನ್ನು ಕುಮಾರಸ್ವಾಮಿ ವಿವರಿಸಿದ್ದಾರೆ.
1 comment
[…] Special Story […]