ಬೆಂಗಳೂರು:ಬರ ಪರಿಹಾರ ಹಣ ನೀಡದ ಕೇಂದ್ರದ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಮಂತ್ರಿಮಂಡಲದ ಸದಸ್ಯರು ಇಂದಿಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿದ್ದಲ್ಲದೆ, ಕರ್ನಾಟಕಕ್ಕೆ ಹಣ ಬಿಡುಗಡೆ ಮಾಡದೆ ನೀವು ರಾಜ್ಯ ಪ್ರವೇಶ ಮಾಡಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅಮಿತ್ ಷಾ ಹಾಗೂ ನಿರ್ಮಲಾ ಸೀತಾರಾಮನ್ ಅವರನ್ನು ಒತ್ತಾಯಿಸಿದ್ದಾರೆ.
ಸುಪ್ರೀಂ ಕೋರ್ಟ್ ಮಧ್ಯೆ ಪ್ರವೇಶಿಸಿದ ನಂತರ ಕೇಂದ್ರ ಸರ್ಕಾರ ರೈತರ ಬೆಳೆಗೆ ಪರಿಹಾರ ನೀಡುವುದಾಗಿ ಪ್ರಕಟಿಸಿದ ನಂತರವೂ ಮುಖ್ಯಮಂತ್ರಿ ಅವರು, ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸಿದರು.
ಇದುವರೆಗೂ ನಯಾಪೈಸೆ ಬಂದಿಲ್ಲ
ಪ್ರತಿಭಟನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಬಹುಭಾಗ ಬರದಿಂದ ತತ್ತರಿಸಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ, ಬರದಿಂದ 18,172 ಕೋಟಿ ರೂ. ಬೆಳೆ ಹಾಗೂ ಬರ ಪರಿಹಾರ ನೀಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಿದರೂ ಇದುವರೆಗೂ ಒಂದು ನಯಾಪೈಸೆ ಬಂದಿಲ್ಲ ಎಂದರು.
ಕೇಂದ್ರದ ಮಲತಾಯಿ ಧೋರಣೆ ನಡುವೆಯೂ ನಾವು ಬರವನ್ನು ಸಮರ್ಥವಾಗಿ ಎದುರಿಸಿದ್ದೇವೆ, ಎಲ್ಲಿಯೂ ಕುಡಿಯುವ ನೀರು, ಮೇವಿಗೆ ತೊಂದರೆ ಆಗಿಲ್ಲ.
ಕೂಲಿಗಾಗಿ ಕಾರ್ಮಿಕರು ಗುಳೇ ಹೋಗದಂತೆ ನೋಡಿಕೊಂಡಿದ್ದೇವೆ, ಇದರ ನಡುವೆಯೇ 34 ಲಕ್ಷ ರೈತರಿಗೆ ತಲಾ 2,000 ರೂ.ವರೆಗೂ ಮೊದಲ ಹಂತದ ಪರಿಹಾರ ಹಣವನ್ನು ನೀಡಿದ್ದೇವೆ.
ಕೇಂದ್ರದ ಗಮನಕ್ಕೆ ತರಲಾಗಿತ್ತು
ಕಳೆದ ಏಳು ತಿಂಗಳ ಹಿಂದೆಯೇ ರಾಜ್ಯದ ಬರ ಪರಿಸ್ಥಿತಿಯನ್ನು ಕೇಂದ್ರದ ಗಮನಕ್ಕೆ ತರಲಾಗಿತ್ತು, ತದನಂತರ ಕೃಷಿ ಅಧಿಕಾರಿಗಳು ರಾಜ್ಯಕ್ಕೆ ಭೇಟಿ ನೀಡಿ ಪರಿಶೀಲಿಸಿ ವರದಿ ನೀಡಿದ್ದಾರೆ, ಇಷ್ಟಾದರೂ ನಮಗೆ ಯಾವುದೇ ಹಣ ಬಿಡುಗಡೆ ಮಾಡಲಿಲ್ಲ.
ನಾನೇ ಖುದ್ದಾಗಿ ಪ್ರಧಾನಿ ಅವರನ್ನು, ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಸಂದರ್ಭದಲ್ಲೂ ತಕ್ಷಣವೇ ಸಭೆ ಮಾಡಿ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು. ಅವರ ಭರವಸೆ ಏಳು ತಿಂಗಳಾದರೂ ಈಡೇರದ ಕಾರಣ ನಾವು ಕಾನೂನು ಸಮರಕ್ಕೆ ಇಳಿಯಬೇಕಾಯಿತು.
ಚುನಾವಣೆಗೆ ಮಾತ್ರ ರಾಜ್ಯ ನೆನಪಾಗುತ್ತದೆ
ಪ್ರಧಾನಿ ಆಗಲೇ, ಬಿಜೆಪಿ ಮುಖಂಡರಾಗಲೀ ಚುನಾವಣಾ ಸಂದರ್ಭದಲ್ಲಿ ಮಾತ್ರ ಅವರಿಗೆ ರಾಜ್ಯದ ನೆನಪಾಗುತ್ತದೆ, ಅವರುಗಳು ಯಾವ ಮುಖ ಹೊತ್ತುಕೊಂಡು ಮತಯಾಚನೆ ಮಾಡುತ್ತಾರೆ ಎಂದು ಪ್ರಶ್ನಿಸಿದರು.
ರಾಜ್ಯಕ್ಕೆ ಅನ್ಯಾಯ ಮಾಡಿರುವ ಈ ಮುಖಂಡರಿಗೆ ಗೋಬ್ಯಾಕ್ ಎಂಬ ಘೋಷಣೆ ಮಾಡಿದ್ದೇವೆ, ಅವರು ಕರ್ನಾಟಕಕ್ಕೆ ಬರುವ ಮೊದಲು ಹಣ ಬಿಡುಗಡೆ ಮಾಡಿ ನಂತರ ನಮ್ಮ ಜನರ ಮತ ಕೇಳಲಿ ಎಂದು ತಾಕೀತು ಮಾಡಿದರು.