ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸವಾಲು
ಕಲಬುರಗಿ:ಹತ್ತು ವರ್ಷದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಏನು ಅಭಿವೃದ್ಧಿ ಮಾಡಿದ್ದಾರೆ ಹೇಳಲಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂದಿಲ್ಲಿ ಪ್ರಶ್ನಿಸಿದ್ದಾರೆ.
ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು, ಕಲಬುರಗಿಯಲ್ಲಿ ಏಮ್ಸ್ ಸ್ಥಾಪಿಸಿ ಎಂದು ಮೋದಿಗೆ ಮನವಿ ಮಾಡಿದೆ, ಆದರೆ, ತಿರಸ್ಕಾರ ಮಾಡಿದರು, ಕಲಬುರಗಿಗೆ ಬಂದು ಹೋಗಿದ್ದಾರೆ, ಹತ್ತು ವರ್ಷಗಳ ತಮ್ಮ ಅಧಿಕಾರಾವಧಿಯಲ್ಲಿ ಈ ಭಾಗಕ್ಕೆ ಏನು ಕೊಟ್ಟಿದ್ದಾರೆ ಎಂಬುದಾಗಿ ಹೇಳಬೇಕಿತ್ತು ಎಂದರು.
ರೇಲ್ವೆ ವಲಯ ವಾಪಸ್ ಹೋಗಿದೆ
ತಮ್ಮ ಅವಧಿಯಲ್ಲಿ ಮಂಜೂರಾಗಿದ್ದ ರೇಲ್ವೆ ವಲಯ ಯೋಜನೆ ವಾಪಸ್ ಹೋಗಿದೆ, ನನ್ನ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳಲ್ಲಿ ಶೇ.10ರಷ್ಟು ಅಭಿವೃದ್ಧಿ ಮಾಡಿದ್ದರೆ ತೋರಿಸಲಿ ಎಂದು ಸವಾಲು ಹಾಕಿದರು.
ಮೋದಿ ತಮ್ಮ ಗ್ಯಾರಂಟಿ ಏನು ಎಂದು ಮೊದಲು ಜನರಿಗೆ ತಿಳಿಸಲಿ, ರಾಜ್ಯದಲ್ಲಿ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳ ರೀತಿಯಲ್ಲೇ ತಮ್ಮ ಗ್ಯಾರಂಟಿ ಎಂದು ಹೇಳುತ್ತಿದ್ದಾರೆ, ಆದರೆ ಯಾವ ಗ್ಯಾರಂಟಿ ಎಂದು ಹೇಳಿಲ್ಲ.
ಪೆಟ್ರೋಲ್, ಡಿಸೇಲ್, ಗ್ಯಾಸ್ ಸಿಲಂಡರ್ ಬೆಲೆ ಏರಿದೆ, ಇದು ನಿಮ್ಮ ಗ್ಯಾರಂಟಿನಾ, ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಕೊಡುತ್ತೇನೆ ಎಂದು ಹೇಳಿ, ಉದ್ಯೋಗ ಕೊಡಲಿಲ್ಲ, ಇದು ನಿಮ್ಮ ಗ್ಯಾರಂಟಿನಾ, ಪ್ರತಿಯೊಬ್ಬರಿಗೆ ಹದಿನೈದು ಲಕ್ಷ ರೂ. ಕೊಡುತ್ತೇನೆ ಎಂದಿದ್ದರು, ಕೊಟ್ಟರಾ, ರೈತರ ಆದಾಯ ದ್ವಿಗುಣ ಮಾಡುವುದಾಗಿ ಹೇಳಿದ್ದರು, ಮಾಡಿದ್ದಾರಾ ಎಂದು ಪ್ರಶ್ನಿಸಿದರು.
ಜವಳಿ ಪಾರ್ಕ್
ತಮ್ಮ ಅವಧಿಯಲ್ಲಿ ರಾಷ್ಟ್ರೀಯ ಹೆದ್ದಾರಿ, ಕೇಂದ್ರೀಯ ವಿಶ್ವವಿದ್ಯಾಲಯ ಸ್ಥಾಪಿಸಿದ್ದೇನೆ, ಮೂವತ್ತೇಳು ಹೊಸ ರೈಲು ಓಡಿಸಿದ್ದೇನೆ, ಜವಳಿ ಪಾರ್ಕ್ ಮಂಜೂರು ಮಾಡಿಸಿದ್ದೇನೆ, ಇವುಗಳನ್ನು ನೀವು ಮಾಡಿ ಎಂದು ನನಗೆ ಯಾರೂ ಹೇಳಿರಲಿಲ್ಲ, ನಮ್ಮ ಭಾಗದ ಅಭಿವೃದ್ಧಿಗಾಗಿ ಕೆಲಸ ಮಾಡಿದ್ದೇನೆ, ಈಗ ಓಟು ಕೇಳುತ್ತಿದ್ದೇನೆ.
ಭ್ರಷ್ಟಾಚಾರಿಗಳನ್ನು ಬಿಡುವುದಿಲ್ಲವೆಂದು ಮೋದಿ ಹಾಗೂ ಷಾ ಹೇಳುತ್ತಾರೆ, ಬಿಡುವ ಮಾತಿರಲಿ, ನಿಮ್ಮ ಪಕ್ಕದಲ್ಲೇ ಕೂಡಿಸಿಕೊಂಡಿದ್ದೀರಲ್ಲ ಎಂದರು.
25 ಗ್ಯಾರಂಟಿಗಳ ಜಾರಿ
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಯಾವುದೇ ಕಂಪನಿಯಲ್ಲಿ ಯುವಕ-ಯುವತಿಯರು ಅಂಪ್ರೆಟಿಸಿಪ್ ಮಾಡಿ ಬಂದರೆ ಅವರಿಗೆ ಉದ್ಯೋಗ ನೀಡಲಾಗುವುದು, ರೈತರ ಸಾಲ ಮನ್ನಾ ಮಾಡಲಾಗುವುದು, ಮಹಿಳೆಯರಿಗೆ ಪ್ರತಿ ವರ್ಷ ಒಂದು ಲಕ್ಷ ರೂ. ನೀಡಲಾಗುವುದು, ಒಟ್ಟಾರೆ 25 ಗ್ಯಾರಂಟಿಗಳನ್ನು ಜಾರಿಗೆ ತರಲಾಗುವುದು.
ಈ ಚುನಾವಣೆ ದೇಶದ ಸಂವಿಧಾನ, ಪ್ರಜಾಸತ್ತೆ ಉಳಿಸುವ ಚುನಾವಣೆಯಾಗಲಿದೆ, ಪ್ರತಿಯೊಂದು ಸಂಸ್ಥೆಗಳಲ್ಲಿ ಆರ್‌ಎಸ್‌ಎಸ್ ಹುಡುಗರನ್ನು ಸೇರಿಸುತ್ತಿದ್ದಾರೆ, ಪ್ರಜಾತಂತ್ರ ಉಳಿಯಬೇಕು ಹಾಗೂ ಬೆಳೆಯಬೇಕು ಎನ್ನುವ ಇಚ್ಛೆ ಇದ್ದರೆ ಕಾಂಗ್ರೆಸ್‌ಗೆ ಮತ ನೀಡಿ ಎಂದರು.