ಹೆಣ್ಣು ಮಕ್ಕಳನ್ನು ಅವಮಾನಿಸುವ ಮಾತು ಆಡಿಲ್ಲ
ಬೆಂಗಳೂರು:ಹೆಣ್ಣು ಮಕ್ಕಳನ್ನು ಅವಮಾನಿಸುವ ಯಾವುದೇ ಮಾತುಗಳನ್ನು ಆಡಿಲ್ಲ, ನನ್ನ ಮಾತಿನಿಂದ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದ್ದಾರೆ.
ಮಹಿಳೆಯರ ಬದುಕು ಸರಿಪಡಿಸಬೇಕು ಎಂಬುದಾಗಿ ಹೇಳಿದ್ದನ್ನು ಕಾಂಗ್ರೆಸ್ ಮುಖಂಡರು ತಿರುಚಿ ತಮಗೆ ಬೇಕಾದಂತೆ ಬಳಿಕೆ ಮಾಡಿಕೊಂಡಿದ್ದಾರೆ.
ಗ್ಯಾರಂಟಿಗಳಿಂದ ಕಾಂಗ್ರೆಸ್ ದಾರಿ ತಪ್ಪಿಸುತ್ತಿದೆ ಎಂದಿದ್ದೇನೆಯೇ ಹೊರತು, ಹೆಣ್ಣು ಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂದು ನಾನು ಹೇಳಿಲ್ಲ, ನನ್ನ ಹೇಳಿಕೆಯನ್ನು ಕಾಂಗ್ರೆಸ್ನ ಮಹಾನ್ ನಾಯಕರುಗಳು ತಿರುಚಿದ್ದಾರೆ.
ಎರಡು ಸಾವಿರಕ್ಕೆ ಮರುಳಾಗಬೇಡಿ
ನಾನು ಏನು ಅಂತಹ ಹೇಳಿಕೆ ಕೊಟ್ಟಿದ್ದೇನೆ, ಎರಡು ಸಾವಿರಕ್ಕೆ ಮರುಳಾಗಬೇಡಿ, ದಾರಿ ತಪ್ಪಬೇಡಿ ಎಂದಿದ್ದೇನೆ. ನನ್ನ ಕಾರ್ಯಕ್ರಮ ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬುವುದಾಗಿದೆ, ನಾನು ಮಹಿಳೆಯರ ಬಗ್ಗೆ ಅಶ್ಲೀಲವಾದ ಪದವನ್ನು ಎಲ್ಲಿ ಬಳಕೆ ಮಾಡಿದ್ದೇನೆ, ಇವರಿಗೆ ರಾಜಕೀಯ ಮಾಡಲು ನನ್ನ ಬಗ್ಗೆ ಯಾವ ವಿಚಾರವೂ ಇಲ್ಲ, ಅದಕ್ಕೆ ಇದನ್ನು ಬಳಕೆ ಮಾಡುತ್ತಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ಪ್ರತಿಷ್ಠೆ ಇಲ್ಲ, ನನ್ನ ಹೇಳಿಕೆಯಿಂದ ಯಾರಿಗೇ ನೋವಾಗಿದ್ದರೂ ವಿಷಾದಿಸುತ್ತೇನೆ, ನನ್ನ ಮಾತುಗಳಿಂದ ರಾಜ್ಯದ ತಾಯಂದಿರಿಗೆ ನೋವಾಗಿದ್ದರೆ, ನಾನು ಮತ್ತೊಮ್ಮೆ ವಿಷಾದಿಸುತ್ತೇನೆ ಎಂದರು.
ಎಲ್ಲವನ್ನೂ ರಾಜ್ಯದ ಜನರ ವಿವೇಚನೆಗೆ ಬಿಡುತ್ತೇನೆ, ನಾನು ಹೇಳಿರುವ ಅರ್ಥ, ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ತೆರಿಗೆ ಲೂಟಿ ಆಗುತ್ತಿದೆ, ಸಾಲದ ಹೊರೆ ನಿಮ್ಮ ಮೇಲೆ ಹಾಕುತ್ತಿದ್ದಾರೆ, ಆ ಸಾಲದಿಂದ ರಾಜ್ಯ ದಿವಾಳಿಯಾಗುತ್ತದೆ, ಅದಕ್ಕೆ ಮರುಳಾಗಬೇಡಿ, ಎಚ್ಚರವಾಗಿರಿ, ದಾರಿ ತಪ್ಪಬೇಡಿ ಎಂದು ಹೇಳಿದ್ದೇನೆ, ಇದು ತಪ್ಪಾ.
ಈಗ ಕಣ್ಣಲ್ಲಿ ನೀರು ಬಂದಿದೆಯಂತೆ
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ, ಇಂದಿರಾ ಗಾಂಧಿ ಸತ್ತ ನಂತರ ಈಗ ಕಣ್ಣಲ್ಲಿ ನೀರು ಬಂದಿದೆಯಂತೆ, ಹೆಣ್ಣು ಮಕ್ಕಳ ಸಭೆ ನಡೆಸಿ ಗಳಗಳನೆ ಅತ್ತಿದ್ದಾರೆ.
ಅಮಾಯಕ ಹೆಣ್ಣು ಮಕ್ಕಳನ್ನು ಕಿಡ್ನ್ಯಾಪ್ ಮಾಡಿ ಹೆದರಿಸಿ, ಬೆದರಿಸಿ, ಅವರ ಆಸ್ತಿ-ಪಾಸ್ತಿಗಳನ್ನು ಲಪಟಾಯಿಸಿದಾಗ ಮಿಸ್ಟರ್ ಶಿವಕುಮಾರ್ ಅವರಿಗೆ ಅಳು ಬರಲಿಲ್ಲ.
ಈಗ ಅವರ ಪಕ್ಷದ ಕಾರ್ಯಕರ್ತರನ್ನು ಬಿಟ್ಟು ಗೋಬ್ಯಾಕ್ ಎನ್ನಿಸುತ್ತಿದ್ದಾರೆ, ಅಲ್ಲಿ ಬಂದವರಿಗೆ ತಾವು ಏಕೆ ಬಂದಿದ್ದೇವೆ ಎಂದು ತಿಳಿದೇ ಇಲ್ಲ, ತಪ್ಪು ಮಾಡದವರು ನಿಮ್ಮ ಗೋಬ್ಯಾಕ್ಗೆ ಹೆದರಲ್ಲ, ಮಿಸ್ಟರ್ ಶಿವಕುಮಾರ್ ಅವರೊಂದಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಇದ್ದಾರೆ, ಅವರು ಚಿತ್ರನಟಿ ಹೇಮಾಮಾಲಿನಿ ವಿರುದ್ಧ ಏನು ಹೇಳಿದ್ದರು, ಅದನ್ನು ಕನ್ನಡದಲ್ಲಿ ಹೇಳೋಕಾಗಲ್ಲ, ಅದೆಲ್ಲಾ ಮಹಿಳೆಯರಿಗೆ ಗೌರವ ಕೊಡುವ ಹೇಳಿಕೆಗಳೇ ಎಂದು ಪ್ರಶ್ನಿಸಿದರು.
ನಿಮ್ಮ ಮುಖಂಡರು ಏನು ಮಾತನಾಡಿದ್ದರು
ಚಿತ್ರ ನಟಿ ಕಂಗನಾ ರಣಾವತ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದಾಗ, ಮಿಸ್ಟರ್ ಶಿವಕುಮಾರ್, ನಿಮ್ಮ ಪಕ್ಷದ ಮುಖಂಡರು ಏನು ಮಾತನಾಡಿದ್ದರು, ನಿಮ್ಮವರೇ ಅವರಿಗೆ ರೇಟ್ ಫಿಕ್ಸ್ ಮಾಡಿದ್ದು, ಅಷ್ಟೇ ಅಲ್ಲ ರಮೇಶ್ಕುಮಾರ್ ವಿಧಾನಸಭೆ ಕಲಾಪದಲ್ಲಿ, ಅತ್ಯಾಚಾರ ಅನಿವಾರ್ಯವಾದರೆ ಆನಂದಿಸಿ ಎಂದಿದ್ದರು.
ಶಾಮನೂರು ಶಿವಶಂಕರಪ್ಪ ಅವರು, ಮಹಿಳೆಯರು ಅಡುಗೆ ಮನೆಯಲ್ಲಿ ಇರಬೇಕು, ಮಹಿಳೆಯರನ್ನು ಅಡುಗೆ ಮನೆಯಿಂದ ಹೊರಗೆ ತರಬಾರದು ಎಂದು ಹೇಳಿದ್ದಾರೆ, ಅದಕ್ಕೆ ನೀವೇ ಕ್ಷಮೆ ಕೋರಿದ್ದೀರಿ.
ಇಂತಹ ನೂರಾರು ನಿದರ್ಶನ ಇದೆ, ಶಿವಕುಮಾರ್, ಇದಕ್ಕೆಲ್ಲ ಉತ್ತರ ಕೊಡಪ್ಪಾ, ನಿಮ್ಮ ಸೋನಿಯಾ, ರಾಹುಲ್ ಏನು ಹೇಳುತ್ತಾರೆ ಎಂದು ಕುಟುಕಿದರು.
ಅಪಾರ್ಟ್ಮೆಂಟ್ಗಳಿಗೆ ಧಮ್ಕಿ
ಬೆಂಗಳೂರಿನ ಅಪಾರ್ಟ್ಮೆಂಟ್ಗಳಿಗೆ ಎನ್ಒಸಿ ಕೊಡಲು ತಮ್ಮ ಸಹೋದರನಿಗೆ ಮತ ಹಾಕಬೇಕು ಎಂದು ನೀವು ಧಮ್ಕಿ ಹಾಕುತ್ತಿದ್ದೀರಿ, ನೀನು ಅಳಬೇಡಪ್ಪಾ, ನಿನಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ, ನೀನು ಆನಂದವಾಗಿರು, ನೀನು ದುಃಖ ಪಡಬೇಡಪ್ಪಾ, ಈಗ ಬಿಸಿಲು ಹೆಚ್ಚಿದೆ, ಬೀದಿಗೆ ಹೋಗಬೇಡಿ ಎಂದು ಕಾಂಗ್ರೆಸ್ ಮಹಿಳೆಯರಿಗೆ ಮನವಿ ಮಾಡುತ್ತೇನೆ.
ಈ ವಿಷಯ ಇಟ್ಟುಕೊಂಡು ಚುನಾವಣೆಯಲ್ಲಿ ಮನಃಪರಿವರ್ತನೆ ಮಾಡಲು ಆಗುವುದಿಲ್ಲ, ಎಷ್ಟು ಕುಟುಂಬಗಳನ್ನು ನಿಮ್ಮ ಆಸ್ತಿ ದುರಾಸೆಗೆ ಏನು ಮಾಡಿಕೊಂಡು ಬಂದಿದ್ದೀರಾ, ನಿಮ್ಮ ಇಡೀ ಇತಿಹಾಸ ನನಗೆ ಗೊತ್ತಿದೆ ಎಂದು ವಾಗ್ದಾಳಿ ಮಾಡಿದರು.
ಮಹಿಳಾ ಆಯೋಗದವರು ಸುಮೋಟೊ ಕೇಸ್ ದಾಖಲಿಸಿದ್ದಾರೆ, ಅದಕ್ಕೆಲ್ಲ ಉತ್ತರ ಕೊಡುತ್ತೇನೆ ಎಂದರು.