ಬೆಂಗಳೂರು:ಬಂಡವಾಳಶಾಹಿ ಪರ ಇರುವ ಬಿಜೆಪಿ ಆಡಳಿತವನ್ನು ಕಿತ್ತೊಗೆದು ರೈತರು, ಜನ ಸಾಮಾನ್ಯರ ಪರವಾದ ಕಾಂಗ್ರೆಸ್ ಬೆಂಬಲಿಸುವಂತೆ ಪ್ರಿಯಾಂಕ ಗಾಂಧಿ ಇಂದಿಲ್ಲಿ ಕರೆ ನೀಡಿದ್ದಾರೆ.
ಬೆಂಗಳೂರು ಮತ್ತು ಚಿತ್ರದುರ್ಗದಲ್ಲಿ ಪ್ರತ್ಯೇಕವಾಗಿ ಸಾರ್ವಜನಿಕ ಸಮಾವೇಶ ಹಾಗೂ ರೋಡ್ ಶೋ ನಡೆಸಿ, ಪಕ್ಷದ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರವನ್ನು ತಮ್ಮ ಭಾಷಣದುದ್ದಕ್ಕೂ ತರಾಟೆಗೆ ತೆಗೆದುಕೊಂಡ ಅವರು, ರೈತರ ಇಂದಿನ ಸ್ಥಿತಿಗತಿಯನ್ನು ಎಳೆಎಳೆಯಾಗಿ ಬಿಡಿಸಿಟ್ಟರು.
ಬಂಡವಾಳಶಾಹಿಗಳಿಗೆ ಹಾಸುಗಂಬಳಿ
ಭ್ರಷ್ಟಾಚಾರ ನಿಗ್ರಹ ಹೆಸರಿನಲ್ಲಿ ಪ್ರತಿಪಕ್ಷಗಳನ್ನು ದಮನ ಮಾಡಿ ಬಂಡವಾಳಶಾಹಿಗಳಿಗೆ ಹಾಸುಗಂಬಳಿ ಹಾಕಿ ರೈತರನ್ನು ಕಡೆಗಣಿಸುತ್ತಿದ್ದಾರೆ.
ಇವರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರೈತರು ಮತ್ತು ಜನಸಾಮಾನ್ಯರ ಸ್ಥಿತಿ ಚಿಂತಾಜನಕವಾಗಿದೆ, ಅದರಲ್ಲೂ ಕೃಷಿಕ ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ.
ಇಂತಹ ಕ್ಲಿಷ್ಟ ಸ್ಥಿತಿಯಲ್ಲೂ ಕೃಷಿ ಸಾಲ ಮನ್ನಾ ಮಾಡುವ ಸೌಜನ್ಯವನ್ನು ಪ್ರಧಾನಿ ತೋರಿಲ್ಲ, ಅದರ ಬದಲು ತಮ್ಮ ಸ್ನೇಹಿತರು ಹಾಗೂ ಬಂಡವಾಳಶಾಹಿಗಳ ಲಕ್ಷಾಂತರ ಕೋಟಿ ರೂ.ಗಳನ್ನು ಮನ್ನಾ ಮಾಡಿ ಜನಸಾಮಾನ್ಯರನ್ನು ತುಳಿಯುತ್ತಿದ್ದಾರೆ.
ಕಾಂಗ್ರೆಸ್‌ಗೆ ಅಧಿಕಾರ ನೀಡಿ
ಇಂತಹ ಆಡಳಿತ ರಾಷ್ಟ್ರಕ್ಕೆ ಬೇಕೆ ಎಂದು ಬಿಜೆಪಿ ಮತ್ತು ಕೇಂದ್ರ ಸರ್ಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು ಕಾಂಗ್ರೆಸ್‌ಗೆ ಅಧಿಕಾರ ನೀಡಿ ಎಂದು ಮನವಿ ಮಾಡಿದರು.
ರೈತರ ಶ್ರಮಕ್ಕೆ ಈ ಸರ್ಕಾರದಲ್ಲಿ ಬೆಲೆ ಸಿಗುತ್ತಿಲ್ಲ, ಅವರು ಬೆಳೆದ ಬೆಳೆಗೆ ಬೆಲೆ ಇಲ್ಲ, ಅದರೆ ಮಾರುಕಟ್ಟೆಯಲ್ಲಿ ದಿನ ಬಳಕೆ ವಸ್ತುಗಳ ದರ ಗಗನ ಮುಟ್ಟಿವೆ, ಇದು ಇವರ ಸಾಧನೆ.
ಕಾಂಗ್ರೆಸ್ ನುಡಿದಂತೆ ನಡೆಯುತ್ತದೆ, ಈಗಾಗಲೇ ಕರ್ನಾಟಕದಲ್ಲಿ ನಿಮಗೆ ಅನುಭವವಾಗಿದೆ, ರಾಷ್ಟ್ರದಲ್ಲಿ ನಮ್ಮನ್ನು ಅಧಿಕಾರಕ್ಕೆ ತಂದರೆ ಮೊದಲು ಕೃಷಿ ಸಾಲ ಮನ್ನಾ ಮಾಡಿ ರೈತರ ಬದುಕನ್ನು ಹಸನು ಮಾಡುತ್ತೇವೆ ಎಂದರು.
ಇದಕ್ಕೂ ಮುನ್ನ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿ ಇಡೀ ದೇಶದ ರೈತರ 76 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದರು.
ಮೋದಿ ಪ್ರಧಾನಿಯಾಗಿ ಅತ್ಯಂತ ಶ್ರೀಮಂತರ 16 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದರು. ಈಗ ಹೇಳಿ ಮೋದಿ ಯಾರ ಪರ ಎಂದು ಪ್ರಶ್ನಿಸಿದರು.
ಅಭಿವೃದ್ಧಿಯಲ್ಲಿ ಸಂಪೂರ್ಣ ವಿಫಲ
ಮೋದಿ ಹತ್ತು ವರ್ಷ ಪ್ರಧಾನಿಯಾಗಿ ಭಾರತೀಯರಲ್ಲಿ ಭ್ರಮೆ ಹುಟ್ಟಿಸಿದ್ದು ಬಿಟ್ಟರೆ ಅಭಿವೃದ್ಧಿಯಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ, ಪ್ರತೀ ಬಾರಿ ಭಾರತೀಯರನ್ನು ನಂಬಿಸಿ ಮೋಸ ಮಾಡೋದು ಮೋದಿಯವರಿಗೆ ರೂಢಿಯಾಗಿದೆ ಎಂದರು.
ರೈತರ ಆದಾಯ ದುಪ್ಪಟ್ಟು ಮಾಡ್ತೀವಿ ಅಂದೋರು ರೈತರ ಖರ್ಚು ಮೂರು ಪಟ್ಟು ಮಾಡಿಟ್ಟಿದ್ದಾರೆ.
ಮೋದಿ ಬಂದ ಮೇಲೆ ಜನ ಸಾಮಾನ್ಯರ, ಮಧ್ಯಮ ವರ್ಗದವರ ಮೇಲೆ ತೆರಿಗೆ ಭಾರ ಹೆಚ್ಚಾಯಿತು. ಉದ್ಯಮಿಗಳ ತೆರಿಗೆ ಭಾರ ಕಡಿಮೆ ಆಯಿತು. ಆದ್ದರಿಂದ ಮೋದಿ ಜನದ್ರೋಹಿ ತಾನೆ ಎಂದು ಪ್ರಶ್ನಿಸಿದರು.
ಹೀಗೆ ಮೋದಿಯವರ ವೈಫಲ್ಯಗಳನ್ನು ಪಟ್ಟಿ ಮಾಡುತ್ತಾ ಹೋದರೆ ಹನುಮಂತನ ಬಾಲದಂತೆ ಬೆಳೆಯುತ್ತದೆ ಎಂದರು.