ಚುನಾವಣಾ ತಂತ್ರ ನಿಪುಣ ಕನಗೋಳ್ ವರದಿ
ಬೆಂಗಳೂರು:ಸಂಪುಟದ ಕೆಲವು ಸಚಿವರನ್ನು ಕಣಕ್ಕಿಳಿಸಿದ್ದರೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 19ರಿಂದ 20 ಕ್ಷೇತ್ರಗಳಲ್ಲಿ ಜಯ ಗಳಿಸುತ್ತಿತ್ತಂತೆ.
ಸಚಿವರನ್ನು ಕಣಕ್ಕಿಳಿಸದ ಕಾರಣ 14 ರಿಂದ 15 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಜಯಭೇರಿ ಭಾರಿಸಲಿದ್ದಾರೆ ಎಂದು ಚುನಾವಣಾ ತಂತ್ರ ನಿಪುಣ ಸುನೀಲ್ ಕನಗೋಳ್ ಎಐಸಿಸಿಗೆ ಸಮೀಕ್ಷಾ ವರದಿ ನೀಡಿದ್ದಾರೆ.
ಗ್ಯಾರಂಟಿ ಯೋಜನೆಗಳೇ ಕೈಹಿಡಿದಿದ್ದು
ಗ್ಯಾರಂಟಿ ಯೋಜನೆಗಳೇ ಕಾಂಗ್ರೆಸ್ ಪಕ್ಷವನ್ನು ಕೈಹಿಡಿದಿದ್ದು, ಇಷ್ಟು ದೊಡ್ಡ ಸಂಖ್ಯೆಯಲ್ಲಿ ಗೆಲುವಿಗೆ, ಜನರ ಮನೆ ಬಾಗಿಲಿಗೆ ಪಂಚ ಯೋಜನೆಗಳು ತಲುಪಿರುವುದೇ ಕಾರಣ ಎಂದಿದ್ದಾರೆ.
ರಾಜ್ಯದ 28 ಕ್ಷೇತ್ರಗಳ ಪ್ರಚಾರ ಸಂದರ್ಭದಲ್ಲೂ ಗ್ಯಾರಂಟಿ ಯೋಜನೆಗಳನ್ನೇ ಮುಂದಿಟ್ಟುಕೊಳ್ಳಿ, ಬರದ ವಿಷಯದಲ್ಲಿ ಕೇಂದ್ರದ ಮಲತಾಯಿ ಧೋರಣೆಯನ್ನು ಜನರ ಮುಂದೆ ಎಳೆ ಎಳೆಯಾಗಿ ಬಿಡಿಸಿಡಿ ಎಂದು ಹೇಳಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕನಗೋಳ್ ಅವರೇ ಐದು ಗ್ಯಾರಂಟಿ ಯೋಜನೆಗಳನ್ನು ರೂಪಿಸಿದ್ದಲ್ಲದೆ, ಐದು ಯೋಜನೆಗಳನ್ನು ಹಂತ ಹಂತವಾಗಿ ಮತದಾರರ ಮುಂದಿಟ್ಟು ಕಾಂಗ್ರೆಸ್ ಗೆಲುವಿಗೆ ಪ್ರಮುಖ ರೂವಾರಿಯಾಗಿದ್ದರು.
ಅಂದಿನ ಬಿಜೆಪಿ ಸರ್ಕಾರದ ಶೇಕಡ 40 ಪರ್ಸೆಂಟ್ ಕಮೀಷನ್ ಹಾಗೂ ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು, ಕಾಂಗ್ರೆಸ್ 135 ಕ್ಷೇತ್ರಗಳಲ್ಲಿ ಭರ್ಜರಿ ಜಯ ಸಾಧಿಸಿ ಅಧಿಕಾರಕ್ಕೆ ಬಂದಿತು.
ಕನಗೋಳ್ ಗ್ಯಾರಂಟಿ ಮ್ಯಾಜಿಕ್
ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ಅವರ ಬಳಗದಲ್ಲಿರುವ ಸುನೀಲ್ ಕನಗೋಳ್ ತೆಲಂಗಾಣದಲ್ಲೂ ಪಕ್ಷ ಅಧಿಕಾರಕ್ಕೆ ಬರಲು, ಅಲ್ಲಿಯೂ ಗ್ಯಾರಂಟಿ ಮ್ಯಾಜಿಕ್ ಮಾಡಿದ್ದರು.
ಲೋಕಸಭಾ ಚುನಾವಣೆಗೆ ಇದೇ ಗ್ಯಾರಂಟಿಗಳನ್ನು ಮುಂದಿಟ್ಟುಕೊಂಡು ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಿ ಎಂದು ವಿವರವಾದ ವರದಿ ನೀಡಿದ್ದಾರೆ.
ಅವರು ನೀಡಿರುವ ವರದಿಯಂತೆ ಬಿಜೆಪಿ ವಶದಲ್ಲಿರುವ ಕೆಲವು ಅಚ್ಚರಿ ಕ್ಷೇತ್ರಗಳು ಕಾಂಗ್ರೆಸ್ ಪಾಲಾಗಲಿವೆಯಂತೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಒಂದು ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದ ಕಾಂಗ್ರೆಸ್ ಇದೀಗ ಶೇಕಡ 50ರಷ್ಟು ಪಾಲು ಪಡೆಯಲಿದೆ ಎಂದು ಕನಗೋಳ್ ಹೇಳಿದ್ದಾರೆ.
ರಾಜಕೀಯದಲ್ಲಿ ಮಹತ್ತರ ಬದಲಾವಣೆ
ಚುನಾವಣಾ ವೇಳಾಪಟ್ಟಿ ಪ್ರಕಟಗೊಳ್ಳುವುದಕ್ಕೂ ಮುನ್ನವೇ ಕನಗೋಳ್ ನೀಡಿರುವ ವರದಿ ಇದು, ಅದಾದ ನಂತರ ರಾಜ್ಯ ರಾಜಕೀಯದಲ್ಲಿ ಮಹತ್ತರ ಬದಲಾವಣೆ ಆಗಿದೆ.
ಜೆಡಿಎಸ್, ಎನ್‌ಡಿಎ ಮೈತ್ರಿಕೂಟ ಸೇರಿದೆ, ಬಿಜೆಪಿ ಬಹುತೇಕ ಹಳೆ ಮುಖದ ಜಾಗದಲ್ಲಿ ಹೊಸಬರಿಗೆ ಅವಕಾಶ ಮಾಡಿಕೊಟ್ಟಿದೆ.
ಕನಗೋಳ್ ನೀಡಿದ ವರದಿ ನಂತರ ಈ ಬೆಳವಣಿಗೆ ಆಗಿರುವುದು, ಚುನಾವಣಾ ತಂತ್ರ ನಿಪುಣನ ವರದಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೈಸೇರುತ್ತಿದ್ದಂತೆ, ನಾವು ಮತ್ತು ಬಿಜೆಪಿ 28-28 ಗೆಲ್ಲುತ್ತೇವೆ ಎಂಬುದು ಸುಳ್ಳು.
ಕಾಂಗ್ರೆಸ್ 14ರಿಂದ 16 ಸ್ಥಾನಗಳಲ್ಲಿ ಜಯಭೇರಿ ಭಾರಿಸಲಿದೆ ಎಂದು ಮಾಹಿತಿ ನೀಡಿದರು. ಅಷ್ಟೇ ಅಲ್ಲ, ತಮ್ಮ ಚುನಾವಣಾ ಪ್ರಚಾರದಲ್ಲಿ ಗ್ಯಾರಂಟಿ ಯೋಜನೆಗಳನ್ನೇ ಮುಂದಿಟ್ಟುಕೊಂಡಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹಾ ಇದೇ ಮಾರ್ಗಲ್ಲಿದ್ದಾರೆ.
ಗ್ಯಾರಂಟಿ ಫಲಾನುಭವಿಗಳ ಸಮಾವೇಶ
ಕನಗೋಳ್ ವರದಿ ನೀಡಿದ ನಂತರ ಚುನಾವಣಾ ವೇಳಾಪಟ್ಟಿ ಪ್ರಕಟಕ್ಕೂ ಮುನ್ನವೇ ಸರ್ಕಾರದ ಕಾರ್ಯಕ್ರಮದಡಿಯಲ್ಲಿಯೇ ಗ್ಯಾರಂಟಿ ಫಲಾನುಭವಿಗಳ ಸಮಾವೇಶ ಇದೇ ಕಾರಣಕ್ಕೆ ನಡೆಸಿತು.
ಕನಗೋಳ್ ವರದಿ ಪ್ರಕಾರ ಚಾಮರಾಜನಗರ, ಹಾಸನ, ಮಂಡ್ಯ, ಕೋಲಾರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ರಾಯಚೂರು, ಹಾವೇರಿ, ಕಲಬುರಗಿ, ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳು ಸೇರಿದಂತೆ ಶೇಕಡ 50 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದಿದ್ದಾರೆ.
ಅವರು ವರದಿ ನೀಡಿದ ನಂತರ ಬಿಜೆಪಿ ಮತ್ತು ಜೆಡಿಎಸ್‌ನಲ್ಲಿ ಬದಲಾವಣೆಗಳಾಗಿವೆ, ಬೆಂಗಳೂರು ಗ್ರಾಮಾಂತರದಿಂದ ಡಾ.ಮಂಜುನಾಥ್ ಅವರನ್ನು ಕಣಕ್ಕಿಳಿಸಿ ವರ್ಚಸ್ಸಿನ ಮೂಲಕ ಗೆಲುವಿಗೆ ಹೊರಟಿದ್ದರೆ, ಮೈಸೂರು-ಕೊಡಗು ಕ್ಷೇತ್ರದಲ್ಲೂ ಇದೇ ಮಾನದಂಡವಾಗಿಸಿಕೊಂಡು ಒಡೆಯರ್ ಅವರನ್ನು ಕಣಕ್ಕಿಳಿಸಿದೆ.
ಮಂಡ್ಯದಿಂದ ಎನ್‌ಡಿಎ ಅಭ್ಯರ್ಥಿ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸುವಲ್ಲಿ ಬಿಜೆಪಿ ವರಿಷ್ಠರು ಯಶಸ್ವಿಯಾಗಿದ್ದಾರೆ.
ಹೊಸ ಮುಖಗಳಿಗೆ ಬಿಜೆಪಿ ಮಣೆ
ಇದೇ ರೀತಿ ಹಾವೇರಿಯಲ್ಲಿ ಬಸವರಾಜ ಬೊಮ್ಮಾಯಿ, ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ಸೇರಿದಂತೆ ಹೊಸ ಮುಖಗಳಿಗೆ ಬಿಜೆಪಿ ಮಣೆ ಹಾಕಿದೆ.
ಬದಲಾದ ಚುನಾವಣಾ ರಾಜಕೀಯ ಸನ್ನಿವೇಶದಲ್ಲಿ ಕನಗೋಳ್ ವರದಿ ವಿಧಾನಸಭೆಯಂತೆ ಲೋಕಸಭೆಯಲ್ಲೂ ಯಶಸ್ಸು ಕಾಣುತ್ತದೆಯೇ ಕಾದು ನೋಡಬೇಕು.
ಸುನೀಲ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಆಡಳಿತ ಸಲಹೆಗಾರರನ್ನಾಗಿ ನೇಮಕ ಮಾಡಿಕೊಂಡು ಸಂಪುಟ ದರ್ಜೆ ಸ್ಥಾನಮಾನ ನೀಡಿರುವುದಲ್ಲದೆ, ವಿಧಾನಸೌಧದ ಮೂರನೇ ಮಹಡಿಯಲ್ಲಿ ದೊಡ್ಡ ಕೊಠಡಿಯೇ ನೀಡಿದ್ದಾರೆ, ಆದರೆ ಅವರು, ಇದುವರೆಗೂ ಕಚೇರಿಗೆ ಪ್ರವೇಶ ಮಾಡಿಲ್ಲ.