ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಘಟನೆಯ ಪ್ರಮುಖ ಆರೋಪಿಗಳಾದ ಅಬ್ದುಲ್ ಮತೀನ್ ತಾಹ ಮತ್ತು ಮುಜಾವೀರ್ ಹುಸೇನ್ ಶಾಜೀಬ್ ಅವರುಗಳನ್ನು 10 ದಿನಗಳ ಎನ್‌ಐಎ ಕಸ್ಟಡಿಗೆ ಇಂದು ಒಪ್ಪಿಸಲಾಗಿದೆ.
ಆರೋಪಿಗಳ ವೈದ್ಯಕೀಯ ಪರೀಕ್ಷೆ ನಂತರ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದಾಗ ಎನ್‌ಐಎ ಕಸ್ಟಡಿಗೆ ನೀಡಿ ಆದೇಶ ಮಾಡಿದರು.
ಮಂಗಳೂರು ಗೋಡೆ ಬರಹ ಪ್ರಕರಣದಲ್ಲಿಯೂ ಮತೀನ್ ಮತ್ತು ಮುಸಾವೀರ್ ಹೆಸರನ್ನು ಎರಡು ಮತ್ತು ಮೂರನೇ ಆರೋಪಿಗಳನ್ನಾಗಿ ಉಲ್ಲೇಖಿಸಲಾಗಿದೆ. ಮುಸಾವೀರ್ ಹಾಗೂ ಅಬ್ದುಲ್ ತಾಹ ಇಬ್ಬರೂ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನವರು.
ಬಾಂಬ್ ಸ್ಫೋಟ ಸಂಚು ಬಹಿರಂಗ
ದಕ್ಷಿಣ ಭಾರತದ ಇನ್ನೂ ಹಲವೆಡೆ ಬಾಂಬ್ ಸ್ಫೋಟಿಸುವ ಯೋಜನೆಯನ್ನು ಶಂಕಿತ ಭಯೋತ್ಪಾದಕರು ರೂಪಿಸಿದ್ದರು ಎಂಬುದು ವಿಚಾರಣೆಯಿಂದ ತಿಳಿದುಬಂದಿದೆ.
ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಬಳಸಿದ ಬಾಂಬ್ ಅನ್ನು ಅಬ್ದುಲ್ ಮತೀನ್ ತಾಹ ಸಿದ್ಧಪಡಿಸಿದ್ದ, ಎಂಜಿನಿಯರಿಂಗ್ ಪದವೀಧರನಾಗಿದ್ದ ಈತ ಬಾಂಬ್ ತಯಾರಿಕೆ ಮಾಹಿತಿ ಹೊಂದಿದ್ದ. ಇತರರಿಗೂ ತರಬೇತಿ ನೀಡುತ್ತಿದ್ದ. ತಾಹ ಸಿದ್ಧಪಡಿಸಿದ ಬಾಂಬ್ ಅನ್ನು ಮುಸಾವೀರ್, ರಾಮೇಶ್ವರಂ ಕೆಫೆಯಲ್ಲಿ ಇಟ್ಟಿದ್ದ ಎಂದು ವಿಚಾರಣೆಯಿಂದ ತಿಳಿದುಬಂದಿದೆ.
ಸ್ಫೋಟ ನಡೆಸಿದ ಆರೋಪಿಗಳಿಬ್ಬರೂ ನಕಲಿ ಹೆಸರುಗಳಿಂದ ತಲೆ ಮರೆಸಿಕೊಂಡಿದ್ದರು. ಒಂದೊಂದು ಕಡೆ ಒಂದೊಂದು ನಕಲಿ ಹೆಸರನ್ನು ಬಳಸುತ್ತಿದ್ದರು.
ನಕಲಿ ಅಧಾರ್ ಕಾರ್ಡ್‌ಗಳ ಬಳಕೆ
ಗುರುತು ಮರೆಮಾಚಲು ನಕಲಿ ಅಧಾರ್ ಕಾರ್ಡ್‌ಗಳನ್ನು ಬಳಕೆ ಮಾಡುತ್ತಿದ್ದರು, ನಕಲಿ ಕಾರ್ಡ್‌ಗಳ ಬಳಕೆಯೇ ಆರೋಪಿಗಳ ಬಂಧನಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿದ್ದು, ಪಶ್ಚಿಮ ಬಂಗಾಳದಲ್ಲಿ ನಕಲಿ ಆಧಾರ್ ಕಾರ್ಡ್ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ.
ಒಡಿಶಾ ಹಾಗೂ ಪಶ್ಚಿಮ ಬಂಗಾಳದಲ್ಲಿ ವಾಸಿಸುತ್ತಿರುವ ಬಾಂಗ್ಲಾದೇಶದ ಅಕ್ರಮ ವಲಸಿಗರು ಹೆಚ್ಚಾಗಿ ನಕಲಿ ಆಧಾರ್ ಕಾರ್ಡ್‌ಗಳನ್ನೇ ಬಳಸುತ್ತಿದ್ದು, ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಆರೋಪಿಗಳೂ ಇದೇ ಪ್ರದೇಶದಲ್ಲಿ ಅಡಗಿರಬಹುದೆಂಬ ಶಂಕೆ ಇತ್ತು.
ಆರೋಪಿ ಮುಸಾವೀರ್ ಹುಸೇನ್ ಶಾಜೀಬ್ ಮಧ್ಯಮವರ್ಗದ ಕುಟುಂಬಕ್ಕೆ ಸೇರಿದವನಾಗಿದ್ದು, ತೀರ್ಥಹಳ್ಳಿಯಲ್ಲಿ ಈತನ ತಾಯಿ ವಾಸವಾಗಿದ್ದು, ಮನೆ ಬಾಡಿಗೆಯೇ ಕುಟುಂಬದ ಆದಾಯದ ಮೂಲವಾಗಿದ್ದು, ಈತ ಸ್ಥಳೀಯರೊಂದಿಗೆ ಹೆಚ್ಚು ಬೆರೆಯುತ್ತಿರಲಿಲ್ಲ, ತನ್ನ ಸಮುದಾಯದವರು ಇರುವ ಒಂದೆರಡು ಪ್ರದೇಶಗಳಲ್ಲಿ ಮಾತ್ರ ತಿರುಗಾಡುತ್ತಿದ್ದ ಎಂದು ತಿಳಿದುಬಂದಿದೆ.
ಇನ್ನೊಬ್ಬ ಆರೋಪಿ ಅಬ್ದುಲ್ ಮತೀನ್ ತಾಹನ ತಂದೆ ವರ್ಷದ ಹಿಂದೆ ಮೃತಪಟ್ಟಿದ್ದು, ತಾಹ ತೀರ್ಥಹಳ್ಳಿಯಲ್ಲಿ ಪ್ರೌಢಶಾಲೆ ವ್ಯಾಸಂಗ ಮುಗಿಸಿ, ಬೆಂಗಳೂರಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದ.
ಈತ ಬೆಂಗಳೂರಿನಲ್ಲೇ ಉಗ್ರರ ಸಂಪರ್ಕಕ್ಕೆ ಬಂದಿದ್ದು, ಐಇಡಿ ಬಾಂಬ್ ತಯಾರಿಕೆಯಲ್ಲಿ ನಿಪುಣನಾಗಿದ್ದ. ಮಂಗಳೂರು ಕುಕ್ಕರ್ ಬ್ಲಾಸ್ಟ್, ಶಿವಮೊಗ್ಗ ಟ್ರಯಲ್ ಬ್ಲಾಸ್ಟ್‌ಗಳ ಮಾಸ್ಟರ್‌ಮೈಂಡ್ ಆಗಿದ್ದ ತಾಹ, ಕಳೆದ ನಾಲ್ಕು ವರ್ಷಗಳಿಂದ ನಾಪತ್ತೆಯಾಗಿದ್ದ. ಈತನ ಪತ್ತೆಗೆ ಮೂರು ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ರಾಮೇಶ್ವರಂ ಕೆಫೆ ಸ್ಫೋಟ ನಂತರ ಈ ಮೊತ್ತವನ್ನು ಹತ್ತು ಲಕ್ಷ ರೂ.ಗಳಿಗೆ ಏರಿಸಲಾಗಿತ್ತು.
ಕೋಲ್ಕತ್ತಾದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳು, ಒಂದೇ ಕಡೆ ಇರದೆ ಲಾಡ್ಜ್‌ಗಳನ್ನು ಬದಲಿಸುತ್ತಿದ್ದರು. ಪ್ರತಿ ಎರಡು ಮೂರು ದಿನಗಳಿಗೊಮ್ಮೆ ವಾಸ್ತವ್ಯ ಬದಲಿಸುತ್ತಿದ್ದರು.
ಮುಖ್ಯಮಂತ್ರಿ ಶ್ಲಾಘನೆ
ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಪ್ರಮುಖ ಆರೋಪಿಗಳನ್ನು ಎನ್‌ಐಎ ಮತ್ತು ಕರ್ನಾಟಕ ಪೊಲೀಸರು ಬಂಧಿಸಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಆರೋಪಿಗಳ ವಿಚಾರಣೆಯಿಂದ ಹೆಚ್ಚಿನ ವಿವರಗಳು ಲಭ್ಯವಾಗಲಿವೆ ಎಂದರು.