ಬೆಂಗಳೂರು:ನನ್ನ ನೇತೃತ್ವದ ಕಾಂಗ್ರೆಸ್ ಸರ್ಕಾರ ಪತನ ಆಗುತ್ತದೆ ಎನ್ನುವುದು ಬರೀ ಭ್ರಮೆ ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಐದು ವರ್ಷ ನನ್ನ ಸರ್ಕಾರ ಸುಭದ್ರವಾಗಿರುತ್ತದೆ ಎಂದಿದ್ದಾರೆ.
ಪ್ರಸಕ್ತ ಅವಧಿಯ ನಂತರ ನಾವೇ ಮತ್ತೆ ಅಧಿಕಾರಕ್ಕೆ ಬರುತ್ತೇವೆ, ಜನರ ದಿಕ್ಕು ತಪ್ಪಿಸುವ ಕೆಲಸ ಬಿಡಿ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕಿವಿಮಾತು ಹೇಳಿದ್ದಾರೆ.
ಬಿರುಸಿನ ಪ್ರಚಾರ ಭಾಷಣ
ರಾಜ್ಯದಲ್ಲಿ ಏಪ್ರಿಲ್ 26 ರಂದು ಮೊದಲ ಹಂತದಲ್ಲಿ ಚುನಾವಣೆ ನಡೆಯುತ್ತಿರುವ ಲೋಕಸಭಾ ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ ಕೈಗೊಂಡಿರುವ ಮುಖ್ಯಮಂತ್ರಿ ಅವರು, ತಮ್ಮ ಪ್ರಚಾರ ಭಾಷಣದಲ್ಲಿ ಮೋದಿ ಹಾಗೂ ದೇವೇಗೌಡರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮೋದಿ ಪ್ರಧಾನಿ ಆದರೆ ದೇಶ ಬಿಟ್ಟು ಹೋಗುತ್ತೇನೆ ಎಂದಿದ್ದ ಗೌಡರು, ಈಗ ಅದೇ ಮೋದಿಯನ್ನು ಅಪ್ಪಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.
ಈ ಬಿಜೆಪಿ-ಜೆಡಿಎಸ್‌ಗೆ ಮತ ಕೇಳುವ ನೈತಿಕತೆಯೇ ಇಲ್ಲ, ಕೇವಲ ಪೊಳ್ಳು ಭರವಸೆಗಳನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಭರವಸೆ ಈಡೇರಿಸದ ಪ್ರಧಾನಿ
ಜನತೆಗೆ ನೀಡಿರುವ ಯಾವುದೇ ಒಂದು ಭರವಸೆಯನ್ನು ಕಳೆದ 10 ವರ್ಷಗಳಲ್ಲಿ ಈಡೇರಿಸದ ಪ್ರಧಾನಿ ಅವರಿಗೆ ಮತ್ತೆ ಅಧಿಕಾರ ಕೊಡುತ್ತೀರಾ ಎಂದು ಪ್ರಶ್ನಿಸಿದ್ದಾರೆ.
ಭ್ರಷ್ಟಾಚಾರ ನಿಗ್ರಹದ ಬಗ್ಗೆ ಮಾತನಾಡುವ ಪ್ರಧಾನಿ ಅವರು, ಕೋವಿಡ್ ಸಮಯದಲ್ಲಿ ಕೋಟಿ, ಕೋಟಿ ಲೂಟಿ ಮಾಡಿ ಜೈಲಿನಲ್ಲಿರಬೇಕಾದ ಡಾ.ಸುಧಾಕರ್ ಪರ ಮತ ಯಾಚನೆ ಮಾಡಲು ಬರುತ್ತಿರುವುದಕ್ಕೆ ವ್ಯಂಗ್ಯವಾಡಿದ್ದಾರೆ.
’ಈ ಚುನಾವಣೆಯ ನಂತರ ಸುಧಾಕರ್ ಜೈಲಿನಲ್ಲಿರುತ್ತಾನೆ, ಅಂತಹವನ ಪರ ನೀವು ಹೇಗೆ ಪ್ರಚಾರ ಮಾಡುತ್ತೀರಿ’ ಎಂದು ಪ್ರಧಾನಿ ಅವರನ್ನು ಪ್ರಶ್ನಿಸಿದ್ದಾರೆ.
ನೀವು ವಿಧಾನಸಭಾ ಚುನಾವಣೆ ವೇಳೇ ಎಲ್ಲೆಲ್ಲಿ ಪ್ರಚಾರ ಕೈಗೊಂಡಿರೋ ಅಲ್ಲೆಲ್ಲಾ ನಿಮ್ಮ ಅಭ್ಯರ್ಥಿಗಳು ಸೋತಿದ್ದಾರೆ. ಅದೇ ರೀತಿ ಲೋಕಸಭಾ ಚುನಾವಣೆಯಲ್ಲೂ ಫಲಿತಾಂಶ ಬರಲಿದೆ ಎಂದರು.
ರಾಷ್ಟ್ರದ ರೈತರ ಕೃಷಿ ಸಾಲ ಮನ್ನಾ
ಸೋನಿಯಾ ಗಾಂಧಿ ಮಾರ್ಗದರ್ಶನದಲ್ಲಿ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರ ಹಿಡಿದರೆ ಇಡೀ ರಾಷ್ಟ್ರದ ರೈತರ ಕೃಷಿ ಸಾಲ ಮನ್ನಾ ಮಾಡುವುದಲ್ಲದೆ, ವಿದ್ಯಾವಂತ ನಿರುದ್ಯೋಗಿ ಯುವಜನರಿಗೆ ವಾರ್ಷಿಕ ಒಂದು ಲಕ್ಷ ರೂ. ಭತ್ಯೆ ನೀಡುತ್ತೇವೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾವು ನೀಡಿದ ಐದು ಗ್ಯಾರಂಟಿ ಭರವಸೆಗಳನ್ನು ಅಧಿಕಾರಕ್ಕೆ ಬಂದ ನಂತರ ಈಡೇರಿಸಿದ್ದೇವೆ.
ನಮ್ಮ ಮೇಲೆ ರಾಜ್ಯದ ಜನರು ವಿಶ್ವಾಸ ಮತ್ತು ನಂಬಿಕೆ ಇಟ್ಟಿದ್ದಾರೆ, ನಮ್ಮ ಗ್ಯಾರಂಟಿಗಳ ಮಾರ್ಗದಲ್ಲೇ ರಾಷ್ಟ್ರೀಯ ಚುನಾವಣೆಯಲ್ಲೂ ಪಕ್ಷ ಪಂಚ ಭರವಸೆಗಳನ್ನು ನೀಡಿದೆ.
ಕೇಂದ್ರದಲ್ಲಿ ನಾವು ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಅನುಷ್ಟಾನದ ಮಾದರಿಯಲ್ಲೇ ರೈತರು, ನಿರುದ್ಯೋಗಿಗಳು, ಸಾಮಾನ್ಯ ಜನರಿಗೆ ನೇರವಾಗಿ ದಕ್ಕಬಹುದಾದ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.
ಯೋಜನೆಗಳ ಜಾರಿ
ಕಳೆದ 10 ವರ್ಷಗಳಲ್ಲಿ ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ರಾಷ್ಟ್ರದ ಆರ್ಥಿಕ ನೀತಿಯನ್ನು ಬುಡಮೇಲು ಮಾಡಿದೆ, ಇದನ್ನು ಸರಿಪಡಿಸುವ ಜೊತೆಗೆ ರೈತರು, ಬಡವರು, ಯಾರ ಹಂಗಿಲ್ಲದಂತೆ ಬದುಕಲು ನಮ್ಮ ಸರ್ಕಾರ ಯೋಜನೆಗಳನ್ನು ಜಾರಿಗೆ ತರಲಿದೆ.
ಈ ಹಿಂದೆ ಮನಮೋಹನ್ ಸಿಂಗ್ ಆಡಳಿತದಲ್ಲಿ ರೈತರ ಸಾಲ ಮನ್ನಾ ಮಾಡಲಾಗಿತ್ತು, ಈಗ ಮತ್ತೆ ನಾವು ಅಧಿಕಾರಕ್ಕೆ ಬಂದರೆ, ಎಲ್ಲಾ ತೆರನಾದ ಕೃಷಿ ಸಾಲ ಮನ್ನಾ ಮಾಡುತ್ತೇವೆ.
ನೀವು ನಮ್ಮ ಗ್ಯಾರಂಟಿ ಮೇಲೆ ಯಾವ ನಂಬಿಕೆ ಇಟ್ಟು ಮತ ನೀಡಿದಿರೋ, ಅದೇ ರೀತಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಸಿ, ಕೇಂದ್ರದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದ ದಿನವೇ ಈ ಮಹತ್ತರ ಕಾರ್ಯಕ್ರಮಗಳು ಜಾರಿಗೆ ಬರಲಿವೆ.
ದಿನ ಬೆಳಗಾದರೆ, ಮಾತಿನಲ್ಲೇ ಮನೆ ಕಟ್ಟಿ ಮೋಡಿ ಹಾಕುವವರಿಗೆ ಮತ್ತೆ ಅವಕಾಶ ನೀಡಬೇಡಿ, ನಿಮ್ಮ ಬದುಕು ಹಸನಾಗಬೇಕಾದರೆ ನಮ್ಮನ್ನು ಬೆಂಬಲಿಸಿ ಎಂದಿದ್ದಾರೆ.
ಇದುವರೆಗೂ ಗ್ಯಾರಂಟಿಗಳ ಬಗ್ಗೆಯೇ ಹೆಚ್ಚು ಪ್ರಚಾರ ಕೊಡುತ್ತಿದ್ದ ಮುಖ್ಯಮಂತ್ರಿ ಅವರು, ರಾಹುಲ್ ಗಾಂಧಿ ರಾಜ್ಯ ಪ್ರವಾಸದಿಂದ ಹಿಂತಿರುಗಿದ ನಂತರ ಹೊಸ ಕಾರ್ಯಕ್ರಮಗಳನ್ನು ಜನರ ಮುಂದಿಡುತ್ತಿದ್ದಾರೆ.
ಮಹಿಳೆಯರ ಬ್ಯಾಂಕ್ ಖಾತೆಗೆ ಒಂದು ಲಕ್ಷ ರೂ.
ರೈತರು, ನಿರುದ್ಯೋಗಿಗಳಷ್ಟೇ ಅಲ್ಲ, ಪ್ರತೀ ಅರ್ಹ ಕುಟುಂಬದ ಮಹಿಳೆಯರ ಬ್ಯಾಂಕ್ ಖಾತೆಗೆ ವರ್ಷಕ್ಕೆ ಒಂದು ಲಕ್ಷ ರೂಪಾಯಿ ಜಮೆ ಆಗಲಿದೆ.
ರಾಜ್ಯ ಸರ್ಕಾರ ಈಗ ಕೊಡುತ್ತಿರುವ ಮಾಸಿಕ 2 ಸಾವಿರ ರೂ. ಜೊತೆಗೆ ಕೇಂದ್ರದ ಒಂದು ಲಕ್ಷ ರೂ. ಸೇರಿ ಒಟ್ಟು ಒಂದು ಲಕ್ಷದ 24 ಸಾವಿರ ರೂ. ಪ್ರತಿ ಕುಟುಂಬದ ಯಜಮಾನಿ ಖಾತೆಗೆ ಬರುತ್ತದೆ.
ಈ ಬಾರಿ ಕೇಂದ್ರದಲ್ಲೂ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬರುವುದಿಲ್ಲ, ಐಎನ್‌ಡಿಐಎ ಅಧಿಕಾರಕ್ಕೆ ಬರಲಿದೆ ಎಂದರು.