ಬೆಂಗಳೂರು:ಕಾನೂನು-ಸುವ್ಯವಸ್ಥೆ ನೆಪದಲ್ಲಿ ಕರ್ನಾಟಕದ ಮೇಲೆ ರಾಷ್ಟ್ರಪತಿ ಆಡಳಿತ ಹೇರಲು ಹುನ್ನಾರ ನಡೆದಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆಯಲ್ಲಿನ ವಿರೋಧ ಪಕ್ಷದ ನಾಯಕ ಆರ್. ಅಶೋಕ ಮತ್ತು ಬಿಜೆಪಿಯವರು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ನಾಟಕ ಆಡುತ್ತಿದ್ದು, ರಾಜ್ಯ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಕಾನೂನು-ಸುವ್ಯವಸ್ಥೆ ಸರಿಯಾಗಿದೆ
ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಸರಿಯಾಗಿದೆ, ನಮ್ಮ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿ ಇದ್ದಷ್ಟು ಈ ದೇಶದ ಯಾವ ರಾಜ್ಯದಲ್ಲೂ ಇಲ್ಲ.
ಹುಬ್ಬಳ್ಳಿ ಕೊಲೆ ಪ್ರಕರಣ ಮುಂದಿಟ್ಟುಕೊಂಡು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಇದೇ ಕಾರಣ ಎನ್ನುತ್ತಿದ್ದಾರೆ, ಘಟನೆ ಸಂಬಂಧ ನಿಷ್ಪಕ್ಷಪಾತ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು.
ಕರ್ನಾಟಕ ಬಿಹಾರ ಆಗುತ್ತದೆ ಎಂಬ ಹೇಳಿಕೆಗೆ ಸಂಬಂಧಿಸಿದಂತೆ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಡಳಿತಾವಧಿಯಲ್ಲೂ ರಾಜ್ಯದಲ್ಲಿ ಅನೇಕ ದುಷ್ಕೃತ್ಯಗಳು ನಡೆದಿದ್ದವು, ವೈಯಕ್ತಿಕ ಕಾರಣಗಳಿಗೆ ಇಂತಹ ಘಟನೆಗಳು ನಡೆಯುತ್ತಿರುತ್ತವೆ, ರಾಜ್ಯದ ಕಾನೂನು-ಸುವ್ಯವಸ್ಥೆ ಹದಗೆಟ್ಟಿಲ್ಲ, ಪೊಲೀಸರ ಕಾರ್ಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದರು.
ಬಿಜೆಪಿಯಲ್ಲಿ ಭವಿಷ್ಯವಿಲ್ಲ
ಮಾಲೀಕಯ್ಯಾ ಗುತ್ತೇದಾರ್ ಬಹಳ ವರ್ಷಗಳಿಂದ ನಮ್ಮ ಜೊತೆಗಿದ್ದವರು, ಕಾರಣಾಂತರಗಳಿಂದ ಬಿಜೆಪಿ ಸೇರಿದ್ದರು, ಅಲ್ಲಿ ರಾಜಕೀಯ ಭವಿಷ್ಯವಿಲ್ಲ ಎಂಬ ಅರಿವಾಗಿ ಮತ್ತೆ ಕಾಂಗ್ರೆಸ್‌ಗೆ ಮರಳಿದ್ದಾರೆ.
ಬಿಜೆಪಿ-ಜಾತ್ಯತೀತ ಜನತಾ ದಳ ಮೈತ್ರಿಯನ್ನು ಅವರ ಕಾರ್ಯಕರ್ತರೇ ವಿರೋಧಿಸಿದ್ದಾರೆ, ಉತ್ತರ ಭಾರತದಲ್ಲೂ ಸಾಕಷ್ಟು ಜನ ಬಿಜೆಪಿ ತೊರೆಯುತ್ತಿದ್ದಾರೆ, ಈ ಬಾರಿ ಎನ್‌ಡಿಎ ಮೈತ್ರಿಕೂಟ 400 ಸ್ಥಾನ ಗೆಲ್ಲುತ್ತದೆ ಎನ್ನುವ ವಿಶ್ವಾಸ ಇದ್ದಿದ್ದರೆ ಇತರೇ ಪಕ್ಷಗಳ ನಾಯಕರನ್ನು ಬಿಜೆಪಿಗೆ ಸೇರಿಸಿಕೊಳ್ಳುತ್ತಿರಲಿಲ್ಲ, ತಮಗೆ ಬಂದಿರುವ ಮಾಹಿತಿ ಪ್ರಕಾರ ಎನ್‌ಡಿಎ ದೇಶದಲ್ಲಿ 200 ಸ್ಥಾನಗಳನ್ನೂ ಗೆಲ್ಲುವುದಿಲ್ಲ. ಕೇರಳ, ತೆಲಂಗಾಣ ಸೇರಿದಂತೆ ದಕ್ಷಿಣ ಭಾರತದಲ್ಲಿ ಒಂದಂಕಿ ದಾಟುವುದಿಲ್ಲ ಎಂದರು.