ಬೆಂಗಳೂರು:ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಹಿಂದೂಗಳನ್ನು ದಮನ ಮಾಡಲಾಗುತ್ತಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಇಂದಿಲ್ಲಿ ಕಿಡಿಕಾರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿಪ್ಪು ಸಿದ್ಧಾಂತ ಇರುವ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಮೂಲಭೂತವಾದಿ ಇಸ್ಲಾಮಿಕ್ ಸಂಘಟನೆಗಳು, ಅದರ ಕಾರ್ಯಕರ್ತರು, ಪಾಕಿಸ್ತಾನ್ ಬೆಂಬಲಿತ ಗೂಡಾಗಳಿಂದ ಹಿಂದೂಗಳ ಮೇಲೆ ನಿರಂತರವಾಗಿ ಹಲ್ಲೆ, ಅವಹೇಳನ, ಧಮ್ಕಿ, ಭಯೋತ್ಪದನಾ ಚಟುವಟಿಕೆಗಳು ನಡೆಯುತ್ತಿವೆ ಎಂದರು.
ಧಮ್ಕಿ, ಕೊಲೆ ಬೆದರಿಕೆ
“ಜೈ ಶ್ರೀರಾಮ್” ಎಂದು ಕೂಗಿದ್ದನ್ನು ಆಕ್ಷೇಪಿಸಿ ಮುಸ್ಲಿಂ ಗೂಂಡಾಗಳು ಹಲ್ಲೆ ನಡೆಸಿ “ಅಲ್ಲಾ ಹೋ ಅಕ್ಬರ್” ಕೂಗಬೇಕು ಎಂದು ಧಮ್ಕಿ ಹಾಕಿ, ಕೊಲೆ ಬೆದರಿಕೆ ಹಾಕಿದ್ದಾರೆ, ಇದರಿಂದ ನಾವು ಹಿಂದೂಸ್ತಾನದಲ್ಲಿ ಇದ್ದೇವಾ ಅಥವಾ ಪಾಕಿಸ್ತಾನದಲ್ಲಿ ಇದ್ದೇವಾ ಎಂಬ ಸಂದೇಹ ಕಾಡುವಂತಾಗಿದೆ ಎಂದರು.
ಸಿದ್ದರಾಮಯ್ಯ ಅವರು ಇಸ್ಲಾಮಿಕ್ ಮೂಲಭೂತವಾದಿಗಳಿಗೆ ಕರ್ನಾಟಕವನ್ನು ಧಾರೆ ಎರೆದು ಕೊಟ್ಟಿದ್ದಾರಾ ಎಂಬ ಭೀತಿ ವ್ಯಕ್ತಪಡಿಸಿದ ಅವರು, ಲಕ್ಷ್ಮಣ ಸವದಿ ಅವರು ಸಾರ್ವಜನಿಕ ಸಭೆಯಲ್ಲಿ ಕೈಮುಗಿದು ವಿನಮ್ರವಾಗಿ ‘ನಾನು ಭಾರತ್ ಮಾತಾ ಕೀ ಜೈ ಅನ್ನಬಹುದೇ ಖರ್ಗೆ ಸಾಹೇಬರೇ’ ಎಂದು ಕೇಳಿದ್ದಾರೆ, ಖರ್ಗೆ ಅವರು ಅನುಮತಿ ಕೊಟ್ಟಿದ್ದಾರೆ.
ಡಿ.ಕೆ.ಸುರೇಶ್ ಅವರು, ರಾಮ ದೇವರಲ್ಲ, ನಾವು ಮನೆಯಲ್ಲಿ ಅವರ ಫೋಟೊ ಇಟ್ಟಿಲ್ಲ ಎನ್ನುತ್ತಾರೆ, ಸುರೇಶ್ ಅವರೇ, ನೀವು ಕಲ್ಲುಬಂಡೆ ವ್ಯಾಪಾರ ಮಾಡುವವರಲ್ಲವೇ ಕಲ್ಲು ಬಂಡೆ ಇಟ್ಟುಕೊಳ್ಳಿ, ರಾಮನ ಫೋಟೊ ಯಾಕೆ ಇಡಬೇಕು ಎಂದರು.
ಇಡೀ ದೇಶದಲ್ಲಿ ರಾಮಭಕ್ತ ಆಂಜನೇಯನ ದೇವಸ್ಥಾನಗಳಿವೆ, ಇದು ನಿಮ್ಮ ಕಣ್ಣಿಗೆ ಕಾಣಿಸುವುದಿಲ್ಲವೇ ಎಂದು ಪ್ರಶ್ನಿಸಿದರು.
ಹಿಂದೂ ಕಾರ್ಯಕರ್ತರ ವಿರುದ್ಧ ಕೇಸ್
ಹಿಂದೂಗಳನ್ನು ಬೈದು..,ಬೈದು ರಾಜ್ಯದಲ್ಲಿ ಮುಸ್ಲಿಂ ಭಯೋತ್ಪಾದನಾ ಚಟುವಟಿಕೆಗಳು ಜಾಸ್ತಿಯಾಗಿವೆ, ಶ್ರೀರಾಮ ಮಂದಿರಕ್ಕೆ ಹೋಗುವ ಹಿಂದೂ ಕಾರ್ಯಕರ್ತರ ವಿರುದ್ಧ ಕೇಸು ದಾಖಲಿಸಲಾಗುತ್ತಿದೆ, ಮಂಡ್ಯದಲ್ಲಿ ಹಾರಾಡುತ್ತಿದ್ದ ಹನುಮಧ್ವಜ ಕಿತ್ತು ಹಾಕಿದ್ದೀರಿ, ಸಿದ್ದರಾಮಯ್ಯ ಸರ್ಕಾರ ಬಂದ ನಂತರ ಕರ್ನಾಟಕದಲ್ಲಿ ಹಿಂದೂಗಳು ಭಯದಿಂದ ಬದುಕುವಂಥ ವಾತಾವರಣ ನಿರ್ಮಾಣವಾಗಿದೆ.
ಕಾಂಗ್ರೆಸ್ ಸರ್ಕಾರ ಪರೋಕ್ಷವಾಗಿ ಗೂಂಡಾಗಿರಿಗೆ ಬೆಂಬಲ ಕೊಡುತ್ತಿದೆ, ಮತ ಹಾಕಿದರೆ ಅವರನ್ನು ರಕ್ಷಿಸುವ ಸಂದೇಶವನ್ನೂ ಮೂಲಭೂತವಾದಿಗಳಿಗೆ ಕಾಂಗ್ರೆಸ್ ಪಕ್ಷ ನೀಡಿದೆ ಎಂದು ಟೀಕಿಸಿದರು.
ಜೈಶ್ರೀರಾಮ್ ಘೋಷಣೆ ಕೂಗಿದವರ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಸಿದ್ದರಾಮಯ್ಯ ಗೂಂಡಾ ಕಾಯ್ದೆ, ದೇಶ ದ್ರೋಹದ ಕೇಸು ಹಾಕಿದ್ದಾರಾ, ಅರೆಸ್ಟ್ ಮಾಡಿದ್ದೀರಿ, ಬಿರಿಯಾನಿ ಕೊಟ್ಟು ಕಳಿಸುತ್ತೀರಿ ಎಂದು ಆಕ್ಷೇಪಿಸಿದರು.
ಅಲ್ಪಸಂಖ್ಯಾತ ಮೂಲಭೂತವಾದಿಗಳಿಗೆ ಹುರುಪು
ನಮ್ಮ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟ, ಆದರೆ, ಉಪಮುಖ್ಯಮಂತ್ರಿ ಅವರ ಸಹೋದರ, ದೇಶ ಇಬ್ಭಾಗ ಮಾಡಬೇಕು ಎನ್ನುತ್ತಾರೆ, ಈ ಥರಹದ ಹೇಳಿಕೆಗಳಿಂದ ಅಲ್ಪಸಂಖ್ಯಾತ ಮೂಲಭೂತವಾದಿಗಳಿಗೆ ಹುರುಪು ಬಂದಿದೆ.
ಕಾಂಗ್ರೆಸ್ಸಿನವರು ಫಿಟ್ಟಿಂಗ್ ಮಾಸ್ಟರ್‌ಗಳು, ರಾಮೇಶ್ವರಂ ಕೆಫೆ ಬಾಂಬ್ ಹೊಗೆ ಏಳುತ್ತಿರುವಾಗಲೇ ಅದು ಹೋಟೆಲ್ ರೈವಲ್ರಿ ಎಂದಿದ್ದರು.
ಇಂಥ ಘಟನೆಗಳಿಗೆ ಕಾರಣವಾದ ಈ ಸರ್ಕಾರ ಬಹಳ ದಿನ ಉಳಿಯುವುದಿಲ್ಲ, ಇದು ಮೂಲಭೂತವಾದಿಗಳಿಗೆ ಬೆಂಬಲ ಕೊಡುವ ಸರ್ಕಾರ ಎಂದು ಬ್ರ್ಯಾಂಡ್ ಆಗಿದೆ, ಇದು ಜನರಿಗೂ ಗೊತ್ತಾಗಿದೆ, ಲೋಕಸಭಾ ಚುನಾವಣೆಯಲ್ಲಿ ಜನರು ಇವರಿಗೆ ಪಾಠ ಕಲಿಸುತ್ತಾರೆ.
ಹಿಂದೂಗಳ ರಕ್ಷಣೆ ಬಗ್ಗೆ ಆತಂಕ ಉಂಟಾಗಿದೆ, ದರಿದ್ರ ಸರ್ಕಾರ ಇದು, ನಯಾಪೈಸೆ ಹಣ ಇಲ್ಲ, ಮೇ-ಜೂನ್ ನಂತರ ಸಂಬಳ ಕೊಡಲು ದುಡ್ಡಿಲ್ಲ ಎಂಬ ಸ್ಥಿತಿ ಬಂದಿದೆ, ಪಿಂಚಣಿ, ಸ್ಕಾಲರ್‌ಶಿಪ್ ಕೊಟ್ಟಿಲ್ಲ.
ಕರ್ನಾಟಕದ ಶಾಂತಿಯ ತೋಟವನ್ನು ಮತಕ್ಕಾಗಿ ಹಾಳು ಮಾಡುತ್ತಿದ್ದಾರೆ, ಇದರ ವಿರುದ್ಧ ಹೋರಾಟ ಮುಂದುವರಿಸಲಿದ್ದೇವೆ ಎಂದು ಎಚ್ಚರಿಸಿದರು.