ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಆರೋಪ ಪಟ್ಟಿ
ಬೆಂಗಳೂರು:ಹಿಂದೂಗಳ ಮೇಲೆ ದ್ವೇಷದ ರಾಜಕಾರಣ ಮಾಡುವ ಕಾಂಗ್ರೆಸ್ ಸರ್ಕಾರ ವರ್ಗಾವಣೆಯನ್ನು ದಂಧೆಯಾಗಿಸಿಕೊಂಡು ಕೋಟಿ ಕೋಟಿ ಹಣ ಲೂಟಿ ಮಾಡುತ್ತಿದೆ ಎಂದು ಬಿಜೆಪಿ ಇಂದಿಲ್ಲಿ ಆರೋಪಿಸಿದೆ.
ರಾಜ್ಯಕ್ಕೆ ಕೇಂದ್ರ ಚೊಂಬು ನೀಡಿದೆ ಎಂಬ ಕಾಂಗ್ರೆಸ್ ಜಾಹೀರಾತು ಬೆನ್ನಲ್ಲೇ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಇಂದಿಲ್ಲಿ ಆರೋಪ ಪಟ್ಟಿಯನ್ನೇ ಬಿಡುಗಡೆ ಮಾಡಿದೆ.
ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್, ಆರೋಪ ಪಟ್ಟಿಯನ್ನು ಬಿಡುಗಡೆ ಮಾಡಿ, ಕಾಂಗ್ರೆಸ್ ಸರ್ಕಾರಕ್ಕೆ ಪೂರ್ಣ ಪ್ರಮಾಣದಲ್ಲಿ ಬಹುಮತ ಬಂದರೂ ಸಮರ್ಪಕವಾದ ಆಡಳಿತ ನೀಡುವಲ್ಲಿ ವಿಫಲವಾಗಿದೆ ಎಂದರು.
ಅಲ್ಪಸಂಖ್ಯಾತರ ಓಲೈಕೆ
ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣಕ್ಕೆ ಒತ್ತುಕೊಟ್ಟಿದೆ.
ಪಿಎಫ್‌ಐ ಮತ್ತು ಕೆಎಫ್‌ಡಿಗಳ ಮೇಲಿನ ಆರೋಪ ಪ್ರಕರಣಗಳನ್ನು ಹಿಂದಕ್ಕೆ ಪಡೆದು, ಇಂದು ಅಪರಾಧಿಗಳಲ್ಲೂ ಧರ್ಮ ಹುಡುಕುವ ಹುನ್ನಾರ ಮಾಡುತ್ತಿದೆ.
ಕುಕ್ಕರ್ ಬಾಂಬ್ ಆರೋಪಿಗೆ ತನಿಖೆಗೂ ಮೊದಲೇ ಕ್ಲೀನ್‌ಚಿಟ್ ನೀಡಿದೆ, ಇವರ ಓಲೈಕೆ ರಾಜಕಾರಣದಿಂದ ಕಾಂಗ್ರೆಸ್ ಆಡಳಿತದಲ್ಲಿ ಅಪರಾಧಗಳ ಪ್ರಮಾಣ 40% ಹೆಚ್ಚಿದೆ ಎಂದರು.
ಇವರು ಅಧಿಕಾರಕ್ಕೆ ಬಂದ ನಂತರ ಇಡೀ ರಾಜ್ಯದಲ್ಲಿ ಭಯೋತ್ಪಾದನೆ ಮತ್ತು ದೇಶ ದ್ರೋಹಿ ಚಟುವಟಿಕೆಗಳು ಹೆಚ್ಚಿವೆ.
ಪಾಕ್ ಪರ ಘೋಷಣೆ
ಬಾಂಬ್ ಸ್ಫೋಟ ಪ್ರಕರಣಗಳು ಹೆಚ್ಚಿವೆ, ಆಡಳಿತಸೌಧದಲ್ಲೇ ಪಾಕ್ ಪರ ಘೋಷಣೆ ಕೂಗುತ್ತಾರೆ, ಕಳೆದ ಒಂದು ವರ್ಷದಲ್ಲಿ 176 ಅತ್ಯಾಚಾರ, 1,135 ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ ಎಂದು ತಮ್ಮ ಆರೋಪ ಪಟ್ಟಿಯಲ್ಲಿ ಬಿಜೆಪಿ ತಿಳಿಸಿದೆ.
ಕೇಂದ್ರವನ್ನು ದೂರುವ ಭರದಲ್ಲಿ ರಾಜ್ಯದ ನೆಲ-ಜಲವನ್ನು ಸಂಪೂರ್ಣವಾಗಿ ಈ ಸರ್ಕಾರ ಮರೆತಿದೆ.
ತಮಿಳುನಾಡಿನ ಓಲೈಕೆಗೆ ಕಾವೇರಿ ನೀರು ಹರಿಸಿ ನಾಡಿನ ಜನಕ್ಕೆ ದ್ರೋಹ ಎಸಗಿದ ಕಾಂಗ್ರೆಸ್ ಸರ್ಕಾರ, ಕೃಷ್ಣಾ ಮೇಲ್ದಂಡೆ ಯೋಜನೆ, ಘಟಪ್ರಭಾ, ಮಲಪ್ರಭಾ ಕಾಲುವೆ ಆಧುನೀಕರಣಕ್ಕೆ ಅನುದಾನವನ್ನೇ ನೀಡದೆ, ರೈತರನ್ನು ಬಸವಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅನ್ನಭಾಗ್ಯ, ಹೊಸಬೆಳಕು, ಅನಿಲ ಭಾಗ್ಯ ಸೇರಿದಂತೆ ಹಲವು ಯೋಜನೆಗಳನ್ನು ನಮ್ಮದೇ ಎಂದು ಸಿದ್ದರಾಮಯ್ಯ ಸರ್ಕಾರ ಬಿಂಬಿಸಿಕೊಳ್ಳುತ್ತಿದೆ.
ಮಿತಿ ಮೀರಿದ ಹಸ್ತಕ್ಷೇಪ
ಅಧಿಕಾರಕ್ಕೆ ಬಂದ ಆರು ತಿಂಗಳೊಳಗಾಗಿ ಆರೋಪದ ಸುಳಿಗೆ ಸಿಲುಕಿದ ಸರ್ಕಾರ, ಮಂತ್ರಿಗಳು ಮತ್ತು ಅವರ ಕುಟುಂಬದವರ ಮಿತಿ ಮೀರಿದ ಹಸ್ತಕ್ಷೇಪ, ಕಾಮಗಾರಿ ಮಂಜೂರಾತಿಗೂ ಲಂಚ, ಕಾಮಗಾರಿ ಮುಗಿದ ನಂತರ ಬಿಲ್ ಪಾವತಿಸುವಾಗಲೂ ಲಂಚ, ಒಟ್ಟಾರೆ ಈ ಸರ್ಕಾರ 50% ಕಮಿಷನ್ ಸರ್ಕಾರ.
ಬರ ನಿರ್ವಹಣೆ ವೈಫಲ್ಯದಿಂದ ಕಳೆದ ಆರು ತಿಂಗಳಲ್ಲಿ 700 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿದ್ದಾರೆ.
ರಾಜ್ಯದ ಜನರಿಗೆ ಗ್ಯಾರಂಟಿಗಳನ್ನು ನೀಡಿದ ಕಾಂಗ್ರೆಸ್ ಸರ್ಕಾರ ಅದರ ಹಣ ಭರಿಸಲು ಸಾಮಾನ್ಯ ಜನರ ಮೇಲೆ ಪರೋಕ್ಷ ತೆರಿಗೆಗಳನ್ನು ವಿಧಿಸಿದೆ.
ಅಬಕಾರಿ, ಕಂದಾಯ ಹಾಗೂ ಮುದ್ರಾಂಕ ಶುಲ್ಕ ಹೆಚ್ಚಳದಿಂದ ಕೋಟ್ಯಂತರ ರೂ. ಸಂಗ್ರಹ ಮಾಡಿ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ ಎಂದರು.
ಜಿಹಾದಿ ಕರ್ನಾಟಕ ಸೃಷ್ಟಿ
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಂದ ನಂತರ ಜಿಹಾದಿ ಕರ್ನಾಟಕ ಸೃಷ್ಟಿಯಾಗಿದೆ, ಹಿಂದೂಗಳ ರಕ್ತಕ್ಕೆ ಬೆಲೆಯೇ ಇಲ್ಲವಾಗಿದೆ.
ಹುಬ್ಬಳ್ಳಿ ಘಟನೆಯನ್ನು ಲವ್ ಪ್ರಕರಣ, ಕುಟುಂಬದ ಸಮಸ್ಯೆ ಎನ್ನುವ ಕಾಂಗ್ರೆಸ್ ನಾಯಕರಿಗೆ ನಾಚಿಕೆಯಾಗಬೇಕು, ಇದು ಲವ್ ಜಿಹಾದ್ ಎಂದು ಕಾಂಗ್ರೆಸ್ ಕಾರ್ಪೊರೇಟರ್ ಹಾಗೂ ಯುವತಿಯ ತಂದೆ ಹೇಳುತ್ತಿದ್ದಾರೆ.
ಇದು ಚುನಾವಣೆ ವಿಷಯವಾದರೆ ಕಾಂಗ್ರೆಸ್ ಮುಖಕ್ಕೆ ಮಂಗಳಾರತಿಯಾಗಲಿದೆ ಎಂಬ ಕಾರಣಕ್ಕೆ ಸಿದ್ದರಾಮಯ್ಯನವರೇ ಈ ರೀತಿ ಮಾತಾಡುತ್ತಿದ್ದಾರೆ.
ಲವ್ ಜಿಹಾದ್ ಮಾಡುವವರಿಗೆ ಪಾಸ್‌ಪೋರ್ಟ್, ಕೊಲೆ, ಗಲಭೆ ಮಾಡುವವರಿಗೆ ವೀಸಾ ನೀಡಲಾಗಿದೆ. ಬೆಳಗಾವಿಯಲ್ಲಿ ದಲಿತ ಮಹಿಳೆಯನ್ನು ಬೆತ್ತಲೆ ಮಾಡಿದ್ದಕ್ಕೆ ಆ ಪ್ರಕರಣವನ್ನೇ ಮುಚ್ಚಿಹಾಕುವ ಪ್ರಯತ್ನ ನಡೆದಿತ್ತು.
ಪೊಲೀಸರು ಏನೂ ಮಾಡಲಿಲ್ಲ
ಶಿವಮೊಗ್ಗದಲ್ಲಿ ಕೋಮು ಗಲಭೆ ನಡೆದಾಗ ಪೊಲೀಸರು ಏನೂ ಮಾಡಲಿಲ್ಲ, ಬಾಂಬ್ ಸ್ಫೋಟವನ್ನು ಸಚಿವರೇ ವ್ಯಾಪಾರದ ವ್ಯಾಜ್ಯ ಎಂದರು.
ರಾಮೋತ್ಸವದಲ್ಲಿ ಜೈ ಶ್ರೀರಾಮ್ ಎಂದಾಗ ಮುಸ್ಲಿಮರು ಹಲ್ಲೆ ಮಾಡಿದ್ದರು, ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಮುಸ್ಲಿಮರು ಥಳಿಸಿದ್ದಾರೆ. ಗದಗದಲ್ಲಿ ಒಂದೇ ಕುಟುಂಬದ ನಾಲ್ವರ ಕೊಲೆಯಾಗಿದೆ.
ಕುಣಿಗಲ್‌ನಲ್ಲಿ ಬಿಜೆಪಿ ಬೆಂಬಲಿಗನ ತೋಟಕ್ಕೆ ಬೆಂಕಿ ಹಚ್ಚಲಾಗಿದೆ. ಚಿತ್ರನಟಿ ಮೇಲೆ ಹಲ್ಲೆ ಮಾಡಲಾಗಿದೆ. ಕೋಲಾರದಲ್ಲಿ ಶ್ರೀರಾಮನ ಫ್ಲೆಕ್ಸ್ ಕಿತ್ತುಹಾಕುವ ಕೆಲಸ ನಡೆದಿದೆ. ಇಷ್ಟಾದರೂ ಸಿದ್ದರಾಮಯ್ಯ ಏನೂ ಕ್ರಮ ಕೈಗೊಳ್ಳದಿರುವುದು ಓಲೈಕೆ ರಾಜಕಾರಣ ಪರಾಕಾಷ್ಠೆಗೆ ತಲುಪಿದೆ ಎಂದು ದೂರಿದರು.
ಜನರಿಗೆ ಒಂದು ಚೊಂಬು ನೀರೂ ನೀಡಿಲ್ಲ
ಕೃಷ್ಣೆಯ ಕಣ್ಣೀರು ಒರೆಸಲು 50 ಸಾವಿರ ಕೋಟಿ ರೂ. ಎಂದು ಹೇಳಿ 5 ರೂಪಾಯಿಯನ್ನೂ ನೀಡಿಲ್ಲ. ಭೂಮಿ, ಆಕಾಶ, ಪತ್ರಿಕಾ ರಂಗದಲ್ಲೂ ಕಾಂಗ್ರೆಸ್ ಲೂಟಿ ಮಾಡಿದೆ. ಜನರಿಗೆ ಒಂದು ಚೊಂಬು ನೀರು ಕೂಡ ನೀಡಿಲ್ಲ ಎಂದರು.
ಈ ಬಾರಿಯ ಕರ್ನಾಟಕದ ಜಿಡಿಪಿ ದೇಶದ ಜಿಡಿಪಿಗಿಂತ ಕಡಿಮೆಯಾಗಿದೆ, ರಾಜ್ಯದ ಆರ್ಥಿಕಸ್ಥಿತಿ ಬಗ್ಗೆ ಬಜೆಟ್‌ನಲ್ಲಿ ತಿಳಿಸಿಲ್ಲ, ಈ ಬಾರಿಯ ಆದಾಯ ತೀವ್ರ ಇಳಿಕೆಯಾಗಿದೆ, ಅಭಿವೃದ್ಧಿ ಕಾರ್ಯಗಳು ಇಲ್ಲವಾಗಿರುವುದರಿಂದ ಜಿಡಿಪಿ ಬೆಳೆಯುವುದಿಲ್ಲ ಎಂದರು.