ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಆಮಿಷ
ಬೆಂಗಳೂರು:ಇಂದು ಮತದಾನ ನಡೆಯುತ್ತಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಳೆದ ರಾತ್ರಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಪರವಾಗಿ ಗಿಫ್ಟ್ ಕೂಪನ್ಗಳನ್ನು ಹಂಚಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹೋದರ ಹಾಗೂ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಪರವಾಗಿ ಕ್ಯೂಆರ್ ಕೋಡ್ ಇರುವ ಕೂಪನ್ಗಳನ್ನು ಹಂಚಲಾಗಿದೆ.
ಪಾರದರ್ಶಕ, ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸುವಲ್ಲಿ ಚುನಾವಣಾ ಆಯೋಗ ಸಂಪೂರ್ಣ ವಿಫಲವಾಗಿದೆ ಎಂದರು.
ಶಾಸಕರ ಹೆಸರಿನಲ್ಲಿ ಗಿಫ್ಟ್ ಕೂಪನ್ಗಳು
ಮತದಾರರಿಗೆ ಆಮಿಷ ನೀಡಿರುವ ಕುರಿತಾದ ಗಿಫ್ಟ್ ಕೂಪನ್ಗಳ ಚಿತ್ರಗಳನ್ನು ಪ್ರದರ್ಶಿಸಿದ ಅವರು, ಕುಸುಮ ಹನುಮಂತಯ್ಯ, ಕುಣಿಗಲ್ ಶಾಸಕ ಡಾ.ರಂಗನಾಥ್, ಮಾಗಡಿ ಶಾಸಕ ಬಾಲಕೃಷ್ಣ, ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ರಾಮನಗರ ಶಾಸಕ ಇಕ್ಬಾಲ್ ಹುಸೇನ್, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೆಸರಿನಲ್ಲಿ ಕೂಪನ್ ಕಾರ್ಡುಗಳ ಹಂಚಿಕೆ ಮಾಡಲಾಗಿದೆ.
ಮತದಾರರಿಗೆ ಆಮಿಷ ಒಡ್ಡುವುದನ್ನು ತಡೆಯಲು ಪ್ರಯತ್ನಿಸಿದ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲಾಗಿದೆ.
ಈ ಹಿಂದೆ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿಯೂ ಇದೇ ರೀತಿ ಕೂಪನ್ ಕಾರ್ಡುಗಳನ್ನು ಕಾಂಗ್ರೆಸ್ ಹಂಚಿತ್ತು ಎಂದು ಅವರು ಟೀಕಿಸಿದರು.