ಬೆಂಗಳೂರು:ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಹೋದರ, ಸಂಸದ ಡಿ.ಕೆ.ಸುರೇಶ್ ಕಣಕ್ಕಿಳಿದಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಚುನಾವಣೆ ಕೇಂದ್ರ ಅರೆಸೇನಾ ಪಡೆ ಕಣ್ಗಾವಲಿನಲ್ಲಿ ನಡೆಯಲಿದೆ.
ಡಿ.ಕೆ.ಸುರೇಶ್ ವಿರುದ್ಧ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಅಳಿಯ ಹಾಗೂ ಹೃದಯ ತಜ್ಞ ಡಾ. ಮಂಜುನಾಥ್ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.
ಅತ್ಯಂತ ಬಿಗಿ ಬಂದೋಬಸ್ತ್
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮತದಾನ ಏಪ್ರಿಲ್ 26ರ ಶುಕ್ರವಾರದಂದು ನಡೆಯಲಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಕೇಂದ್ರ ಚುನಾವಣಾ ಆಯೋಗ ಕ್ಷೇತ್ರದಲ್ಲಿ ಅತ್ಯಂತ ಬಿಗಿ ಬಂದೋಬಸ್ತ್ ಕೈಗೊಂಡಿದೆ.
ಈ ಕ್ಷೇತ್ರದ ವ್ಯಾಪ್ತಿಯಲ್ಲಿ ಚುನಾವಣೆ ಮುಗಿಯುವವರೆಗೆ ಏಳು ಅರೆಸೇನಾ ತುಕಡಿ, ನೆರೆ ರಾಜ್ಯದಿಂದ ಬಂದಿರುವ ವಿಶೇಷ ಪೊಲೀಸ್ ದಳ ಹಾಗೂ ಸ್ಥಳೀಯ ಪೊಲೀಸರು ಕಾರ್ಯನಿರ್ವಹಿಸಲಿದ್ದಾರೆ.
ಕಿಡಿಗೇಡಿಗಳು ಮತ್ತು ಸಮಾಜ ಘಾತುಕ ಶಕ್ತಿಗಳನ್ನು ಎಚ್ಚರಿಸಲು ಮತ್ತು ಮತದಾರರಲ್ಲಿ ಧೈರ್ಯ ತುಂಬಲು ಅರೆಸೇನಾ ಪಡೆ ಕ್ಷೇತ್ರದಲ್ಲಿ ಪಥ ಸಂಚಲನ ನಡೆಸಲಿದೆ.
ಕರ್ನಾಟಕ-ತಮಿಳುನಾಡು ಗಡಿ ಕ್ಷೇತ್ರ
ಕರ್ನಾಟಕ ಮತ್ತು ತಮಿಳುನಾಡಿನ ಗಡಿಗೆ ಈ ಕ್ಷೇತ್ರ ಹೊಂದಿಕೊಂಡಿದ್ದು, ಗಡಿಭಾಗದ ಮತಗಟ್ಟೆಗಳಲ್ಲಿ ಅಕ್ರಮ ಮತದಾನ ನಡೆಯಲಿದೆ ಎಂಬ ದೂರು ಬಂದಿರುವ ಹಿನ್ನೆಲೆಯಲ್ಲಿ ಆಯೋಗ ಕೆಲವು ಕಠಿಣ ಕ್ರಮಕೈಗೊಂಡಿದೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯಲ್ಲಿ 2,829 ಮತಗಟ್ಟೆಗಳಿದ್ದು, ಈ ಎಲ್ಲಾ ಮತಗಟ್ಟೆಯಲ್ಲಿ ನಡೆಯುವ ಚಲನ ವಲನವನ್ನು ಜಿಲ್ಲಾ ಚುನಾವಣಾಧಿಕಾರಿ ಹಾಗೂ ರಾಜ್ಯ ಮುಖ್ಯಚುನಾವಣಾಧಿಕಾರಿಗಳು ವೀಕ್ಷಿಸುವಂತಹ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ.
ನಕಲಿ ಮತದಾನಕ್ಕೆ ಯತ್ನ ಹಾಗೂ ಕೆಲವು ರಾಜಕೀಯ ಮುಖಂಡರು ದೌರ್ಜನ್ಯ ಮತ್ತು ಆಮಿಷಗಳನ್ನು ಒಡ್ಡುತ್ತಾರೆಂಬ ಹಿನ್ನೆಲೆಯಲ್ಲಿ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.
14 ಕ್ಷೇತ್ರಗಳಲ್ಲೂ ಮುನ್ನೆಚ್ಚರಿಕಾ ಕ್ರಮ
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ರಾಜ್ಯ ಮುಖ್ಯಚುನಾವಣಾಧಿಕಾರಿ ಮನೋಜ್‌ಕುಮಾರ್ ಮೀನಾ, ಶುಕ್ರವಾರ ನಡೆಯುತ್ತಿರುವ ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಬಿಗಿಬಂದೋಬಸ್ತ್ ಹಾಗೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಜಿಲ್ಲಾ ಚುನಾವಣಾಧಿಕಾರಿ ಹಾಗೂ ನಮ್ಮ ವಿಶೇಷ ವೀಕ್ಷಕರು ನೀಡಿರುವ ವರದಿ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಅತಿ ಹೆಚ್ಚು ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ಉಳಿದ ಕ್ಷೇತ್ರಗಳಿಗಿಂತ ಹೆಚ್ಚಿನದಾಗಿರುತ್ತದೆ ಎಂದು ಮಾಹಿತಿ ನೀಡಿದರು.
ಕ್ಷೇತ್ರದಲ್ಲಿ ವಿಶೇಷ ವೀಕ್ಷಕರ ಜೊತೆಗೆ ಮತಗಟ್ಟೆಯಲ್ಲಿ ನಡೆಯುವ ಎಲ್ಲಾ ಚಲನ ವಲನಗಳನ್ನು ನೋಡುವ ವ್ಯವಸ್ಥೆ ಕಲ್ಪಿಸಲಾಗಿದೆ.
ಅಧಿಕಾರಿಗಳ ವರದಿ ಆಧರಿಸಿ ಕ್ರಮ
ರಾಜಕೀಯ ಪಕ್ಷ ನೀಡಿರುವ ದೂರಿನ ಆಧಾರದ ಮೇಲೆ ಈ ಕ್ರಮಗಳನ್ನು ಕೈಗೊಂಡಿಲ್ಲ, ಅಧಿಕಾರಿಗಳು ನೀಡಿರುವ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗಿದೆ ಎಂದರು.
ಕಾಂಗ್ರೆಸ್ ವಶದಲ್ಲಿರುವ ಈ ಕ್ಷೇತ್ರವನ್ನು ತನ್ನ ತೆಕ್ಕೆಗೆ ಪಡೆಯಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ, ಎನ್‌ಡಿಎ ಮೈತ್ರಿಕೂಟದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸಲಹೆ ನೀಡಿ ಡಾ.ಮಂಜುನಾಥ್ ಅವರನ್ನು ಬಿಜೆಪಿ ವರಿಷ್ಠರೇ ಸುರೇಶ್ ವಿರುದ್ಧ ಚುನಾವಣಾ ಸಂಘರ್ಷಕ್ಕೆ ಇಳಿಸಿದ್ದಾರೆ.
ಚುನಾವಣಾ ಪ್ರಕ್ರಿಯೆ ಆರಂಭಗೊಳ್ಳುವ ಮುನ್ನವೇ ಕಾಂಗ್ರೆಸ್ ಅಭ್ಯರ್ಥಿ ಮತದಾರರ ಓಲೈಕೆಗೆ ಭಾರೀ ಆಮಿಷಗಳನ್ನು ಮತ್ತು ಗಿಫ್ಟ್ ಕೂಪನ್‌ಗಳನ್ನು ವಿತರಿಸುತ್ತಿದ್ದಾರೆ.
ಅಲ್ಲದೇ ಪ್ರತಿಪಕ್ಷಗಳ ಕಾರ್ಯಕರ್ತರ ಮೇಲೆ ಮಾನಸಿಕ ಮತ್ತು ದೈಹಿಕ ಹಲ್ಲೆಗಳು ನಡೆಯುತ್ತಿವೆ, ಸ್ಥಳೀಯ ಜಿಲ್ಲಾಡಳಿತ ಅವರ ಜೊತೆ ಕೈಜೋಡಿಸಿದೆ ಎಂದು ದೇವೇಗೌಡರು ಮತ್ತು ಕುಮಾರಸ್ವಾಮಿ ಕೇಂದ್ರ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು ನೀಡಿದ್ದರು.
ಕೇಂದ್ರದಿಂದಲೇ ವೀಕ್ಷಕರು
ದೂರನ್ನು ರಾಜ್ಯ ಮುಖ್ಯಚುನಾವಣಾಧಿಕಾರಿಗೆ ರವಾನೆ ಮಾಡಿ ಮುನ್ನಚ್ಚರಿಕೆ ಕೈಗೊಳ್ಳುವಂತೆ ಸೂಚಿಸಿದ್ದಲ್ಲದೆ ಕೇಂದ್ರದಿಂದಲೇ ವೀಕ್ಷಕರನ್ನು ಕಳುಹಿಸಿದ್ದರು.
ಅವರು ನೀಡಿದ ವರದಿ ಆಧಾರದ ಮೇಲೆ ಕ್ಷೇತ್ರದ ವ್ಯಾಪ್ತಿಗೆ ಬರುವ 2,829 ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ.
ಅಲ್ಲದೇ ಸೂಕ್ಷ್ಮ ಕ್ಯಾಮೆರಾಗಳನ್ನು ಅಳವಡಿಸಿ ಕ್ಷೇತ್ರದ ಯಾವುದೇ ಮತಗಟ್ಟೆಯಲ್ಲಿ ನಡೆಯುವ ಚಲನ ವಲನವನ್ನು ಜಿಲ್ಲಾ ಚುನಾವಣಾಧಿಕಾರಿ ಹಾಗೂ ರಾಜ್ಯದ ಮುಖ್ಯಚುನಾವಣಾಧಿಕಾರಿ ನೇರವಾಗಿ ವೀಕ್ಷಿಸಬಹುದಾಗಿದೆ.
ಯಾವುದೇ ಅಹಿತಕರ ಘಟನೆ ಇಲ್ಲವೇ ನಕಲಿ ಮತದಾನ ನಡೆದರೆ ತಕ್ಷಣವೇ ಹಿರಿಯ ಅಧಿಕಾರಿಗಳು ಕ್ರಮಕೈಗೊಳ್ಳುವ ವ್ಯವಸ್ಥೆ ಮಾಡಲಾಗಿದೆ.