ಬೆಂಗಳೂರು:ಬಿಜೆಪಿ ಸಂಸದ ಕರಡಿ ಸಂಗಣ್ಣ ಸೇರಿದಂತೆ ಹಲವು ಮುಖಂಡರು ಕಮಲ ತೊರೆದು ಹಸ್ತ ಹಿಡಿದಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಕರಡಿ ಸಂಗಣ್ಣ ಅಲ್ಲದೆ, ಅರಕಲಗೂಡಿನ ಪುಟ್ಟಸ್ವಾಮಿ, ಮಾಜಿ ಶಾಸಕ ಶಿವಪುತ್ರ ಮಾಳಗಿ, ಕೃಷ್ಣಮೂರ್ತಿ ಹಾಗೂ ಪತ್ರಕರ್ತೆ ಸ್ವಾತಿ ಚಂದ್ರಶೇಖರ್ ಅವರು ಹಸ್ತದ ಕೈಹಿಡಿದರು.
20ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದ್ದೇವೆ
ಇವರ ಸೇರ್ಪಡೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಗ್ಯಾರಂಟಿಗಳನ್ನು ಮುಟ್ಟುವುದು ಬಿಜೆಪಿ-ದಳದ ಹಣೆಯಲ್ಲಿ ಬರೆದಿಲ್ಲ, ಇದಕ್ಕೆ ಪಕ್ಷ ಅವಕಾಶ ಕೊಡುವುದಿಲ್ಲ, ರಾಜ್ಯದಲ್ಲಿ ನಾವು 20ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದ್ದೇವೆ ಎಂದರು.
ಕೇಂದ್ರದಲ್ಲಿ ಎನ್‌ಡಿಎ ಅಧಿಕಾರಕ್ಕೆ ಬಂದರೆ ಗ್ಯಾರಂಟಿಗಳನ್ನು ತೆಗೆದುಹಾಕುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ, ಆದರೆ ಯಡಿಯೂರಪ್ಪ, ಕುಮಾರಸ್ವಾಮಿ, ಅಶೋಕ ಅವರಿಗೆ ಗ್ಯಾರಂಟಿಗಳನ್ನು ಮುಟ್ಟಲು ರಾಜ್ಯದ ಜನ ಅವಕಾಶ ನೀಡುವುದಿಲ್ಲ.
ಕಾಂಗ್ರೆಸ್ ಪಕ್ಷದ ಮೇಲಿನ ಜನರ ಪ್ರೀತಿ ಕಂಡು ಅವರಿಗೆ ಅಸೂಯೆ ಆಗಿದೆ, ಆದ ಕಾರಣ ನಮ್ಮ ತಾಯಂದಿರ ಬಗ್ಗೆ ಮಾತನಾಡುತ್ತಿದ್ದಾರೆ, ತಾಯಂದಿರು ದಾರಿ ತಪ್ಪಿದ್ದಾರೆ ಎಂದು ಹೇಳಿಕೆ ನೀಡಿರುವ ಅವರಿಗೆ ರಾಜ್ಯದ ಜನರೇ ಉತ್ತರ ನೀಡಲಿದ್ದಾರೆ ಎಂದರು.
ಗ್ಯಾರಂಟಿಗಳ ಅಲೆಯಿದೆ
ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಹಾಗೂ ಗ್ಯಾರಂಟಿಗಳ ಅಲೆಯಿದೆ, ಇಡೀ ದೇಶವೇ ಕರ್ನಾಟಕದ ಕಡೆಗೆ ತಿರುಗಿ ನೋಡುತ್ತಿದೆ.
ನಿರುದ್ಯೋಗ, ಬೆಲೆ ಏರಿಕೆ ಸಮಸ್ಯೆಯ ಬಗ್ಗೆ ಜನರು ಚಿಂತನೆ ಮಾಡುತ್ತಿದ್ದಾರೆ, ಧರ್ಮ, ಜಾತಿ ಆಧಾರದ ಮೇಲೆ ನಡೆಯುತ್ತಿರುವ ರಾಜಕಾರಣದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿದೆ, ಪ್ರಧಾನಿ ಮೋದಿ ಅವರು ಸಂವಿಧಾನ ಬದಲಾವಣೆ ಮಾಡುವುದಿಲ್ಲ ಎಂದು ಬಹಿರಂಗವಾಗಿ ಹೇಳಿಕೆ ಕೊಡುತ್ತಿದ್ದಾರೆ.
ಬಿಜೆಪಿಯ ಹಾಲಿ ಸಂಸದರೊಬ್ಬರು 400 ಸ್ಥಾನಗಳನ್ನು ಕೊಡಿ, ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಎರಡು ಮೂರು ಬಾರಿ ಹೇಳಿದರೂ ಅವರನ್ನು ಪಕ್ಷದಿಂದ ಉಚ್ಚಾಟಿಸುವುದಕ್ಕೆ ಬಿಜೆಪಿ ಏಕೆ ಮುಂದಾಗಿಲ್ಲ, ಸಂವಿಧಾನ ಬದಲಾವಣೆ ಹೇಳಿಕೆಯ ನಂತರ ಉತ್ತರ ಭಾರತದಲ್ಲಿ ಜನ ದಂಗೆ ಎದ್ದಿದ್ದಾರೆ, ಆದ ಕಾರಣ ಈಗ ಬದಲಾವಣೆ ಮಾಡುವುದಿಲ್ಲ ಎಂದು ಹೇಳುತ್ತಿದ್ದಾರೆ.
ತೆಲಂಗಾಣ ಮತ್ತು ಕರ್ನಾಟಕದಲ್ಲಿ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದ ಮೇಲೆ ಗ್ಯಾರಂಟಿ ವಿರುದ್ಧ ಮಾತನಾಡುತ್ತಿದ್ದವರು, ಈಗ ಅದರ ಪರವಾಗಿ ಮಾತನಾಡುತ್ತಿದ್ದಾರೆ, ಮೋದಿ ಗ್ಯಾರಂಟಿ ಎಂದು ಕರೆಯುತ್ತಿದ್ದಾರೆ.
ಬಿಜೆಪಿಗೆ ಸೋಲು ಗ್ಯಾರಂಟಿ
ಬಿಜೆಪಿಗೆ ಸೋಲು ಗ್ಯಾರಂಟಿ ಎಂದು ಗೊತ್ತಾದ ಮೇಲೆ ಮೈತ್ರಿ ಮಾಡಿಕೊಂಡಿದ್ದಾರೆ, ಆಂಧ್ರ ಪ್ರದೇಶದಲ್ಲಿ ಸಂಬಂಧವೇ ಇಲ್ಲದ ಚಂದ್ರಬಾಬು ನಾಯ್ಡು ಜೊತೆ ಸೇರಿಕೊಂಡಿದ್ದಾರೆ, ಕರ್ನಾಟಕದಲ್ಲಿ ದಳದೊಟ್ಟಿಗೆ ಸೇರಿಕೊಂಡಿದ್ದಾರೆ.
ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳು ಬಿಜೆಪಿಯನ್ನು ರಾಜ್ಯದಲ್ಲಿ ತೊಳೆದು ಹಾಕುತ್ತಿವೆ, ಬೆಳಗಾವಿಯ ಗಾಂಧಿ ಬಾವಿಯಿಂದ ನೀರನ್ನು ತೆಗೆದು ಕೊಳೆ ತೊಳೆದಂತೆ, ರಾಜ್ಯದ ಜನತೆ ಬಿಜೆಪಿಯನ್ನು ಗುಡಿಸಿ ಹಾಕುತ್ತಾರೆ ಎಂದರು.