ಬೆಂಗಳೂರು: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪ್ರೊ.ರಾಜೀವ್ ಗೌಡ ಅವರು ಸಂಸತ್ತಿನಲ್ಲಿ ಸಮರ್ಥವಾಗಿ ನಾಡಿನ ಪರವಾಗಿ, ಕ್ಷೇತ್ರದ ಜನರ ಪರವಾಗಿ ಧ್ವನಿ ಎತ್ತುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ರಾಜೀವ್ ಗೌಡರ ಪರವಾಗಿ ನಡೆದ ಬೂತ್ ಮುಖಂಡರು ಮತ್ತು ಬ್ಲಾಕ್ ಮುಖಂಡರುಗಳ ಬೃಹತ್ ಸಭೆಯನ್ನು ಹಾಗೂ ಚುನಾವಣಾ ಪ್ರಚಾರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರು ಸಂಸದರಾಗಿ ನಾಡಿನ ಜನತೆಗೆ ಆದ ಅನ್ಯಾಯಗಳು ಬಗ್ಗೆ ಪಾರ್ಲಿಮೆಂಟಿನಲ್ಲಿ ಧ್ವನಿ ಎತ್ತಲಿಲ್ಲ. ಶೋಭಾ ಕರಂದ್ಲಾಜೆ ಅವರನ್ನು ಉಡುಪಿ-ಚಿಕ್ಕಮಗಳೂರಿನ ಬಿಜೆಪಿ ಕಾರ್ಯಕರ್ತರೇ ಗೋ-ಬ್ಯಾಕ್ ಎಂದು ಓಡಿಸಿದ್ದಾರೆ. ಗೆಲ್ಲಿಸಿದ ಕ್ಷೇತ್ರದ ಕಾರ್ಯಕರ್ತರೇ ಅವರನ್ನು ಗೋ ಬ್ಯಾಕ್ ಎಂದು ಕಳುಹಿಸಿದ್ದಾರೆ ಎಂದರು.
ಶೋಭಾ ಕರಂದ್ಲಾಜೆ ಅವರು ಸಂಸದರಾಗಿ ಜನರ ಕೆಲಸ ಮಾಡಲಿಲ್ಲ. ಈ ಕಾರಣಕ್ಕೇ ಪ್ರಧಾನಿ ನರೇಂದ್ರ ಮೋದಿಯವರ ಮುಖನೋಡಿ ಮತ ಕೊಡಿ ಎಂದು ಕೇಳುತ್ತಿದ್ದಾರೆ. ಬಿಜೆಪಿಯವರೂ ಸರ್ಕಾರ ನಡೆಸಿ ಜನರ ಕೆಲಸ ಮಾಡದೆ ತಿರಸ್ಕೃತಗೊಂಡರು. ಹೀಗಾಗಿ ಇವರೂ ಮೋದಿ ಮುಖ ನೋಡಿ ಮತ ಹಾಕಲು ಕೇಳುತ್ತಿದ್ದಾರೆಯೇ ಹೊರತು ತಮ್ಮ ಸಾಧನೆಗಳ ಮೇಲೆ ಕೇಳುತ್ತಿಲ್ಲ ಎಂದು ಮುಖ್ಯಮಂತ್ರಿ ಟೀಕಿಸಿದರು.
ಕೇಂದ್ರ ಸರ್ಕಾರ ಬೆಂಗಳೂರಿಗೆ ಕುಡಿಯುವ ನೀರು ಒದಗಿಸುವ ಮೇಕೆದಾಟು ಯೋಜನೆಗೆ ಅನುಮತಿ ಕೊಡಲಿಲ್ಲ. ಮೋದಿಯವರೂ ಬೆಂಗಳೂರಿನ ಜನತೆಗೆ ಕುಡಿಯುವ ನೀರು ಕೊಡುವ ಯೋಜನೆಗೆ ಬೆಂಬಲ ಘೋಷಿಸುತ್ತಿಲ್ಲ. ಕಪ್ಪುಹಣ ತಂದು ಎಲ್ಲರ ಖಾತೆಗೆ 15 ಲಕ್ಷ ಹಾಕ್ತೀವಿ ಅಂದ ಮೋದಿಯವರು 15 ರೂಪಾಯಿಯನ್ನೂ ಹಾಕಿಲ್ಲ. ಮೋದಿಯವರು ಹೇಳಿದ ಯಾವುದನ್ನೂ ಜಾರಿ ಮಾಡಿಲ್ಲ ಎಂದು ಆರೋಪಿಸಿದರು.
ನುಡಿದಂತೆ ನಡೆದು ನಿಮ್ಮ ಮತಗಳಿಗೆ ಘನತೆ ತರುವ ಕೆಲಸವನ್ನು ನಾವು ಮಾಡಿದ್ದೇವೆ. ನಮಗೆ ಶಕ್ತಿ ತುಂಬಿ ಎಂದು ಕರೆ ನೀಡಿದರು.