ಬೆಂಗಳೂರು:ಕರ್ನಾಟಕ ವಿಧಾನಸಭಾ ಚುನಾವಣಾ ಸೋಲಿನ ನಂತರ ದೂರ ಉಳಿದಿದ್ದ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮತ್ತೆ ರಾಜ್ಯ ರಾಜಕಾರಣಕ್ಕೆ ಪ್ರವೇಶ ಕೊಟ್ಟಿದ್ದಾರೆ.
ಮತ್ತೊಂದೆಡೆ ಮಂಡ್ಯ, ಬೆಂಗಳೂರು ಗ್ರಾಮಾಂತರ ಹಾಗೂ ಕೋಲಾರ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಈ ಕ್ಷೇತ್ರಗಳಿಗೆ ಸೀಮಿತವಾಗಿ ಪ್ರಚಾರ ಆರಂಭಿಸಿದ್ದಾರೆ.
ಮೂರು ಕ್ಷೇತ್ರಗಳಿಗೆ ಹೆಚ್ಚು ಒತ್ತು
ಇದುವರೆಗೂ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದ ದೇವೇಗೌಡ ಹಾಗೂ ಕುಮಾರಸ್ವಾಮಿ ಇಂದಿನಿಂದ ಈ ಮೂರು ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ನೀಡಲು ಮುಂದಾಗಿದ್ದಾರೆ.
ಹಠಾತ್ ಬೆಳವಣಿಗೆಯಲ್ಲಿ ಸಂತೋಷ್ ರಾಜ್ಯ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಇಳಿದಿದ್ದಾರೆ, ಇಂದು ತುಮಕೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಪರ ಕಾರ್ಯಕರ್ತರನ್ನು ಸಂಘಟಿಸುವ ಜೊತೆಗೆ ಪ್ರಚಾರ ಕೈಗೊಂಡರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಸಂಘಟನೆ ಮತ್ತು ಅಭ್ಯರ್ಥಿಗಳ ಆಯ್ಕೆಯಲ್ಲಿ ಮಹತ್ತರ ಬದಲಾವಣೆ ಮಾಡುವಲ್ಲಿ ಸಂತೋಷ್ ಪಾತ್ರವಿತ್ತು.
ಯಡಿಯೂರಪ್ಪ ಮತ್ತು ಅವರ ಕುಟುಂಬವನ್ನು ದೂರವಿರಿಸಿ ಪಕ್ಷವನ್ನು ಅಧಿಕಾರಕ್ಕೆ ತರಲು ಸಂತೋಷ ನಡೆಸಿದ ತಂತ್ರಗಾರಿಕೆ ಫಲ ನೀಡಿರಲಿಲ್ಲ.
ಸಲಹೆ ಮೇರೆಗೆ ಮತ್ತೆ ಅಖಾಡಕ್ಕೆ
ಹೀನಾಯ ಫಲಿತಾಂಶದ ನಂತರ ರಾಜ್ಯ ಸಂಘಟನೆಯಿಂದ ಸಂತೋಷ್ ದೂರ ಉಳಿದಿದ್ದರು. ಸೋಮಣ್ಣ ಅವರ ಕೋರಿಕೆ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಸಲಹೆ ಮೇರೆಗೆ ಮತ್ತೆ ರಾಜ್ಯ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ.
ಕರ್ನಾಟಕದಲ್ಲಿ ಕನಿಷ್ಠ 20 ಸ್ಥಾನಗಳನ್ನು ಗೆಲ್ಲಲೇಬೇಕೆಂದು ಗುರಿ ಇಟ್ಟುಕೊಂಡಿರುವ ರಾಷ್ಟ್ರೀಯ ಬಿಜೆಪಿಗೆ, ಇಲ್ಲಿನ ಕಾಂಗ್ರೆಸ್ ನಾಯಕರ ಸಂಘಟನೆ ಮತ್ತು ಆ ಪಕ್ಷದ ಅಭ್ಯರ್ಥಿಗಳಿಗೆ ಉದಾರ ನೀತಿ ತೋರುತ್ತಿರುವುದರಿಂದ ನಮ್ಮ ಗುರಿ ಮುಟ್ಟಲು ಸಾಧ್ಯವೇ ಎಂಬ ಅನುಮಾನ ಕಾಡಿದೆ.
ಈ ಹಿನ್ನೆಲೆಯಲ್ಲೇ ಸಂಘಟನೆಯಲ್ಲಿ ಹಿಡಿತ ಸಾಧಿಸಿರುವ ಮತ್ತು ಸಮಯಕ್ಕೆ ತಕ್ಕಂತೆ ರಾಜಕೀಯ ಪ್ರಜ್ಞೆ ಬಳಸುವ ಸಂತೋಷ್ ಅವರನ್ನು ಕರ್ನಾಟಕಕ್ಕೆ ಕಳುಹಿಸಿಕೊಡಲಾಗಿದೆ.
ಸಂತೋಷ್ ಮೇಲೆ ವಿಶ್ವಾಸ
ಸಂತೋಷ್ ಅವರಿಗೆ ಕರ್ನಾಟಕದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಕೆಲವು ಮಾನದಂಡಗಳನ್ನು ಬಳಸುತ್ತಾರೆ ಎಂಬ ವಿಶ್ವಾಸ ವರಿಷ್ಠರಿಗಿದೆ.
ಇನ್ನು ದೇವೇಗೌಡ ಹಾಗೂ ಕುಮಾರಸ್ವಾಮಿ ಬೆಂಗಳೂರು ಗ್ರಾಮಾಂತರ, ಮಂಡ್ಯ ಹಾಗೂ ಕೋಲಾರ ಕ್ಷೇತ್ರಗಳನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ.
ಕುಮಾರಸ್ವಾಮಿ ಸ್ವತಃ ಮಂಡ್ಯದ ಅಭ್ಯರ್ಥಿಯಾಗಿದ್ದರೂ, ಇನ್ನೂ ಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡಿಲ್ಲ, ಇಂದಿನಿಂದ ಪ್ರಚಾರದ ಅಂತಿಮ ಗಳಿಗೆವರೆಗೂ ಈ ಕ್ಷೇತ್ರಗಳಲ್ಲೇ ಉಳಿದು ಕಾರ್ಯನಿರ್ವಹಿಸಲಿದ್ದಾರೆ.
ದೇವೇಗೌಡರು ಸಹಾ ಕುಮಾರಸ್ವಾಮಿ ಒಂದು ಕ್ಷೇತ್ರದಲ್ಲಿದ್ದರೆ ಮತ್ತೊಂದು ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡು ಕಾಂಗ್ರೆಸ್ ಅಭ್ಯರ್ಥಿಗಳ ಸೋಲಿಗೆ ಶ್ರಮಿಸಲಿದ್ದಾರೆ.
ಬೆಂಗಳೂರು ಗ್ರಾಮಾಂತರದಿಂದ ತಮ್ಮ ಕುಟುಂಬದವರೇ ಆದ ಡಾ.ಸಿ.ಎನ್.ಮಂಜುನಾಥ್ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಅವರ ವಿರುದ್ಧ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಪ್ರಬಲ ಅಭ್ಯರ್ಥಿಯಾಗಿದ್ದಾರೆ.
ಗ್ರಾಮಾಂತರ ಕ್ಷೇತ್ರವನ್ನು ಗೌಡರು ಮತ್ತು ಕುಮಾರಸ್ವಾಮಿ ಪ್ರತಿಷ್ಠೆಯಾಗಿ ತೆಗೆದುಕೊಂಡು ಒಕ್ಕೂಟದ ಅಭ್ಯರ್ಥಿಯನ್ನು ಗೆಲ್ಲಿಸಲೇಬೇಕೆಂದು ಛಲ ತೊಟ್ಟಿದ್ದಾರೆ.