ಬೆಂಗಳೂರು:ಯುಗಾದಿ ಹೊಸತೊಡಕು ಸಂಭ್ರಮಕ್ಕೆ ಅಡ್ಡಿ ಮಾಡುವ ಮೂಲಕ ಕಾಂಗ್ರೆಸ್ ಪಕ್ಷವು ಹಿಂದೂ ಸಂಸ್ಕೃತಿಯ ಮೇಲೆ ತನ್ನ ’ಕಾಕ’ ದೃಷ್ಟಿ ಬೀರಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಕಿಡಿಕಾರಿದ್ದಾರೆ.
ಹೊಸತಡಕು ದಿನದಂದು ತಮ್ಮ ಸ್ನೇಹಿತರಿಗೆ ಏರ್ಪಡಿಸಿದ್ದ ಔತಣಕೂಟವನ್ನು ಕಾಂಗ್ರೆಸ್ ನಾಯಕರು ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡು ನಮ್ಮ ಹಿಂದೂ ಆಚರಣೆಯನ್ನೇ ತಡೆದಿದ್ದಾರೆ ಎಂದು ಟೀಕಿಸಿದ್ದಾರೆ.
ಬಿಡದಿ ಮನೆ ವಿಷಯ
ಬಿಡದಿ ಮನೆಯ ವಿಷಯ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಕುಮಾರಸ್ವಾಮಿ ಅವರ ನಡುವೆ ಮಾತಿನ ಕಾಳಗಕ್ಕೆ ಎಡೆ ಮಾಡಿದ್ದು, ಇದರ ಭರದಲ್ಲಿ ಒಕ್ಕಲಿಗ ಹಾಗೂ ಸಮುದಾಯದ ಮಠಗಳನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂಬ ಮಾತುಗಳೂ ಕೇಳಿಬಂದಿದೆ.
ಬಿಡದಿ ತೋಟವನ್ನು ಕುಮಾರಸ್ವಾಮಿ, ಹೆಡ್ ಕ್ವಾರ್ಟರ್ಸ್ ಮಾಡಿಕೊಂಡಿದ್ದಾರೆ ಎಂಬ ಆ ಪಕ್ಷದ ನಾಯಕರ ಹೇಳಿಕೆಗೆ ಕೆಂಡಾಮಂಡಲವಾಗಿರುವ ಕುಮಾರಸ್ವಾಮಿ, ಕಾಂಗ್ರೆಸ್ ಆಫೀಸ್ ಅನ್ನು ನಾನು ಹೆಡ್ ಆಫೀಸ್ ಮಾಡಿಕೊಳ್ಳಲು ಆಗುತ್ತದೆಯೇ ಎಂದು ತಿರುಗೇಟು ನೀಡಿದ್ದಾರೆ.
ನನ್ನ ತೋಟ, ನನ್ನ ಮನೆ, ಅಲ್ಲಿ ಹಿಂದೂ ಸಂಸ್ಕೃತಿಯಂತೆ ಹಬ್ಬ ಆಚರಿಸುತ್ತಿದ್ದೇನೆ, ಮೇಕೆ ದಾಟು ಪಾದಯಾತ್ರೆಯಲ್ಲಿ ತೂರಾಡಿದಂತೆ ನಾವೇನು ಇಲ್ಲಿ ತೂರಾಡುತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ನನ್ನ ತೋಟವೇ ನನ್ನ ಹೆಡ್ಡಾಫೀಸ್
ಬಿಜೆಪಿಗೆ ಕೇಶವ ಕೃಪ ಹೇಗೋ, ನಮ್ಮ ಪಕ್ಷಕ್ಕೆ ನಮ್ಮ ತೋಟದ ಮನೆಯೂ ಹಾಗೆ, ಬಿಡದಿಯ ನನ್ನ ತೋಟವೇ ನನ್ನ ಪಕ್ಷದ ಹೆಡ್ಡಾಫೀಸ್, ಅದರಲ್ಲಿ ತಪ್ಪೇನಿದೆ, ನಾನು ಪಕ್ಷದ ಅಧ್ಯಕ್ಷನಿದ್ದೇನೆ, ಅಲ್ಲಿ ನಾನು, ನಮ್ಮ ಪಕ್ಷದ ಕೆಲ ಮುಖಂಡರ ಸಭೆ ಕರೆದಿದ್ದೆ, ಅಲ್ಲದೆ, ನನ್ನ ತೋಟದಲ್ಲಿ 120 ಜನ ಈಗಲೂ ಕೆಲಸ ಮಾಡುತ್ತಿದ್ದಾರೆ, ಅವರಿಗೆ ಊಟದ ವ್ಯವಸ್ಥೆ ಮಾಡಿದ್ದೆವು, ಮಾಡಬಾರದು ಅನ್ನೋಕೆ ಅದೇನು ಕಾಂಗ್ರೆಸ್ ಹೆಡ್ಡಾಫೀಸಾ, ಬಿಜೆಪಿಗೆ ಕೇಶವ ಕೃಪ ಹೇಗೋ ನಮ್ಮ ಪಕ್ಷಕ್ಕೆ ನಮ್ಮ ತೋಟದ ಮನೆಯೂ ಹಾಗೆಯೇ ಎಂದು ಕಾಂಗ್ರೆಸ್ ಪಕ್ಷವನ್ನು ಕುಟುಕಿದರು.
ಕಾಂಗ್ರೆಸ್ ನಾಯಕರು ವಿಧಾನಸಭೆ ಚುನಾವಣೆಗೆ ಮೊದಲು ಮೇಕೆದಾಟು ಪಾದಯಾತ್ರೆ ಮಾಡಿದ್ದರು, ಪಾದಯಾತ್ರೆಯಲ್ಲಿ ತೂರಾಡಿದ್ದು ಯಾರು, ನಾನು ತೂರಾಡಿದ್ನಾ, ನನಗೂ ಏನು ಮಾಡಬೇಕು, ಏನು ಮಾಡಬಾರದು ಎಂದು ಗೊತ್ತಿದೆ, ಅಲ್ಲಿನ ತಹಶಿಲ್ದಾರ್ ಅವರಿಗೆ ಪದೇ ಪದೇ ಫೋನ್ ಕರೆ ಮಾಡಿ ಒತ್ತಡ ಹೇರಿದ್ದಾರೆ, ಏನು ಸಿಕ್ಕಿಲ್ಲ ಅಲ್ಲಿ, ಇಷ್ಟು ಚುನಾವಣೆ ಮಾಡಿದವನಿಗೆ ಏನು ಮಾಡಬೇಕು ಅನ್ನೋದು ಗೊತ್ತಿಲ್ಲವಾ ಎಂದು ಅವರು ಖಾರವಾಗಿ ಪ್ರಶ್ನಿಸಿದರು.
ನಾವು ಬಿಡದಿ ತೋಟದಲ್ಲಿ ಗ್ಲಾಸ್ ಇಟ್ಟು ಪಾರ್ಟಿ ಮಾಡ್ತಿಲ್ಲ, ಹಾಗೆ ಮಾಡೋದು ಕಾಂಗ್ರೆಸ್ ಸಂಸ್ಕೃತಿ, ಅಂತಹ ಕೆಲಸವನ್ನು ಕಾಂಗ್ರೆಸ್ ನಿರಂತರವಾಗಿ ಮಾಡಿಕೊಂಡು ಬಂದಿದೆ ಎಂದು ಅವರು ಆರೋಪ ಮಾಡಿದರು.
ನಾನು ಅಧಿಕಾರದಲ್ಲಿದ್ದಾಗ ಎಂದೂ ಸಹಾ, ನಮ್ಮ ಸಮುದಾಯದ ಸ್ವಾಮೀಜಿಗಳನ್ನು ದುರುಪಯೋಗ ಪಡಿಸಿಕೊಳ್ಳುವ ಕೆಲಸ ಮಾಡಿಲ್ಲ, ನಾನು ಎಂದೂ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿಲ್ಲ, ಜಾತ್ಯತೀತ ಅಂತ ಹೇಳೋರು, ಪ್ರತೀ ದಿನ ಜಾತಿ ಬಗ್ಗೆಯೇ ಮಾತಾಡ್ತಾರೆ, ನಮ್ಮ ಸಮಾಜದ ಜನ ದಡ್ಡರಲ್ಲ, ಇವರು ನಡೆಸುತ್ತಿರುವ ರಾಜಕೀಯ ಎಲ್ಲರಿಗೂ ಅರ್ಥ ಆಗುತ್ತಿದೆ ಎಂದು ಅವರು ಕಿಡಿಕಾರಿದರು.
ಪರಮಪೂಜ್ಯ ಶ್ರೀಗಳನ್ನು ಭೇಟಿ ಮಾಡಿ ಅವರನ್ನು ಬಳಸಿಕೊಳ್ಳುವ ಪ್ರಯತ್ನ ಮೊನ್ನೆ ಕಾಂಗ್ರೆಸ್ ಮಾಡಿದೆ, ರಾಜಕೀಯಕ್ಕೂ ಧರ್ಮಕ್ಕೂ ಏನ್ ಸಂಬಂಧ, ಧಾರ್ಮಿಕವಾಗಿ ನಾಡಿಗೆ ಮಾರ್ಗದರ್ಶನ ಮಾಡುತ್ತಿರುವ ಸ್ವಾಮೀಜಿಗಳನ್ನು ರಾಜಕೀಯಕ್ಕೆ ಎಳೆದು ತರುವುದು ಸರಿಯಲ್ಲ ಎಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.
ಕುಮಾರಸ್ವಾಮಿ ಯಾರನ್ನ ಟೀಕೆ ಮಾಡಿಲ್ಲ
ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಶಿವಕುಮಾರ್, “ಕುಮಾರಸ್ವಾಮಿ ಅವರು ಯಾರನ್ನ ಟೀಕೆ ಮಾಡಿಲ್ಲ ಹೇಳಿ, ಪ್ರಣಾಳಿಕೆ ಬಿಡಿ, ಕುಮಾರಸ್ವಾಮಿ ಅವರು ನಮ್ಮ ಪ್ರತಿ ವಿಚಾರವನ್ನೂ ಟೀಕೆ ಮಾಡುತ್ತಾರೆ, ಮೇಕೆದಾಟು ಪಾದಯಾತ್ರೆ ಟೀಕೆ ಮಾಡಿದ್ದವರು ಈಗ ಮೇಕೆದಾಟು ಯೋಜನೆ ಜಾರಿಗೆ ಶಪಥ ಮಾಡುವುದಾಗಿ ಹೇಳಿದ್ದಾರೆ.
ಮಠದ ಸ್ವಾಮೀಗಳನ್ನೂ ಬಿಟ್ಟಿಲ್ಲ, ಎರಡು ಮಠ ಮಾಡಿದ್ದಾರೆ, ಈಗ ದಿನಬೆಳಗಾದರೆ ಮಠಕ್ಕೆ ಹೋಗಿ ಭೇಟಿ ಮಾಡುತ್ತಾರೆ, ಅವರು ತಮ್ಮ ಮಾತಿಗೆ ಎಂದಿಗೂ ಬದ್ಧರಾಗಿರುವುದಿಲ್ಲ, ಹೀಗಾಗಿ ಅವರ ಮಾತನ್ನು ನಾವು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದರು.
“ಒಕ್ಕಲಿಗರು ಮತ್ತು ಸ್ವಾಮೀಜಿಗಳು ದಡ್ಡರಲ್ಲ, ಸ್ವಾಮೀಜಿಗಳ ಬಳಿ ಬರುವವರಿಗೆ ವಿಭೂತಿ, ಹೂವಿನ ಹಾರ ಹಾಕಿ ಕಳಿಸುತ್ತಾರೆ, ಅವರು ನಮ್ಮ ಪರ, ಅವರ ಪರ, ಇಬ್ಬರ ಪರವೂ ಮಾಡುವುದಿಲ್ಲ, ಸ್ವಾಮೀಜಿಗಳು ಬುದ್ಧಿವಂತರು, ರಾಜಕೀಯದಲ್ಲಿ ಅವರು ಹಸ್ತಕ್ಷೇಪ ಮಾಡುವುದಿಲ್ಲ ಎಂದರು.
ಮಠವನ್ನು ಇಬ್ಭಾಗ ಮಾಡಿದವರು
ಈ ಹಿಂದೆ ಜನತಾದಳದವರು ಮಠವನ್ನು ಇಬ್ಭಾಗ ಮಾಡಿದ ಬಗ್ಗೆ ಸ್ವಾಮೀಜಿಗಳಿಗೆ ಅರಿವಿದೆ, ನಮ್ಮ ಜನ ಕೂಡ ಇದನ್ನು ಗಮನಿಸುತ್ತಾರೆ, ಮೈತ್ರಿ ಸರ್ಕಾರ ಪತನವಾದ ಬಳಿಕ ನಮ್ಮ ಸಮಾಜದ ಮುಖ್ಯಮಂತ್ರಿ ಅವರನ್ನು ಇಳಿಸಿ ಬಿಟ್ಟಿರಲ್ಲ ಎಂದು ಸ್ವಾಮೀಜಿಗಳು ಬಿಜೆಪಿಯರನ್ನು ಪ್ರಶ್ನಿಸಬಹುದಿತ್ತಲ್ಲವೇ, ಇದನ್ನು ಕೇಳುವ ಶಕ್ತಿ ಸ್ವಾಮೀಜಿಗಳಿಗೆ ಇದೆಯೋ ಇಲ್ಲವೋ ಗೊತ್ತಿಲ್ಲ, ಒಕ್ಕಲಿಗ ಮುಖ್ಯಮಂತ್ರಿಯನ್ನು ಕೆಳಗಿಳಿಸಿದವರನ್ನೇ ಇಂದು ಸ್ವಾಮೀಜಿಯವರ ಬಳಿ ಕರೆದುಕೊಂಡು ಹೋಗಿ ಆಶೀರ್ವಾದ ಪಡೆಯುತ್ತಿದ್ದಾರಲ್ಲವೇ ಎಂದು ವ್ಯಂಗ್ಯವಾಡಿದರು.
ಪಾದಯಾತ್ರೆ ಮಾಡಿದ್ದರೆ ಗೊತ್ತಾಗುತ್ತಿತ್ತು
ಮೇಕೆದಾಟು ಪಾದಯಾತ್ರೆ ವೇಳೆ ನಾನು ತೂರಾಡಿದ್ದೇನೆ ಎಂಬ ಕುಮಾರಸ್ವಾಮಿ ಹೇಳಿಕೆಗೆ, “ಅವರು ಏನಾದರೂ ಹೇಳಿಕೊಳ್ಳಲಿ, ಜನಕ್ಕೆ ಎಲ್ಲವೂ ಗೊತ್ತಿದೆ, ನಾನು ಪಾದಯಾತ್ರೆ ಮಾಡಿದ್ದೇನೆ ತಾನೆ, ಅವರೂ ಮಾಡಲಿ.
ನಾನು ಕುಡಿದು ತೂರಾಡಿದ್ದೇನೆಯೇ, ನಾನು ಪಾದಯಾತ್ರೆಯಲ್ಲಿ ನಡೆದು ಸುಸ್ತಾಗಿ ತೂರಾಡಿದ್ದೇನೆ, ಕುಮಾರಸ್ವಾಮಿ ಅವರು ಅಲ್ಲಿ ನಡೆದಿದ್ದರೆ ಅವರಿಗೆ ಗೊತ್ತಾಗುತ್ತಿತ್ತು, ಈ ನಾಡು, ಕಾವೇರಿ ಜಲಾನಯನ ಪ್ರದೇಶದ ಜನರಿಗಾಗಿ ಈ ಹೋರಾಟ ಮಾಡಿದ್ದೇನೆ, ನಾನು ಈ ವಿಚಾರದಲ್ಲಿ ಅವರಿಗೆ ಸವಾಲು ಹಾಕುವುದಿಲ್ಲ, ನಾನು ಸವಾಲು ಹಾಕಿ ಅವರ ಆರೋಗ್ಯ ಹೆಚ್ಚುಕಮ್ಮಿ ಆದರೆ, ನಾನು ಜವಾಬ್ದಾರಿ ತೆಗುಕೊಳ್ಳುವುದಿಲ್ಲ, ಅವರು ಧೈರ್ಯವಾಗಿ ಚುನಾವಣೆ ಮಾಡುತ್ತಿದ್ದಾರೆ, ಅದಕ್ಕೆ ಶುಭ ಕೋರುತ್ತೇನೆ ಎಂದರು.