ಕಲಾ ಸೇವೆ ಬಿಟ್ಟು ಕಾಂಗ್ರೆಸ್ ಪರಿಚಾರಿಕೆ
ಬೆಂಗಳೂರು:ಕಲಾ ಸೇವೆ ಬಿಟ್ಟು ಕಾಂಗ್ರೆಸ್‌ಗೆ ಪರಿಚಾರಿಕೆ ಮಾಡುತ್ತಿರುವ ನಟ ಪ್ರಕಾಶ್ ರೈ ಅವರ ’ನಿರ್ದಿಗಂತ’ ಸಂಸ್ಥೆಗೆ ರಾಜ್ಯ ಸರ್ಕಾರ 4.20 ಕೋಟಿ ರೂ. ನೀಡಿದೆ ಎಂದು ಜೆಡಿಎಸ್ ಇಂದಿಲ್ಲಿ ಆರೋಪಿಸಿದೆ.
ಸರ್ಕಾರಿ ರಂಗಾಯಣಗಳಿಗೆ ಬಿಡುಗಾಸೂ ನೀಡದ ಸಿದ್ದರಾಮಯ್ಯ ಸರ್ಕಾರ, ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ರೈ ಸಂಸ್ಥೆಗೆ ಅಲ್ಪಾವಧಿಯಲ್ಲೇ ಇಷ್ಟು ದೊಡ್ಡ ಮೊತ್ತ ಬಿಡುಗಡೆ ಮಾಡಿ ತಮ್ಮ ಪಕ್ಷದ ಪರ ಪ್ರಚಾರಕ್ಕೆ ನಟನನ್ನು ಬಳಸಿಕೊಳ್ಳುತ್ತಿದೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಜೆಡಿಎಸ್, ಕಲಾ ಸೇವೆ ಬಿಟ್ಟು ಕಾಂಗ್ರೆಸ್ ಪರಿಚಾರಿಕೆ ಮಾಡುತ್ತಿರುವ ರೈಗೆ ಸರ್ಕಾರ ತಕ್ಕ ಪ್ರತಿಫಲ ನೀಡಿದೆ ಎಂದು ಆರೋಪಿಸಿದೆ.
ಮೊರಾರ್ಜಿ ವಸತಿ ಶಾಲೆಗಳಿಗಷ್ಟೇ ಅಲ್ಲ, ಸರ್ಕಾರಿ ವಸತಿ ನಿಲಯಗಳಿಗೆ ಹಣ ಕೊಡಲೂ ಸರ್ಕಾರಕ್ಕೆ ಕೈಬರುತ್ತಿಲ್ಲ, ಅಲ್ಲಿ ಮಕ್ಕಳಿಗೆ ಒಳ್ಳೆಯ ಆಹಾರವಿಲ್ಲ, ನೀರೂ ಇಲ್ಲ, ರಂಗಾಯಣಗಳಿಗೆ ನೀಡಲು ಬಿಡಿಗಾಸೂ ಇಲ್ಲ, ನೀವು (ರೈ) ಸ್ಥಾಪಿಸಿರುವ ನಿರ್ದಿಗಂತಕ್ಕೆ ಸರ್ಕಾರ ಹಣದ ಹೊಳೆ ಹರಿಸುತ್ತಿರುವುದು ನಿಮ್ಮ ಜೋಳಿಗೆ ಭರ್ತಿ ಮಾಡಲು ಅಲ್ಲವೇ ಪ್ರಕಾಶ್ ಎಂದು ಪ್ರಶ್ನಿಸಿದೆ.
ಕಳ್ಳ ಕಂಪನಿಗೆ ಕೋಟಿ ಕೋಟಿ!
ಗ್ಯಾರಂಟಿಗಳ ವಿಶೇಷ ತೌಲನಿಕ ಅಧ್ಯಯನಕ್ಕಾಗಿ ಪಾಲಿಸಿ ಫ್ರಂಟ್ ಎಂಬ ಮಟ್ಟು – ಪಟ್ಟಿನ ಕಳ್ಳ ಕಂಪನಿಗೆ ಕೋಟಿ..ಕೋಟಿ ಸುರಿದಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರ ನಿಮ್ಮ ನಿರ್ದಿಗಂತಕ್ಕೂ ಹಣ ಸುರಿಯುತ್ತಿದೆ.
ಕನ್ನಡ ಸಂಸ್ಕೃತಿ ಇಲಾಖೆಯಲ್ಲಿ ಕಸ ಹೊಡೆಯುವವರೂ ದಿಕ್ಕಿಲ್ಲ, ಕನ್ನಡ ಭವನದಲ್ಲಿ ಧೂಳು ಕೊಡವುವವರೂ ಗತಿ ಇಲ್ಲ, ಇಲ್ಲಿ ನಿಮ್ಮ ಜೋಳಿಗೆ ಭರ್ತಿ ಝಣ..ಝಣ ಕಾಂಚಾಣ ಹೆಂಗೆ, ಜಸ್ಟ್ ಆಕ್ಟಿಂಗ್ ಅಷ್ಟೇ ಪ್ರಕಾಶ್ ರಾಜ್ ಎಂದು ವ್ಯಂಗ್ಯವಾಡಿದೆ.