ಬೆಂಗಳೂರು:ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 28 ಮತ್ತು 29 ರಂದು ರಾಜ್ಯದಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ಕೈಗೊಳ್ಳಲಿದ್ದಾರೆ.
ಮೊದಲ ಹಂತದ 14 ಕ್ಷೇತ್ರಗಳ ವ್ಯಾಪ್ತಿಯಲ್ಲಿ ಎರಡು ದಿನ ಚುನಾವಣಾ ಪ್ರಚಾರ ಕೈಗೊಂಡ ಮೋದಿ, ಎರಡನೇ ಹಂತದಲ್ಲಿ ಸತತವಾಗಿ ಆರು ಬೃಹತ್ ಸಮಾವೇಶಗಳನ್ನು ಉದ್ದೇಶಿಸಿ ಮತ ಯಾಚಿಸಲಿದ್ದಾರೆ.
ಲೋಕಸಭಾ ಚುನಾವಣಾ ಅಧಿಸೂಚನೆ ಹೊರಬೀಳುವುದಕ್ಕೂ ಮುನ್ನವೇ ಪ್ರಧಾನಿ ಅವರು ಶಿವಮೊಗ್ಗದಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದ್ದರು.
ಎರಡು ದಿನ ಪ್ರವಾಸ
ಏಪ್ರಿಲ್ 28 ರಂದು ಬೆಳಗ್ಗೆ 10 ಗಂಟೆಗೆ ಬೆಳಗಾವಿ, ಮಧ್ಯಾನ್ಹ 12 ಗಂಟೆಗೆ ಶಿರಸಿ, 2 ಗಂಟೆಗೆ ದಾವಣಗೆರೆ, ಸಂಜೆ 4 ಗಂಟೆಗೆ ಬಳ್ಳಾರಿಯಲ್ಲಿ, ಮರುದಿನ ಬೆಳಗ್ಗೆ 11 ಗಂಟೆಗೆ ಬಾಗಲಕೋಟೆಯಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಉಪಮುಖ್ಯಮಂತ್ರಿ ಶ್ರೀರಾಮುಲು, ಮಾಜಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ ಪಿ.ಸಿ.ಗದ್ದಿಗೌಡರ್, ಸಂಸದ ಸಿದ್ದೇಶ್ವರ್ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ್ ಕಣಕ್ಕಿಳಿದಿರುವ ಕ್ಷೇತ್ರಗಳಲ್ಲಿ ಪ್ರಧಾನಿ ಮೋದಿ ಚುನಾವಣಾ ಪ್ರಚಾರ ಮಾಡಲಿದ್ದಾರೆ.