ಲೋಕಸಭಾ ಚುನಾವಣೆ ಹಿನ್ನೆಲೆ ತ್ವರಿತ ಮೌಲ್ಯಮಾಪನ
ಬೆಂಗಳೂರು:ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಏಪ್ರಿಲ್ 2ನೇ ವಾರದಲ್ಲಿ ಪ್ರಕಟಿಸಲು ಕರ್ನಾಟಕ ರಾಜ್ಯ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಸಿದ್ಧಗೊಂಡಿದೆ.
ವೃತ್ತಿ ಶಿಕ್ಷಣ ಪ್ರವೇಶ ಪರೀಕ್ಷೆ ಏಪ್ರಿಲ್ ಮೂರನೇ ವಾರದಲ್ಲಿ ನಡೆಯಲಿದ್ದು ಅದಕ್ಕೂ ಮುನ್ನವೇ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಲು ಮಂಡಳಿ ಮುಂದಾಗಿದೆ.
ಮೌಲ್ಯಮಾಪನ ಕಾರ್ಯ ಪೂರ್ಣಗೊಂಡಿದ್ದು, ಏಪ್ರಿಲ್ 10 ರಿಂದ 15ರವರೆಗಿನ ಯಾವುದೇ ದಿನಗಳಲ್ಲಿ ಫಲಿತಾಂಶ ಹೊರಬೀಳಲಿದೆ.
ಕಳೆದ ಮಾರ್ಚ್ 1ರಿಂದ ಆರಂಭಗೊಂಡಿದ್ದ ಪರೀಕ್ಷೆ ಅದೇ ತಿಂಗಳ 23ಕ್ಕೆ ಅಂತ್ಯಗೊಂಡಿತ್ತು. ಮಾರ್ಚ್ 25ರಿಂದ ಮೌಲ್ಯಮಾಪನ ಆರಂಭಗೊಂಡಿತ್ತು.
6.75 ಲಕ್ಷ ವಿದ್ಯಾರ್ಥಿಗಳಿಂದ ಪರೀಕ್ಷೆ
ಈ ಬಾರಿ 6.75 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ 1,124 ಪರೀಕ್ಷಾ ಕೇಂದ್ರಗಳಲ್ಲಿ ಅತ್ಯಂತ ಬಿಗಿ ಭದ್ರತೆಯಲ್ಲಿ ಪರೀಕ್ಷೆಗಳನ್ನು ಮಂಡಳಿ ನಡೆಸಿತ್ತು.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪರೀಕ್ಷೆ ಮುಗಿಯುತ್ತಿದ್ದಂತೆ, ಮೌಲ್ಯಮಾಪನ ಜೊತೆ ಜೊತೆಯಲ್ಲೇ ಟ್ಯಾಬಲೇಷನ್ ನಡೆದಿದ್ದರಿಂದ ತ್ವರಿತಗತಿಯಲ್ಲಿ ಫಲಿತಾಂಶ ಪ್ರಕಟಣೆಗೆ ಸಾಧ್ಯವಾಗುತ್ತಿದೆ.
ಚುನಾವಣೆಗೆ ಶಾಲಾ-ಕಾಲೇಜುಗಳ ಶಿಕ್ಷಕರು ನಿಯೋಜನೆಗೊಳ್ಳುವುದರಿಂದ, ಶಾಲಾ-ಕಾಲೇಜಿನ ಆವರಣ ಮತ್ತು ಸಿಬ್ಬಂದಿಯನ್ನು ಚುನಾವಣೆಗೆ ಬಳಕೆ ಮಾಡಿಕೊಳ್ಳುವುದರಿಂದ ಮೌಲ್ಯಮಾಪನ ಕಾರ್ಯವನ್ನು ತ್ವರಿತವಾಗಿ ಮುಗಿಸಲಾಗಿದೆ.