ಬೆಂಗಳೂರು:ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಯುವರಾಜ ಯದುವೀರ ಕೃಷ್ಣದತ್ತ ಒಡೆಯರ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದ ಡಿ.ಕೆ.ಸುರೇಶ್ ಸೇರಿದಂತೆ 247 ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ಮತದಾರರು ಶುಕ್ರವಾರ ಬರೆಯಲಿದ್ದಾರೆ.
ಹಳೆ ಮೈಸೂರು ಭಾಗದ 14 ಲೋಕಸಭಾ ಕ್ಷೇತ್ರಗಳಿಗೆ ನಾಳೆ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಮತದಾನಕ್ಕೆ ಅವಕಾಶವಿದೆ.
ಮುಕ್ತ ಹಾಗೂ ಶಾಂತಿಯುತ ಮತದಾನಕ್ಕೆ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡುಕೊಂಡಿರುವುದಲ್ಲದೆ, ಈಗಾಗಲೇ ಮತಗಟ್ಟೆಗಳಲ್ಲಿ ಅಧಿಕಾರಿಗಳು ಬೀಡುಬಿಟ್ಟಿದ್ದಾರೆ.
ಅತ್ಯಂತ ಬಿಗಿ ಭದ್ರತೆ
ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆಯಾಗಿ ಅರೆಸೇನಾ ಪಡೆ, ನೆರೆ ರಾಜ್ಯ ಪೊಲೀಸರು ಜೊತೆಗೆ ನಮ್ಮ ಪೊಲೀಸರು ಹಾಗೂ ಹೋಂಗಾರ್ಡ್ ಸಿಬ್ಬಂದಿಯನ್ನು ಬಳಕೆ ಮಾಡಿಕೊಳ್ಳುತ್ತಿದೆ.
ಆಡಳಿತಾರೂಢ ಕಾಂಗ್ರೆಸ್ ಹಾಗೂ ಎನ್‌ಡಿಎ ಮೈತ್ರಿಕೂಟದ ಬಿಜೆಪಿ-ಜೆಡಿಎಸ್ 14 ಕ್ಷೇತ್ರಗಳಲ್ಲೂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಪ್ರತಿನಿಧಿಸುವ ಕ್ಷೇತ್ರಗಳಿಗೂ ಚುನಾವಣೆ ನಡೆಯುತ್ತಿದೆ.
ಹೊಸ ಮುಖಗಳಿಗೆ ಅವಕಾಶ
ಸಿದ್ದರಾಮಯ್ಯ ಪ್ರತಿನಿಧಿಸುವ ಮೈಸೂರು-ಕೊಡಗು, ಶಿವಕುಮಾರ್ ಪ್ರತಿನಿಧಿಸುವ ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಬಿಜೆಪಿ ವರಿಷ್ಠರು ಪ್ರತಿಷ್ಠೆಯಾಗಿ ತೆಗೆದುಕೊಂಡು ಎರಡೂ ಕ್ಷೇತ್ರಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಹೊಸ ಮುಖಗಳಿಗೆ ಅವಕಾಶ ಮಾಡಿಕೊಟ್ಟಿದೆ.
ಮೈಸೂರು-ಕೊಡಗಿನಲ್ಲಿ ಹಾಲಿ ಸಂಸದ ಪ್ರತಾಪ್ ಸಿಂಹ ಅವರ ಬದಲು ರಾಜಮನೆತನದ ಯುವರಾಜನಿಗೆ ಟಿಕೆಟ್ ನೀಡಿದ್ದರೆ, ಬೆಂಗಳೂರು ಗ್ರಾಮಾಂತರದಲ್ಲಿ ಹೃದಯ ತಜ್ಞ ಡಾ.ಮಂಜುನಾಥ್ ಅವರನ್ನು ಕಣಕ್ಕಿಳಿಸಿದೆ.
ಈ ಎರಡೂ ಕ್ಷೇತ್ರಗಳು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರುಗಳಿಗೆ ಪ್ರತಿಷ್ಠೆಯಾಗಿದೆ. ಅವರ ಪ್ರತಿಷ್ಠೆಯನ್ನು ಬಿಜೆಪಿಯೂ ತೆಗೆದುಕೊಂಡಿದೆ. ಹೀಗಾಗಿ ರಾಜಕೀಯ ಗಂಧ-ಗಾಳಿ ಅರಿಯದ ಸಮಾಜ ಸೇವೆಯಲ್ಲಿರುವ ಅವರನ್ನು ಕರೆತಂದು ಕಣಕ್ಕಿಳಿಸಿದೆ.
ಬಿಜೆಪಿಯ ಈ ಹೊಸ ಪ್ರಯೋಗಕ್ಕೆ ನಾಳೆ ಮತದಾರರು ಯಾವ ರೀತಿ ಸ್ಪಂದಿಸುತ್ತಾರೋ ಕಾದು ನೋಡಬೇಕು.
ಕೇಂದ್ರ ರಾಜಕಾರಣಕ್ಕೆ
ರಾಜ್ಯ ರಾಜಕೀಯದಲ್ಲಿ ಇದ್ದ ಕುಮಾರಸ್ವಾಮಿ, ಕೇಂದ್ರ ರಾಜಕಾರಣಕ್ಕೆ ತೆರಳಲು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.
ಉಡುಪಿ-ಚಿಕ್ಕಮಗಳೂರು ಪ್ರತಿನಿಧಿಸುತ್ತಿದ್ದ ಶೋಭಾ ಕರಂದ್ಲಾಜೆ ಬೆಂಗಳೂರು ಉತ್ತರದಿಂದ ಕಣಕ್ಕಿಳಿದು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಇವರ ಎದುರು ಐಐಎಂನ ಪ್ರೊ.ರಾಜುಗೌಡ ಕಾಂಗ್ರೆಸ್ ಅಭ್ಯರ್ಥಿ.
ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ವಿಜಾಪುರದಿಂದ ಚಿತ್ರದುರ್ಗ ಮೀಸಲು ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದಾರೆ.
ಮುಖ್ಯಮಂತ್ರಿ ಪ್ರತಿಷ್ಠೆ ಕ್ಷೇತ್ರ
ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಮ್ಮ ಪುತ್ರ ಸುನೀಲ್ ಬೋಸ್ ಅವರನ್ನು ಚಾಮರಾಜನಗರ ಮೀಸಲು ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಇಳಿಸಿದ್ದಾರೆ. ವಿಶೇಷವೆಂದರೆ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣಾ ಕ್ಷೇತ್ರವು ಮೈಸೂರು ಜಿಲ್ಲೆಯಲ್ಲಿದ್ದರೂ, ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಆದ್ದರಿಂದ ಮುಖ್ಯಮಂತ್ರಿ ಅವರಿಗೆ ಈ ಕ್ಷೇತ್ರವೂ ಪ್ರತಿಷ್ಠೆಯಾಗಿದೆ.
ಬೆಂಗಳೂರು ಗ್ರಾಮಾಂತರದಲ್ಲಿ ಶಿವಕುಮಾರ್ ತಮ್ಮ ಸಹೋದರ ಸುರೇಶ್ ಅವರನ್ನು ನಾಲ್ಕನೇ ಬಾರಿಗೆ ಮರು ಆಯ್ಕೆ ಬಯಸಿ ಕಣಕ್ಕಿಳಿಸಿದ್ದಾರೆ.
ಕಳೆದ ಚುನಾವಣೆಯಲ್ಲಿ ಈ ಕ್ಷೇತ್ರ ಹೊರತುಪಡಿಸಿ ಕಾಂಗ್ರೆಸ್ ಯಾವುದೂ ಖಾತೆ ತೆರೆದಿರಲಿಲ್ಲ. ಆದ್ದರಿಂದ ಬಿಜೆಪಿ ಈ ಕ್ಷೇತ್ರವನ್ನು ವಶಪಡಿಸಿಕೊಳ್ಳಲು ಹೊಸ ಪ್ರಯೋಗ ನಡೆಸಿದೆ.
ಇದೇ ಮೊದಲ ಬಾರಿಗೆ ಬಿಜೆಪಿ ಮತ್ತು ಜೆಡಿಎಸ್ ಒಂದಾಗಿ ಆಡಳಿತಾರೂಢ ಕಾಂಗ್ರೆಸ್ ಅನ್ನು ನೇರ ಹಣಾಹಣಿಯಲ್ಲಿ ಎದುರಿಸುತ್ತಿದೆ, ಈ ಮೈತ್ರಿಗೆ ಮತದಾರರು ಯಾವ ರೀತಿ ಸ್ಪಂದಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.
ನೇರ ಹಣಾಹಣಿ
ಹದಿನಾಲ್ಕು ಕ್ಷೇತ್ರಗಳಲ್ಲೂ ಮೇಲ್ನೋಟಕ್ಕೆ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ನಡುವೆಯೇ ನೇರ ಹಣಾಹಣಿ ನಡೆದಿದೆ, ಇವರಲ್ಲಿ ಮತದಾರರ ಒಲವು ಯಾರ ಕಡೆ ಇದೆ ಎಂಬುದು ನಾಳೆ ನಿರ್ಧಾರವಾಗಲಿದೆ.
ಈ ಕ್ಷೇತ್ರಗಳಿಗೆ ಏಪ್ರಿಲ್ 26ರಂದು ಮತದಾನ ನಡೆದರೂ ಜೂನ್ 4ರವರೆಗೆ ಫಲಿತಾಂಶಕ್ಕೆ ಕಾಯಬೇಕಿದೆ.
ರಾಷ್ಟ್ರೀಯ ಪಕ್ಷಗಳಿಂದ ಕಣಕ್ಕಿಳಿದಿರುವ ಅಭ್ಯರ್ಥಿಗಳ ಪಟ್ಟಿ ಇಂತಿದೆ:-