ಬೆಂಗಳೂರು:ಕರ್ನಾಟಕ ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಎರಡು ಹಂತಗಳಲ್ಲಿ ನಾಮಪತ್ರ ಸಲ್ಲಿಕೆ ಕಾರ್ಯ ಪೂರ್ಣಗೊಂಡಿದ್ದು ಇನ್ನು ಮತದಾನವಷ್ಟೇ ಬಾಕಿ ಉಳಿದಿದೆ.
ಈಗಾಗಲೇ ಹಳೆಯ ಮೈಸೂರು ಭಾಗದ 14 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಬಿರುಸಿನ ಚುನಾವಣಾ ಪ್ರಚಾರವನ್ನು ಅಭ್ಯರ್ಥಿಗಳು ಕೈಗೊಂಡಿದ್ದು, ಏಪ್ರಿಲ್ 26ರಂದು ಮತದಾನ ಜರುಗಲಿದೆ.
ನಾಮಪತ್ರ ಸಲ್ಲಿಕೆ ಕಾರ್ಯ ಪೂರ್ಣ
ದಾವಣಗೆರೆ, ಶಿವಮೊಗ್ಗ, ಉತ್ತರ ಕನ್ನಡ, ಹಾವೇರಿ, ಧಾರವಾಡ, ಬೆಳಗಾವಿ, ಚಿಕ್ಕೋಡಿ, ವಿಜಾಪುರ, ಬಾಗಲಕೋಟೆ, ಬೀದರ್, ಗುಲ್ಬರ್ಗ, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಾಮಪತ್ರ ಸಲ್ಲಿಕೆ ಕಾರ್ಯ ಪೂರ್ಣಗೊಂಡಿತು.
ಈ ಕ್ಷೇತ್ರಗಳ ನಾಮಪತ್ರ ಪರಿಶೀಲನೆ ಕಾರ್ಯ ಏಪ್ರಿಲ್ 20 ರಂದು ನಡೆಯಲಿದ್ದು, ನಾಮಪತ್ರ ಹಿಂತೆಗೆದುಕೊಳ್ಳಲು ಏಪ್ರಿಲ್ 22 ಕೊನೆಯ ದಿನವಾಗಿರುತ್ತದೆ.
ಮೇ 7ರಂದು ಮತದಾನ ನಡೆಯಲಿದ್ದು, ಜೂನ್ 4ರಂದು ಆಯಾ ಜಿಲ್ಲಾ ಕೇಂದ್ರಗಳಲ್ಲಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ.
ಪ್ರಭಾವಿ ಕುಟುಂಬದವರೇ ಕಣಕ್ಕೆ
ಎರಡನೇ ಹಂತದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಮೇಲ್ನೋಟಕ್ಕೆ ಜಿದ್ದಾಜಿದ್ದಿ ಕಂಡು ಬಂದಿದೆ. ಈ ಕ್ಷೇತ್ರಗಳಲ್ಲಿ ಉಭಯ ಪಕ್ಷಗಳಿಂದಲೂ ಪ್ರಭಾವಿ ನಾಯಕರ ಕುಟುಂಬದವರೇ ಕಣಕ್ಕಿಳಿದಿದ್ದಾರೆ.
ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿರುವ ಎಸ್.ಎಸ್.ಮಲ್ಲಿಕಾರ್ಜುನ್ ತಮ್ಮ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಅವರನ್ನು ದಾವಣಗೆರೆಯಿಂದಲೂ, ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಬೆಳಗಾವಿಯಿಂದ, ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕ ಜಾರಕಿಹೊಳಿ ಚಿಕ್ಕೋಡಿಯಿಂದಲೂ, ಶಿವಾನಂದ ಪಾಟೀಲ್ ಪುತ್ರಿ ಸಂಯುಕ್ತ ಪಾಟೀಲ್ ಬಾಗಲಕೋಟೆಯಿಂದಲೂ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಾಕೃಷ್ಣ ಗುಲ್ಬರ್ಗದಿಂದ, ಈಶ್ವರಖಂಡ್ರೆ ಪುತ್ರ ಸಾಗರ್ ಖಂಡ್ರೆ ಬೀದರ್‌ನಿಂದ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದಾರೆ.
ಇನ್ನು ಬಿಜೆಪಿಯಿಂದ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್ ಬೆಳಗಾವಿಯಿಂದ, ಬಸವರಾಜ ಬೊಮ್ಮಾಯಿ ಹಾವೇರಿಯಿಂದಲೂ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರ‍್ಪಪ ಪುತ್ರ ಬಿ.ವೈ.ರಾಘವೇಂದ್ರ ಶಿವಮೊಗ್ಗದಿಂದ, ಮಾಜಿ ಉಪಮುಖ್ಯಮಂತ್ರಿ ಬಿ.ಶ್ರೀರಾಮುಲು ಬಳ್ಳಾರಿಯಿಂದ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಧಾರವಾಡದಿಂದ, ಮತ್ತೊಬ್ಬ ಮಂತ್ರಿ ಭಗವಂತ ಖೂಬಾ ಬೀದರ್‌ನಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಪ್ರಭಾವಿಗಳ ಸೆಣೆಸಾಟ
ಮೊದಲನೇ ಹಂತಕ್ಕಿಂತ ಎರಡನೇ ಹಂತದಲ್ಲಿ ಪ್ರಭಾವಿಗಳ ಮುಂದೆ ಪ್ರಭಾವಿಗಳೇ ಸೆಣೆಸಾಟಕ್ಕೆ ಇಳಿದಿದ್ದಾರೆ.
ಕೇಂದ್ರ ಮತ್ತು ರಾಜ್ಯದ ಪ್ರಭಾವೀ ಮುಖಂಡರು ಮೊದಲ ಹಂತದ 14 ಕ್ಷೇತ್ರಗಳಲ್ಲೇ ಚುನಾವಣಾ ಪ್ರಚಾರ ಕೈಗೊಂಡಿದ್ದು, ಈ ಭಾಗದಲ್ಲಿ ಏಪ್ರಿಲ್ 24ರ ಸಂಜೆಗೆ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ.
ತದನಂತರ ಈ ಎಲ್ಲಾ ಮುಖಂಡರು ಎರಡನೇ ಹಂತದಲ್ಲಿ ನಡೆಯುತ್ತಿರುವ ಚುನಾವಣಾ ಕಡೆ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ.